ಬಣ್ಣಗಳ ಮೂಲಕ ಅತೀಂದ್ರಿಯ ಪ್ರಭಾವ

0
28

ಪ್ರಕೃತಿಯು ಗಿಡಮರಗಳು, ಹುಲ್ಲು, ಎಲೆಗಳಲ್ಲಿ ಹಸಿರು ಬಣ್ಣವನ್ನು ತುಂಬುವ ಮೂಲಕ ಸೃಷ್ಟಿಯನ್ನು, ವಾತಾವರಣವನ್ನು ಸದಾ ಹಿತಕರವಾಗಿಯೇ ಇರಿಸಿದೆ. ಸುಂದರವಾದ ನೀಲಿ ಆಕಾಶವು ಮನಸ್ಸಿನಲ್ಲಿ ಗೌರವ, ವಿಸ್ಮಯ ಮತ್ತು ಅಧ್ಯಾತ್ಮಿಕತೆಯ ಭಾವನೆಗಳನ್ನು ಹುಟ್ಟುಹಾಕುತ್ತದೆ. ಪ್ರಕೃತಿಯ ಎಲ್ಲಾ ಅದ್ಭುತ ಪ್ರಕ್ರಿಯೆಗಳಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಗಡಿಯಾರದ ಲೋಲಕದಂತೆ ಎಂದಿಗೂ ಅಂತ್ಯಗೊಳ್ಳದ ಸರಣಿಯಲ್ಲಿ ಕಾರಣ ಪರಿಣಾಮವಾಗುವ ಮತ್ತು ಪರಿಣಾಮ ಕಾರಣವಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆ'ಯ ಮಹಾನ್ ತತ್ವದ ಅನೇಕ ಪುರಾವೆಗಳನ್ನು ಕಾಣಬಹುದು. ಮಾನಸಿಕ ಸ್ಥಿತಿಗಳು ಮತ್ತು ಬಣ್ಣಗಳ ಅತೀಂದ್ರಿಯ ಸಂಬಂಧದಲ್ಲಿ ಈ ತತ್ವವು ಪರಿಣಾಮ ಬೀರುತ್ತದೆ. ಅಂದರೆ; ಮಾನವದೇಹದಲ್ಲಿ ಉಂಟಾಗುವ ಮಾನಸಿಕ ಮತ್ತು ಭಾವನಾತ್ಮಕ ಕಂಪನಗಳಲ್ಲಿ ಬಣ್ಣಗಳ ಪಾತ್ರವಿದ್ದು, ವ್ಯಕ್ತಿಯ ಪ್ರಭಾವಳಿಯಲ್ಲಿ ಪ್ರಕಟವಾಗುವ ಈ ಬಣ್ಣಗಳ ಮೂಲಕ ಆತನ/ಆಕೆಯ ಮಾನಸಿಕ ಸ್ಥಿತಿಯನ್ನು ಅರಿಯಬಹುದು. ಬಣ್ಣವು ಅನೇಕ ಹಂತಗಳಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಬಣ್ಣಗಳು ಮನಸ್ಸನ್ನು ಉತ್ತೇಜಿಸಿದರೆ; ಕೆಲವು ಬಣ್ಣಗಳು ಉಪಶಮನಗೊಳಿಸುತ್ತವೆ. ಬಣ್ಣಗಳು ನಮ್ಮಲ್ಲಿ ಮಾನಸಿಕ, ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಬದಲಾವಣೆಯನ್ನು ತರುವ ಸಾಮರ್ಥ್ಯ ಹೊಂದಿವೆ. ವ್ಯಕ್ತಿಯೊಬ್ಬನಿಗೆ ಯಾವ ಬಣ್ಣದ ಮೇಲೆ ಅತ್ಯಂತ ಪ್ರೀತಿ ಇರುತ್ತದೆಯೋ ಆ ಬಣ್ಣದ ಪ್ರಧಾನಗುಣವೇ ವ್ಯಕ್ತಿಯ ವ್ಯಕ್ತಿತ್ವವಾಗಿರುತ್ತದೆ. ಜೀವನದಲ್ಲಿ ಕಂಡುಬರುವ ಕೊರತೆಗಳನ್ನು (ಪ್ರೀತಿ, ಹಣಕಾಸು, ಸ್ಥಾನಮಾನ, ವ್ಯಕ್ತಿತ್ವ, ಸಹಾಯ, ಸಹಕಾರ, ಆರೋಗ್ಯ, ಸಂಬಂಧ ಇತ್ಯಾದಿ) ಅಂತಹ ವಿಚಾರವನ್ನು ಪ್ರಭಾವಿಸುವ ಬಣ್ಣದ ಉಡುಪು, ವಸ್ತು, ಸಾಧನ ಇತ್ಯಾದಿಗಳನ್ನು ನಿರಂತರವಾಗಿ ಬಳಸಿಕೊಂಡು ಬರುವ ಮೂಲಕ ಗಣನೀಯವಾಗಿ ಸರಿದೂಗಿಸಿಕೊಳ್ಳಲು ಸಾಧ್ಯವಿದೆ. ಬಣ್ಣಗಳು ಬೆಳಕಿನ ಆಸ್ತಿಯಾಗಿದ್ದು ಮತ್ತು ಬೆಳಕು ತರಂಗಾಂತರಗಳಿಂದ ಕೂಡಿರುತ್ತದೆ. ಪ್ರತಿಯೊಂದು ತರಂಗಾಂತರವೂ ವಿಭಿನ್ನ ಆವರ್ತನದಲ್ಲಿ ಕಂಪಿಸುತ್ತದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಈಗ ರೋಗಚಿಕಿತ್ಸೆಯಲ್ಲಿ ಬಣ್ಣಗಳ ಬಳಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ನಮ್ಮ ಅಸ್ತಿತ್ವದ ವಿವಿಧ ಸ್ಥಿತಿಗಳಿಗೆ ಬಣ್ಣಗಳು ಹೇಗೆ ಕಾರಣವಾಗುತ್ತವೆ ನೋಡಿ: ಹಸಿರು ಮತ್ತು ತಿಳಿನೀಲಿ; ವೈಢೂರ್ಯ ಮತ್ತು ಆಕಾಶನೀಲಿ ವಿಶ್ರಾಂತಿಗೆ ಕಾರಣವಾದರೆ; ಕೆಂಪು ಮತ್ತು ನೇರಳೆ ಬಣ್ಣವು ಉತ್ತೇಜಕವಾಗಿ ಕೆಲಸ ನಿರ್ವಹಿಸುತ್ತದೆ. ಕಿತ್ತಳೆ ಬಣ್ಣವು ವ್ಯಕ್ತಿಯಲ್ಲಿ ಪುನಶ್ಚೇತನವನ್ನು ಉಂಟುಮಾಡುವ ಮೂಲಕ ಭೌತಿಕ, ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಸ್ತರದಲ್ಲಿ ಪ್ರಭಾವ ಬೀರುತ್ತವೆ. ವಿವಿಧ ಬಣ್ಣಗಳ ಚಿಕಿತ್ಸಾ ಪ್ರಭಾವವನ್ನು ತಿಳಿಯುವುದಾದಲ್ಲಿ; ನೇರಳೆ ಬಣ್ಣವು ಅಧ್ಯಾತ್ಮಿಕತೆ ಮತ್ತು ಶುದ್ಧೀಕರಣಕ್ಕೆ; ರಕ್ತನಾಳಗಳು, ನರಮಂಡಲ ಮತ್ತು ಅಸ್ಥಿಪಂಜರದ ವ್ಯವಸ್ಥೆ ಹಾಗೂ ಪರಿಸ್ಥಿತಿಗಳ ನಿರ್ವಹಣೆಗೆ; ಅಧ್ಯಾತ್ಮಿಕ ಮತ್ತು ದೈಹಿಕಶಕ್ತಿಗಳ ಸಮತೋಲನಕ್ಕೆ; ಸಂಧಿವಾತ ಶಮನಕ್ಕೆ; ದೇಹದಲ್ಲಿ ಖನಿಜಗಳು ಮತ್ತು ಪೋಷಕಾಂಶಗಳ ಸಮೀಕರಣಕ್ಕೆ; ಕನಸು, ನಮ್ರತೆ ಮತ್ತು ಸ್ಫೂರ್ತಿಗಳ ಉತ್ತೇಜನಕ್ಕೆ; ಹಿಂದಿನ ಜನ್ಮಗಳ ಮಾಹಿತಿಯನ್ನು ಸ್ವೀಕರಿಸಲು ಮನಸ್ಸನ್ನು ತೆರೆಯಲು ಸಹಕರಿಸುತ್ತದೆ. ನೇರಳೆ ಬಣ್ಣವು ಅರ್ಧ ಕೆಂಪು ಮತ್ತು ಅರ್ಧ ನೀಲಿ ಬಣ್ಣಗಳ ಮಿಶ್ರಣವಾಗಿರುವುದರಿಂದ ನಮ್ಮ ಜೀವನದಲ್ಲಿ ಭೌತಿಕ ಮತ್ತು ಅಧ್ಯಾತ್ಮಿಕ ಅಂಶಗಳ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಪ್ರಾಯೋಗಿಕವಾಗಿ ಪರಸ್ಪರ ಸಂಪರ್ಕದಲ್ಲಿರಿಸುತ್ತದೆ. ನೀಲಿ ಬಣ್ಣವು ಪ್ರಜ್ಞೆ, ಮನಸ್ಸಿನ ಶುದ್ಧೀಕರಣ ಮತ್ತು ಏಕೀಕರಣವನ್ನು ಸಾಧಿಸಲು; ಸಂತಾನೋತ್ಪತ್ತಿ ಮತ್ತು ಅಂತಃಸ್ರಾವಕ ವ್ಯವಸ್ಥೆಗಳು, ಮುಖ ಮತ್ತು ತಲೆಯ ಭಾಗಗಳ ನಿರ್ವಹಣೆ ಮತ್ತು ಉಸಿರಾಟ ಪ್ರಕ್ರಿಯೆಗೆ; ದೇಹದ ಪ್ರತಿರಕ್ಷಣಾ ವ್ಯವಸ್ಥೆ, ಗ್ರಂಥಿಗಳು ಮತ್ತು ರಕ್ತದ ಶುದ್ಧೀಕರಣ ಹಾಗೂ ನಿರ್ವಿಷಗೊಳಿಸಿ ದೇಹದ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಸಹಕರಿಸುತ್ತದೆ. ಎಡ ಮತ್ತು ಬಲ ಮೆದುಳಿನ ಸಮತೋಲನ; ಅಂತಃಪ್ರಜ್ಞೆ ಮತ್ತು ಪ್ರಜ್ಞೆಯ ಆಳವಾದ ಮಟ್ಟವನ್ನು ಸಾಧಿಸಲು; ಖಿನ್ನತೆಯಿಂದ ಮುಕ್ತಿಪಡೆಯಲು ಸಹಾಯ ಮಾಡುತ್ತದೆ. ಆಕಾಂಕ್ಷೆ, ನಂಬಿಕೆ, ಸೃಜನಶೀಲತೆ ಮತ್ತು ಶಾಂತಿಯ ಭಾವನೆಯನ್ನು ಸೂಚಿಸುತ್ತದೆ. ದೇಹವನ್ನು ವಿಶ್ರಾಂತಿಗೆ ಒಳಪಡಿಸುವ ಮತ್ತು ತಂಪಾಗಿಸುವ ಸಾಮರ್ಥ್ಯ ಹೊಂದಿದೆ. ಅಧಿಕ ರಕ್ತದೊತ್ತಡ, ಕಾಮಾಲೆ, ಬಾಲ್ಯದ ಕಾಯಿಲೆಗಳು ಮತ್ತು ಅಸ್ತಮಾ ನಿವಾರಣೆಗೆ ಸಹಕಾರಿ. ಹಸಿರು ಬಣ್ಣವು ಬೆಳವಣಿಗೆ, ಸಮತೋಲನ, ನೆಮ್ಮದಿ, ಸಹಾನುಭೂತಿ, ಸೂಕ್ಷö್ಮತೆಗೆ ಸಂಬಂಧಿಸಿದೆ. ಭರವಸೆ, ನಂಬಿಕೆ, ಸ್ನೇಹಪರತೆಯನ್ನು ಉತ್ತೇಜಿಸುತ್ತದೆ. ಭಾವನಾತ್ಮಕ ಸಮಸ್ಯೆಗಳು, ನರಮಂಡಲ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ತೊಂದರೆಗಳಿಗೆ; ಹುಣ್ಣುಗಳು, ಬಳಲಿಕೆ ಮತ್ತು ಹೃದಯ ಸಮಸ್ಯೆಗಳಿಗೆ ಈ ಬಣ್ಣವು ಚಿಕಿತ್ಸಕವಾಗಿ ಸಹಕರಿಸುತ್ತದೆ. ಹಳದಿ ಬಣ್ಣವು ಎಲ್ಲಾ ರೀತಿಯ ಬೌದ್ಧಿಕ ಕಾರ್ಯಗಳಿಗೆ ಸಹಕರಿಸುತ್ತದೆ. ಎಡಮಿದುಳಿನ ಚಟುವಟಿಕೆಗಳು, ಮೂತ್ರಜನಕಾಂಗದ ಗ್ರಂಥಿಗಳು, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದೆ. ತಲೆನೋವು, ಕಲಿಕಾಸಾಮರ್ಥ್ಯ ವೃದ್ಧಿ, ಮಾನಸಿಕ ಉದ್ವೇಗ ಮತ್ತು ಖಿನ್ನತೆಯಿಂದ ಮುಕ್ತಿಪಡೆಯಲು ಸಹಾಯ ಮಾಡುತ್ತದೆ. ಕಿತ್ತಳೆ ಬಣ್ಣವು ದೈಹಿಕಶಕ್ತಿಯ ಸಂಗ್ರಹಣೆ ಮತ್ತು ಮೀಸಲಿಗೆ; ಆಶಾವಾದದ ಮನೋಭಾವನೆಗೆ; ದೇಹದ ವಿಸರ್ಜನಾ ವ್ಯವಸ್ಥೆ, ಸ್ನಾಯು ವ್ಯವಸ್ಥೆಗೆ ಸಹಕಾರಿ. ಸೃಜನಶೀಲತೆ, ಬುದ್ಧಿವಂತಿಕೆ, ಸಂತೋಷವನ್ನು ಉತ್ತೇಜಿಸುತ್ತದೆ. ಹೊಟ್ಟೆ, ಗುಲ್ಮ, ಕರುಳು, ಮೇದೋಜೀರಕ ಗ್ರಂಥಿ, ಮೂತ್ರಜನಕಾಂಗ ಸಮಸ್ಯೆ, ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಪ್ರಭಾವ ಬೀರುತ್ತದೆ. ಅನಾರೋಗ್ಯದ ಬಳಿಕದ ಚೇತರಿಕೆಯಲ್ಲಿ ಸಹಕರಿಸುತ್ತದೆ. ಕೆಂಪು ಬಣ್ಣವು ಲೈಂಗಿಕಾಸಕ್ತಿ, ಇಚ್ಛಾಶಕ್ತಿ ಮತ್ತು ಜೀವನಪ್ರೀತಿಯನ್ನು ಪ್ರಭಾವಿಸುತ್ತದೆ. ರಕ್ತಪರಿಚಲನಾ ವ್ಯವಸ್ಥೆ, ಚಯಾಪಚಯ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಪ್ರತೀಕಾರ, ದ್ವೇಷ, ಪ್ರೀತಿ, ಲೈಂಗಿಕಾಸಕ್ತಿ, ಧೈರ್ಯದಂತಹ ಆಳವಾದ ಭಾವೋದ್ರೇಕ ಮನಃಸ್ಥಿತಿಯನ್ನು ಸಕ್ರಿಯಗೊಳಿಸುತ್ತದೆ. ದೇಹದ ಉಷ್ಣತೆಯ ಸಮತೋಲನ ಮತ್ತು ರಕ್ತದ ಗುಣಮಟ್ಟವೃದ್ಧಿಯಲ್ಲಿ ಪ್ರಭಾವಶಾಲಿ. ಕಪ್ಪುಬಣ್ಣವು ಬಲಪಡಿಸುವಿಕೆ ಮತ್ತು ರಕ್ಷಣೆಯಲ್ಲಿ; ದೇಹದ ಪ್ರಕೃತಿಶಕ್ತಿಯನ್ನು (ಸ್ತ್ರೀಶಕ್ತಿ) ಸಕ್ರಿಯಗೊಳಿಸಲು ಮತ್ತು ಬಲಪಡಿಸಲು; ಸುಪ್ತಪ್ರಜ್ಞೆಯನ್ನು ಜಾಗೃತಗೊಳಿಸಲು; ಜೀವನದ ಬಗ್ಗೆ ಸರಿಯಾದ ದೃಷ್ಟಿಕೋನವನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಿಳಿ ಬಣ್ಣವು ಶುದ್ಧತೆ ಮತ್ತು ಬಲವರ್ಧನೆಯ ಸಂಕೇತ. ದೇಹದ ಯಾವುದೇ ವ್ಯವಸ್ಥೆಯ ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಬಗೆಯ ಶಕ್ತಿಗಳನ್ನು ಶುದ್ಧೀಕರಿಸುತ್ತದೆ. ಇತರ ಯಾವುದೇ ಬಣ್ಣದ ಪರಿಣಾಮವನ್ನು ವರ್ಧಿಸುತ್ತದೆ. ಬೂದುಬಣ್ಣವು (ಬೆಳ್ಳಿ) ಮಾನಸಿಕ ಸ್ಪಷ್ಟತೆ ಮತ್ತು ವರ್ಧನೆಯಲ್ಲಿ; ಧ್ಯಾನದಲ್ಲಿ; ಅಧ್ಯಾತ್ಮಿಕ ಪ್ರಗತಿಯಲ್ಲಿ; ಸ್ತ್ರೀಶಕ್ತಿ ಮತ್ತು ಸೃಜನಶೀಲ ಕಲ್ಪನೆಯನ್ನು ಸಮತೋಲನಗೊಳಿಸುವಲ್ಲಿ; ಇತರ ಬಣ್ಣಗಳ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಸಹಕರಿಸುತ್ತದೆ. ವೈಢೂರ್ಯ ಅಥವಾ ತಿಳಿನೀಲಹಸಿರು ಬಣ್ಣವು ಶುದ್ಧೀಕರಣ ಮತ್ತು ದೇಹದ ಎಲ್ಲಾ ವ್ಯವಸ್ಥೆಗಳನ್ನು ಜೀವಂತವಿರಿಸಲು; ಚಯಾಪಚಯ ಬಲಪಡಿಸಲು; ಜ್ವರ ಮತ್ತು ಉರಿಯೂತವನ್ನು ಸರಾಗಗೊಳಿಸಲು; ಚರ್ಮ ಸಮಸ್ಯೆಗಳಿಗೆ; ಗಂಟಲು ಮತ್ತು ಉಸಿರಾಟದ ಸಮಸ್ಯೆಗಳಿಗೆ; ಕಿವಿನೋವು ಮತ್ತು ತೀವ್ರ ದೈಹಿಕನೋವಿಗೆ ಚಿಕಿತ್ಸಕವಾಗಿ ಪರಿಣಮಿಸುತ್ತದೆ. ಕಡುನೀಲಿ ಬಣ್ಣವು ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸವಲ್ಲಿ ಮತ್ತು ಗೊಂದಲಮಯ ಮನಸ್ಸನ್ನು ಸಹಜಸ್ಥಿತಿಗೆ ತರುವಲ್ಲಿ ಸಹಕಾರಿ. ಪ್ರಕೃತಿಯು ಮಾನವನಿಗೆ ಸದಾ ನೀಡುತ್ತಿರುವ ಸಂದೇಶ:ನಿನಗಾರೂ ಇಲ್ಲವೆಂದಾದಾಗ ನನ್ನ ಬಳಿ ಬಾ; ನನ್ನನ್ನು ಸೇರು; ನಿನ್ನೆಲ್ಲಾ ಗೊಂದಲ ಮತ್ತು ಸಮಸ್ಯೆಗಳಿಗೆ ನನ್ನಲ್ಲಿ ಉತ್ತರವನ್ನು ಕಂಡುಕೋ.

Previous articleಸೋದಿ ಮಾಮಾಗೆ ಬಹಿರಂಗ ಪತ್ರ
Next articleವಿಶ್ವ ಧ್ಯಾನ ದಿನಾಚರಣೆ ತುಂಬ ಯೋಗ್ಯ