ನವದೆಹಲಿ: ದೇಶದಾದ್ಯಂತ ಮುಸ್ಲಿಮರ ಪ್ರತಿಭಟನೆಯ ನಡುವೆಯೂ ವಕ್ಛ್ ಮಂಡಳಿ ತಿದ್ದುಪಡಿ ಮಸೂದೆಯನ್ನು ಇಂದು(ಏಪ್ರಿಲ್ ೨) ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ೨೦೨೪ರ ಆಗಸ್ಟ್ ೮ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಮಂಡಿಸಿದಾಗ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ಜಂಟಿ ಸಂಸದೀಯ ಮಂಡಳಿಯ ಪರಿಶೀಲನೆಗೆ ಕಳುಹಿಸಲಾಗಿತ್ತು. ಸಂಸದೀಯ ಸಮಿತಿಯಲ್ಲಿ ೪೪ ತಿದ್ದುಪಡಿಗಳನ್ನು ಮಂಡಿಸಲಾಗಿದ್ದು ಅವುಗಳಲ್ಲಿ ೧೪ ತಿದ್ದುಪಡಿಗಳಿಗೆ ಜಗದಂಬಿಕಾ ಪಾಲ್ ನೇತೃತ್ವದ ಈ ಸಮಿತಿ ಅಂಗೀಕರಿಸಿದೆ.
ಬುಧವಾರ ಈ ಮಸೂದೆಯನ್ನು ಚರ್ಚೆಗೆತ್ತಿಕೊಂಡ ನಂತರ ಮೂರು ದಿನಗಳ ಕಾಲ ಸಂಸದರು ಅಭಿಪ್ರಾಯ ಮಂಡಿಸಲಿದ್ದಾರೆ. ಒಟ್ಟು ೮ ಗಂಟೆಗಳ ಕಾಲ ಚರ್ಚೆ ನಡೆಯಲಿದೆ. ಅವಶ್ಯವಿದ್ದರೆ ಚರ್ಚೆಯ ಅವಧಿ ವಿಸ್ತರಿಸುವ ಕುರಿತು ಸಭಾಪತಿ ಓಂ ಬಿರ್ಲಾ ನೇತೃತ್ವದ ಸಂಸದೀಯ ಕಾರ್ಯವ್ಯವಹಾರ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಈ ಸಮಿತಿಯಲ್ಲಿ ಪ್ರಮುಖ ಪಕ್ಷಗಳ ನಾಯಕರು ಸದಸ್ಯರಿದ್ದಾರೆ.
ಕಾಂಗ್ರೆಸ್ ಸದಸ್ಯರಿಗೆ ಕಟ್ಟಪ್ಪಣೆ
ತನ್ಮಧ್ಯೆ ಕಾಂಗ್ರೆಸ್ ಪಾರ್ಟಿಯು ತನ್ನ ಎಲ್ಲಾ ಸದಸ್ಯರಿಗೆ ಮೂರು ದಿನಗಳ ಕಾಲ ಸದನದಲ್ಲಿ ಹಾಜರಿದ್ದು ಚರ್ಚೆಯಲ್ಲಿ ಭಾಗವಹಿಸುವಂತೆ
ಸೂಚಿಸಿದೆ.
ತಿದ್ದುಪಡಿಯಾದ ಮಸೂದೆಯನ್ನು ಈಗಾಗಲೇ ಕೇಂದ್ರ ಸಂಪುಟ ಅಂಗೀಕರಿಸಿದೆ. ಆದರೀಗ ಸಂಸತ್ತಿನಲ್ಲಿ ಅದನ್ನು ಅಂಗೀಕರಿಸುವುದು ಭಾರೀ ಸವಾಲಿನ ಕಾರ್ಯವಾಗಿದೆ. ಸಂಖ್ಯಾಬಲದ ದೃಷ್ಟಿಯಿಂದ ಆಡಳಿತಾರೂಢ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಈ ಮಸೂದೆಯನ್ನು ಸಾಕಷ್ಟು ಸದಸ್ಯರನ್ನು ಹೊಂದಿದೆ. ೫೪೨ ಸದಸ್ಯರ ಲೋಕಸಭೆಯಲ್ಲಿ ಎನ್‌ಡಿಎ ೨೯೩ ಸದಸ್ಯರನ್ನು ಹೊಂದಿದೆ.
ಟಿಡಿಪಿ, ಜೆಡಿಯು ನಿರ್ಣಾಯಕ
ಮುಸ್ಲಿಮರಿಂದ ಭಾರೀ ಬೆಂಬಲ ಗಿಟ್ಟಿಸಿರುವ ಎನ್‌ಡಿಎಯ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ತೆಲುಗುದೇಶಂ ಯಾವ ತೀರ್ಮಾನ ಕೈಗೊಳ್ಳುವುದೆಂಬುದನ್ನು ಕಾದುನೋಡಬೇಕಾಗಿದೆ. ಈ ಎರಡು ರಾಜಕೀಯ ಪಕ್ಷಗಳು ವಕ್ಛ್ ಮಸೂದೆಯ ವಿಚಾರದಲ್ಲಿ ಚೌಕಾಶಿ ಮಾಡಬಹುದೆಂದು ಹೇಳಲಾಗುತ್ತಿದೆ. ಬಿಹಾರದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಜೆಡಿಯು ನಾಯಕ ನಿತೀಶ್ ಕುಮಾರ್ ಮುಸ್ಲಿಮರ ಮತಗಳನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಮುಸ್ಲಿಮರನ್ನು ಓಲೈಸಲು ಇಫ್ತಾರ್‌ಕೂಟಗಳನ್ನು ಏರ್ಪಡಿಸಿದ್ದರು.
ಜೆಡಿಯುವಿನ ಶಾಸಕರೊಬ್ಬರು ಈ ಮಸೂದೆಯನ್ನು ಬಹಿರಂಗವಾಗಿ ವಿರೋಧಿಸಿರುವುದನ್ನು ಗಮನಿಸಿದರೆ, ಈ ಪಕ್ಷವು ಮಸೂದೆಗೆ ನಿರಾಯಾಸವಾಗಿ ಬೆಂಬಲ ನೀಡುವುದೆಂದು ನಿರೀಕ್ಷಿಸುವುದು ಅಸಾಧ್ಯ. ಅತ್ತ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಾರ್ಟಿ ವಕ್ಛ್ ಮಸೂದೆಗೆ ಬೆಂಬಲ ನೀಡುವುದೆಂದು ಹೇಳಿದ್ದರೂ ಮುಸ್ಲಿಮ್ ಸಮುದಾಯದ ಆಸ್ತಿಪಾಸ್ತಿಗಳನ್ನು ತೆಲುಗುದೇಶಂ ಸರ್ಕಾರ ಯಾವಾಗಲೂ ರಕ್ಷಿಸಿದೆ. ಭವಿಷ್ಯದಲ್ಲೂ ಅಂತಹ ಕ್ರಮ ಮುಂದುವರಿಯಲಿದೆ ಎಂದು ನಾಯ್ಡು ತಿಳಿಸಿದ್ದಾರೆ