ನವದೆಹಲಿ: ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಪಾದಯಾತ್ರೆಯಿಂದ ಆಗುವ ಲಾಭ ಏನು ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಮಾದ್ಯಮದವರೊಂದಿಗೆ ಮಾತನಾಡಿರುವ ಅವರು ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ. ನಾವು ನೈತಿಕ ಬೆಂಬಲವೂ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು. ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ ಶಕ್ತಿ ಇದೆ. ನಮ್ಮನ್ನು ಪರಿಗಣಿಸಿದ್ದರೆ ಹೇಗೆ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ. ಜೆ.ಟಿ ದೇವಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಕೇರಳದಲ್ಲಿ ನೂರಾರು ಜನ ಸಾವು ಕಂಡಿದ್ದಾರೆ. ಕರ್ನಾಟಕದಿಂದ ಹೋದ ಜನರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದಾರೆ. ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲೂ ಹಲವೆಡೆ ರೆಡ್, ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ಜಿಲ್ಲೆಗಳಲ್ಲಿ ಜಲಾವೃತಗೊಂಡು ಸಂಕಷ್ಟ ಎದುರಾಗಿದೆ. ಮಂಡ್ಯ ಭಾಗದಲ್ಲಿ ನಾಟಿ ಕೆಲಸ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ನಮ್ಮ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಪಾದಯಾತ್ರೆ ಮಾಡಬೇಕು ಎಂದು ಬಿಜೆಪಿ ನಾಯಕರು ಈ ಮುಂಚೆ ನಿರ್ಧಾರ ಮಾಡಿದ್ದರು. ನಮಗೆ ಮಾಹಿತಿಗಾಗಿ ಹೇಳಿದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.