ಪೊಲೀಸರ ಕರ್ತವ್ಯಲೋಪ; ಸಿಐಡಿಗೆ ತಲೆನೋವು..!

0
6

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಪೊಲೀಸರು ಎಸಗಿರುವ ಕರ್ತವ್ಯ ಲೋಪ, ಸಿಐಡಿ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ….! ಕ್ರೈಂ ಸೀನ್‌ನಲ್ಲಿ ಪ್ರಮುಖ ಸಾಕ್ಯ್ಷವನ್ನೇ ನಿರ್ಲಕ್ಷ್ಯ ಮಾಡಿರುವ ಪೊಲೀಸರ ಕ್ರಮದಿಂದಾಗಿ ಸಿಐಡಿ ತಂಡ ಕೈ ಕೈ ಹಿಸುಕಿಕೊಳ್ಳುತ್ತಿದೆ.
ಅಂಜಲಿ ಅಂಬಿಗೇರ ಹಂತಕ ಗಿರೀಶ ಸಾವಂತ್‌ನನ್ನು ಶುಕ್ರವಾರ ಸ್ಥಳ ಮಹಜರಿಗಾಗಿ ಅಂಜಲಿ ನಿವಾಸಕ್ಕೆ ಕರೆತಂದ ಸಿಐಡಿ ಅಧಿಕಾರಿಗಳಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಸ್ಥಳ ಮಹಜರು ಮಾಡುತ್ತ ಕೊಲೆಗೆ ಬಳಸಲಾದ ಮಾರಕಾಸ್ತ್ರ (ಚಾಕು/ಚೂರಿ) ಬಗ್ಗೆ ವಿಚಾರಿಸಿದಾಗ, `ಕೊಲೆಯ ಬಳಿಕ ಇಲ್ಲೇ ಎಸೆದು ಹೋಗಿದ್ದೆ’ ಎಂಬುದಾಗಿ ಗಿರೀಶ ಹೇಳಿದ್ದಾನೆ. ಆದರೆ, ಸತತ ೩-೪ ಗಂಟೆ ಹುಡುಕಾಡಿದರೂ ಮಾರಕಾಸ್ತ್ರ ದೊರೆಯದೇ ಇರುವುದು ಸಿಐಡಿ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಮೇ ೧೫ರಂದು ಬೆಳಗ್ಗೆ ೫.೩೦ರ ಸುಮಾರಿಗೆ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಕೊಲೆಯಾಗಿತ್ತು. ೧೫-೨೦ ನಿಮಿಷಗಳ ಅಂತರದಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಧಾವಿಸಿದ್ದರು. ಮೃತ ದೇಹವನ್ನು ಮತಣೋತ್ತರ ಪರೀಕ್ಷೆಗೆ ಕಳುಹಿಸುವ ಮುನ್ನ ಮಾಡಬೇಕಾದ ಕೆಲ ಪ್ರಕ್ರಿಯೆಗಳನ್ನೇ ಮರೆತ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಧಾವಂತದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.
ದೇಶ-ವಿದೇಶಗಳಲ್ಲೂ ಸದು ಮಾಡಿದ್ದ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಪ್ರೀತಿ, ಪ್ರೇಮದ ವಿಚಾರವಾಗಿ ಅಂಜಲಿ ಅಂಬಿಗೇರ ಕೊಲೆ ನಡೆದಿದೆ. ಆದರೂ ಅದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದು ಸಿಐಡಿ ಅಧಿಕಾರಿಗಳ ಪೇಚಾಟದಿಂದ ಸ್ಪಷ್ಟವಾಗುತ್ತಿದೆ.
ಕೊಲೆ ನಡೆದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಪ್ರಾಥಮಿಕ ಹಂತದ ವಿಚಾರಣೆ ಕೈಗೊಳ್ಳಬೇಕಿತ್ತು. ಸ್ಥಳದಲ್ಲಿನ ಸಾಕ್ಷಾಧಾರ, ಸಂಬಂಧಪಟ್ಟವರ ಹೇಳಿಕೆ, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರವನ್ನು ಹುಡುಕಾಡಬೇಕು. ಶ್ವಾನ ದಳವನ್ನು ಕರೆಯಿಸಿ ಅಲ್ಲಿಂದ ಸಿಕ್ಕ ಕೆಲ ಸುಳಿವು, ಸಾಕ್ಷ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಹಾಯದಿಂದ, ಬೆರಳಚ್ಚು ಹಾಗೂ ಇನಿತರ ಸಾಕ್ಷ್ಯಗಳು ನಾಶವಾಗದಂತೆ ಜೋಪಾನವಾಗಿ ಸಂಗ್ರಹಿಸಬೇಕಾದುದು ನಿಯಮ. ಆದರೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಪ್ರಾಥಮಿಕ ಹಂತದ ತನಿಖೆಯಲ್ಲಿ ಇವ್ಯಾವೂ ನಡೆದಿಲ್ಲ ಎಂಬುದು ಆರೋಪಿಯ ಸ್ಥಳ ಮಹಜರು ವೇಳೆ ಸಾಬೀತಾಗಿದೆ.
ಮರ್ಡರ್ ವೆಪನ್ ಹುಡುಕಲು ಸಿಐಡಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಅಂಜಲಿ ವಾಸಿಸುತ್ತಿದ್ದ ವೀರಾಪುರ ಓಣಿಯ ಬಡಾವಣೆಗಳಲ್ಲಿನ ಚರಂಡಿಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದ ದಿನ ಪೊಲೀಸರು ಸ್ವಲ್ಪ ಜಾಗರೂಕರಾಗಿ ಕೃತ್ಯಕ್ಕೆ ಬಳಸಿದ್ದ ಚೂರಿಯನ್ನು ಹುಡುಕಾಡಿದ್ದರೆ ಇಂದು ಸಿಐಡಿ ಅಧಿಕಾರಿಗಳಿಗೆ ಗಟಾರು, ಚರಂಡಿ ಅಗೆಯುವ ಪ್ರಮೇಯವೇ ಇರುತ್ತಿರಲಿಲ್ಲ.

ಮೆಟಲ್ ಡಿಟೆಕ್ಟರ್ ಬಳಕೆ
ಕೃತ್ಯಕ್ಕೆ ಆರೋಪಿ ಬಳಸಿದ ಚಾಕು/ಚೂರಿಯನ್ನು ಹುಡುಕುವುದರಲ್ಲೇ ಸಿಐಡಿ ಅಧಿಕಾರಿಗಳು ಶುಕ್ರವಾರವನ್ನು ಕಳೆದಿದ್ದಾರೆ. ಅಂಜಲಿ ವಾಸಿಸುತ್ತಿದ್ದ ಓಣಿಯಲ್ಲಿನ ಎಲ್ಲ ಗಟಾರ, ಚರಂಡಿಯಲ್ಲೂ ಮೆಟಲ್ ಡಿಟಕ್ಟರ್, ಟಾರ್ಚ್ ಬಳಸಿ ಹುಡುಕಾಟ ನಡೆಸಿದ್ದಾರೆ. ಬಡಾವಣೆಯ ಗಟಾರ, ಚರಂಡಿ ಸ್ವಚ್ಛವಾದವೇ ಹೊರತು. ಸಿಐಡಿ ಅಧಿಕಾರಿಗಳಿಗೆ ಬೇಕಾದ ವಸ್ತುವೇ ಸಿಗಲಿಲ್ಲ. ಇಂತಹ ಪ್ರಕರಣಗಳಲ್ಲಿ ಮಾರಕಾಸ್ತ್ರಗಳನ್ನು ಹಾಗೂ ಇನ್ನಿತರ ಸಾಕ್ಷಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಈಗ ಅದೇ ಇಲ್ಲ.!

ಎಲ್ಲಿ ಹೋಗಿರಬಹುದು ಚಾಕು?
ಕೊಲೆಯಾದ ಬಳಿಕ ಇಂತಹದ್ದೇ ಸ್ಥಳದಲ್ಲಿ ಚಾಕು ಎಸೆದಿದ್ದೇನೆ ಎಂದು ಆರೋಪಿ ಗಿರೀಶ ಸ್ಪಷ್ಟವಾಗಿ ಸ್ಥಳವನ್ನೂ ತೋರಿಸಿದ್ದಾನೆ. ಆದರೂ ಅದು ಅಧಿಕಾರಿಗಳಿಗೆ ಸಿಕ್ಕಿಲ್ಲ. ಕೊಲೆಯ ಬಳಿಕ ಪೊಲೀಸರು ಬರುವುದಕ್ಕೂ ಮೊದಲು ಜನ ದಟ್ಟಣೆ ಸೇರಿ ಅವರ ಓಡಾಡುವಿಕೆಯಿಂದ ಮಾರಕಾಸ್ತ್ರ ಗಟಾರು ಸೇರಿರಬಹುದು. ಕೊಲೆ ನಡೆದ ಒಂದೆರಡು ದಿನಗಳ ನಂತರ ಸುರಿದ ತೀವ್ರ ಮಳೆಯಿಂದ ಗಟಾರು ಸೇರಿದ್ದ ಮಾರಕಾಸ್ತ್ರ ನೀರಿನೊಂದಿಗೆ ಕೊಚ್ಚಿ ಹೋಗಿರುವ ಸಾಧ್ಯತೆಗಳೂ ದಟ್ಟವಾಗಿದೆ.

Previous articleಬೆಳಗಾವಿ ಎಷ್ಟರ ಮಟ್ಟಿಗೆ ಸುರಕ್ಷಿತ?
Next articleಗಾಂಜಾ ಮಾಫಿಯಾಗೆ ನಕ್ಸಲರ ಗಾಢ ನಂಟು