ಬಂಟ್ವಾಳ ಚಾಕು ಇರಿತ ಪ್ರಕರಣ: ಹಲವರನ್ನು ವಶಕ್ಕೆ ಪಡೆದು ವಿಚಾರಣೆ

0
40

ಬಂಟ್ವಾಳ : ಪಾಣೆಮಂಗಳೂರು ಅಕ್ಕರಂಗಡಿ ಬಳಿ ಶುಕ್ರವಾರ ರಾತ್ರಿ ವ್ಯಕ್ತಿಯೋರ್ವರಿಗೆ ಬೈಕ್ ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ನಡೆಸಿದ್ದು,ಈ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅಕ್ಕರಂಗಡಿ ನಿವಾಸಿ ಪೈಂಟರ್ ಅಮ್ಮಿ ಯಾನೆ ಹಮೀದ್ ಎಂಬವರ ಮೇಲೆ ಬೈಕ್ ನಲ್ಲಿ ಬಂದ ಮುಸುಕುಧಾರಿ ದುಷ್ಕರ್ಮಿಗಳು  ಚಾಕುವಿನಿಂದ ಮಾರಣಾಂತಿಕವಾಗಿ ಇರಿದು  ಪರಾರಿಯಾಗಿದ್ದು,ಈ ಕೃತ್ಯವಾಗಿ ಸ್ಥಳೀಯವಾಗಿ ಕೆಲಕಾಲ ಆತಂಕಕ್ಕೀಡು ಮಾಡಿತ್ತು.
ಹಮೀದ್ ಅವರ ಕೈಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ,ಮಂಗಳೂರಿನ  ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಢಯುತ್ತಿದ್ದಾರೆ, ಗಾಯಾಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಹಲವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಅತೀ ಸೂಕ್ಷ್ಮ ಪ್ರದೇಶವೆಂದೆ ಗುರುತಿಸಿರುವ ಬಂಟ್ವಾಳ ಪರಿಸರದಲ್ಲಿ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಹೆಚ್ಚುವರಿ ಪೊಲೀಸರನ್ನು ಬಂಟ್ವಾಳದಾದ್ಯಂತ ನಿಯೋಜಿಸಲಾಗಿದ್ದರೂ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿಯಲ್ಲಿ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿರುವುದು ಬಂಟ್ವಾಳ ನಗರ ಪೊಲೀಸರನ್ನು ತಲೆಕೆರೆದುಕೊಳ್ಳುವಂತೆ ಮಾಡಿತ್ತು.
ಈ ಹಿನ್ನಲೆಯಲ್ಲಿ ಖುದ್ದು ಎಸ್ಪಿಯವರೇ ಸ್ಥಳಕ್ಕಾಗಮಿಸಿ ತನಿಖೆಗೆ ಒಂದಷ್ಟು ಮಾರ್ಗದರ್ಶನ  ನೀಡಿದ್ದಾರೆ.
ಆರೋಪಿಗಳ ಬಂಧಿಸಿಲ್ಲ:
ಏ.16 ರಂದು ಮಧ್ಯರಾತ್ರಿ ಪಾಣೆಮಂಗಳೂರಿನ ನೆಹರು ನಗರದಲ್ಲಿ ಅಂಗಡಿ ಮುಚ್ಚುತ್ತಿದ್ದ ತಸ್ಲೀಂ ಎಂಬವರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದರು. ಈ ಕೃತ್ಯ ನಡೆದ ತಿಂಗಳಾದರೂ  ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ,ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದು ವೈರಲ್ ಆಗಿತ್ತೆನ್ನಲಾಗಿದ್ದು, ಇದೇ ವಿಚಾರವಾಗಿ ಹಮೀದ್ ಮೇಲೆ ಚೂರಿ ಇರಿದು ಕೊಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ.
ಒಂದೇ ಸಮುದಾಯದೊಳಗೆ ಈ ಘಟನೆ ನಡೆದಿದ್ದರಿಂದ ಪೊಲೀಸರು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
ಪಾಣೆಮಂಗಳೂರಿನ ಹೆದ್ದಾರಿ ಪರಿಸರ, ನೆಹರು ನಗರ,ಅಕ್ಕರಂಗಡಿ ಸಹಿತ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಗಾಂಜಾ ಘಾಟು ಅತೀಯಾಗಿದ್ದು, ನಗರ ಪೊಲೀಸರು ಕೂಡ ಇಲ್ಲಿರುವ ಹೊಟೇಲೊಂದನ್ನು ಆಶ್ರಯಿಸಿರುವುದರಿಂದ ಇಲ್ಲಿ ಗಾಂಜಾ ಸಹಿತ ಯಾವುದೇ ಕಾನೂನು ಬಾಹಿರ ಚಟುವಟಿಕೆಯನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪ‌ ಸಾರ್ವಜನಿಕರಿಂದ ಹಲವು ಸಮಯಗಳಿಂದ ಕೇಳಿಬರುತ್ತಿದೆ.

Previous articleಬಂಟ್ವಾಳದಲ್ಲಿ ತಲಾವರಿನಿಂದ ಇರಿತ
Next articleಧರ್ಮಸ್ಥಳದ ಯುವತಿ ಪಂಜಾಬಿನಲ್ಲಿ ನಿಗೂಢ ಸಾವು