ಪ್ರತಿ ಬಾರಿ ಪಾಕ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಸರ್ಜಿಕಲ್‌ಸ್ಟ್ರೈಕ್ ಕೈಗೊಳ್ಳುತ್ತಿತ್ತು. ಅದನ್ನು ನಿರೀಕ್ಷಿಸಿ ಪಾಕ್ ತನ್ನ ಯುದ್ಧ ವಿಮಾನಗಳಿಗೆ ಎಣ್ಣೆ ಹಚ್ಚಿ ಸಜ್ಜುಗೊಳಿಸಿತ್ತು. ಆದರೆ ಭಾರತ ಈ ಬಾರಿ ಹೊಸ ತಂತ್ರವನ್ನು ಬಳಸುತ್ತಿದೆ. ಭಾರತದಿಂದ ಪಾಕ್‌ಗೆ ಹರಿದು ಹೋಗುವ ಸಿಂಧು ಕಣಿವೆಗಳ ನೀರು ಹಂಚಿಕೆ ಒಪ್ಪಂದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಇದನ್ನು ಪಾಕ್ ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಭಾರತ ಸಿಂಧು ಮತ್ತು ಅದರ ಉಪನದಿಗಳ ಹರಿವಿಕೆಗೆ ಅಡ್ಡಿಪಡಿಸಲು ತೀರ್ಮಾನಿಸಿದರೆ ಪಾಕ್‌ನಲ್ಲಿ ಲಕ್ಷಾಂತರ ಜನ ನೀರಿನ ಬರದಿಂದ ಪರಿತಪಿಸುವುದು ನಿಶ್ಚಿತ. ಪಾಕ್ ಬಳಸುವ ಒಟ್ಟು ಸಂಪನ್ಮೂಲದಲ್ಲಿ ಶೇ. ೩೦ರಷ್ಟು ನೀರು ಭಾರತದ ಮೂಲಕ ಹರಿದು ಹೋಗುತ್ತಿದೆ. ಅದಕ್ಕೆ ಸ್ವಲ್ಪ ಧಕ್ಕೆ ಉಂಟಾದರೂ ಸಾಕು ಪಾಕ್ ತತ್ತರಿಸಿ ಹೋಗುತ್ತದೆ. ಹೀಗಾಗಿ ಪಾಕ್ ಈಗ ಮೌನಕ್ಕೆ ಶರಣಾಗಿದೆ. ಪಾಕ್‌ನಲ್ಲಿರುವ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯ ಭಾರತದಿಂದ ಹರಿದು ಬರುವ ನದಿಗಳನ್ನು ಅವಲಂಬಿಸಿದೆ. ಸಿಂಧೂ ನಾಗರೀಕತೆಗೆ ೧ ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧು, ಚೆನಾಬ್, ಜೇಲಂ ನದಿಗಳು ಪಾಕ್‌ಗೆ ನೇರವಾಗಿ ಹೋಗುತ್ತವೆ. ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ಭಾರತದ ಮೂಲಕ ಪಾಕ್‌ಗೆ ಹೋಗುತ್ತವೆ. ೧೯೬೦ ರಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದವಾಗಿದ್ದು, ಅದರಂತೆ ಭಾರತ ಈ ನದಿಗಳ ನೀರನ್ನು ಸಂಗ್ರಹ ಮಾಡಿಕೊಳ್ಳುವಂತಿಲ್ಲ. ಸ್ವಲ್ಪಮಟ್ಟಿಗೆ ನೀರಾವರಿ, ಜಲ ವಿದ್ಯುತ್, ಮೀನುಗಾರಿಕೆಗಳಿಗೆ ಬಳಸಿಕೊಳ್ಳಬಹುದು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಕೊಂಡ ಜಲ ಹಂಚಿಕೆ ಒಪ್ಪಂದ. ಇದುವರೆಗೆ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ನದಿಹಂಚಿಕೆ ಬಳಕೆಯಾಗಿಲ್ಲ. ಈಗ ಮೊದಲ ಬಾರಿ ಭಾರತ ಒಪ್ಪಂದಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿರುವುದು ಪಾಕ್‌ನಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಅಲ್ಲಿ ೧೬ ದಶಲಕ್ಷ ಹೆಕ್ಟೇರ್ ನೀರಾವರಿಗೆ ಭಾರತದಿಂದ ನೀರು ಹರಿದು ಹೋಗಬೇಕಿದೆ. ಒಟ್ಟು ೪೭ ಬಿಲಿಯನ್ ಘನ ಮೀಟರ್ ನೀರು ಭಾರತದಿಂದ ಹರಿದು ಹೋಗುತ್ತದೆ. ೯೯ ದಶಲಕ್ಷ ಘನ ಮೀಟರ್ ನೀರು ಸಿಂಧು ಕಣಿವೆಯಲ್ಲಿ ಪಾಕ್‌ಗೆ ನೇರವಾಗಿ ದೊರೆಯುತ್ತದೆ. ಇಂಥ ಜೀವನದಿಗೆ ಸಂಚಕಾರ ಬಂದರೆ ಏನು ಮಾಡುವುದು ಎಂಬುದೇ ಈಗ ಪಾಕ್ ಸರ್ಕಾರದ ಚಿಂತೆ. ಅಲ್ಲಿಯ ಪತ್ರಿಕೆಗಳಲ್ಲಿ ಇದರ ಮುಕ್ತ ಚರ್ಚೆ ಆರಂಭಗೊಂಡಿದೆ. ಭಾರತ ಈಗ ಒಪ್ಪಂದಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವುದಾಗಿ ಹೇಳಿದ್ದರೂ ಗಂಭೀರ ಕ್ರಮಗಳಿಗೆ ಮುಂದಾಗುವುದಿಲ್ಲ ಎಂದು ಪಾಕ್ ಭಾವಿಸಿದೆ. ಒಪ್ಪಂದದ ಪ್ರಕಾರ ಜಲ ಆಯೋಗದಲ್ಲಿ ಎರಡೂ ದೇಶಗಳ ಪ್ರತಿನಿಧಿಗಳಿದ್ದಾರೆ. ವಿವಾದ ಮೂಡಿದಲ್ಲಿ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಇಲ್ಲ ಎಂದರೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಹೋಗಬೇಕು. ಅಲ್ಲಿ ಒಮ್ಮೆ ಪಾಕ್ ಪರ ತೀರ್ಪು ಬಂದಿತ್ತು. ಅಲ್ಲದೆ ನದಿ ವಿವಾದದಲ್ಲಿ ಕೆಳಗಿರುವ ಪ್ರದೇಶದ ಜನರಿಗೆ ಹಕ್ಕಿರುತ್ತದೆ ಎಂದು ಹೆಲ್ಸಿಂಕಿ ನಿಯಮ ಹೇಳುತ್ತದೆ. ಒಪ್ಪಂದದಲ್ಲಿ ಏನೇ ತಿದ್ದುಪಡಿ ತರಬೇಕಾದರೂ ಎರಡೂ ದೇಶ ಒಪ್ಪಬೇಕು. ಈಗ ಭಾರತ ತಿದ್ದುಪಡಿಗೆ ಮುಂದಾಗಬಹುದು ಎಂಬ ಆತಂಕ ಪಾಕ್‌ಗೆ ಮೂಡಿದೆ. ಪಾಕ್‌ಗೆ ರಕ್ಷಣೆ ಇರುವುದು ಬ್ರಹ್ಮಪುತ್ರ ನದಿ ವಿವಾದ. ಅಲ್ಲಿ ಚೀನಾದಿಂದ ಭಾರತಕ್ಕೆ ಹರಿದು ಬರುವ ನೀರು ಬಾಂಗ್ಲಾಗೆ ಹೋಗುತ್ತದೆ. ಅದೂ ಕೂಡ ಅಂತಾರಾಷ್ಟ್ರೀಯ ಜಲ ವಿವಾದ. ಅದರಿಂದ ಭಾರತ ಈಗ ತೀವ್ರ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಭಾವಿಸಲಾಗಿದೆ. ಅಲ್ಲದೆ ಭಾರತದ ಬಳಿ ಹೆಚ್ಚು ನೀರು ಸಂಗ್ರಹಿಸಲು ದೊಡ್ಡ ಜಲಾಶಯಗಳಿಲ್ಲ ಎಂಬುದು ಪಾಕ್‌ಗೆ ಇರುವ ಸಮಾಧಾನ. ಏನೇ ಆದರೂ ಭಾರತ ನದಿಯ ನೀರು ಬೀಡುವ ಸಮಯವನ್ನು ವ್ಯತ್ಯಾಸ ಮಾಡಿದರೂ ಅಲ್ಲಿಯ ಬೆಳೆಗಳ ಮೇಲೆ ಆಗುವ ಪರಿಣಾಮ ನಿಭಾಯಿಸುವುದು ಕಷ್ಟ. ಇಂದಿಲ್ಲ ನಾಳೆ ಪಾಕ್ ಬಗ್ಗುಬಡಿಯಲು ನದಿ ವಿವಾದ ದೊಡ್ಡ ಅಸ್ತ್ರವಾಗುವ ಅಪಾಯವಂತೂ ಇದ್ದೇ ಇದೆ. ಇದನ್ನು ಉಗ್ರರು ಬಂದೂಕಿನ ಮೂಲಕ ಸರಿಪಡಿಸಲು ಆಗುವುದಿಲ್ಲ. ಇದು ಪಾಕ್ ರೈತರ ಜೀವನದ ಪ್ರಶ್ನೆ. ನಿಸರ್ಗ ಪಾಕ್ ರೈತರ ಜುಟ್ಟನ್ನು ಭಾರತದ ಕೈಯಲ್ಲಿ ಕೊಟ್ಟಿದೆ ಎಂಬುದಂತೂ ನಿಜ. ಅಂತಾರಾಷ್ಟ್ರೀಯ ಜಲ ವಿವಾದಗಳು ಇದುವರೆಗೆ ಪೂರ್ಣವಾಗಿ ಪರಿಹಾರ ಕಂಡಿಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡ ಜಲ ವಿವಾದ ಬಗೆಹರಿಸಲು ಬೇಕಾದ ಚೌಕಟ್ಟನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಪರಸ್ಪರ ಕೊಡು ಕೊಡುಗೆ ಮೂಲಕ ಬಗೆಹರಿಸಿಕೊಳ್ಳಬಹುದೇ ಹೊರತು ಬಂದೂಕಿನಿಂದ ಸಾಧ್ಯವಾಗುವುದಿಲ್ಲ. ಇದು ಗಡಿ ಪ್ರಶ್ನೆಯಲ್ಲ. ಅನ್ನದ ಪ್ರಶ್ನೆ. ಪಾಕ್ ಸರ್ಕಾರ ಉಗ್ರರ ಪರ ನಿಂತರೆ ಅಲ್ಲಿಯ ರೈತರೇ ತಿರುಗಿ ಬೀಳುತ್ತಾರೆ. ಆಗ ಯಾವ ಸೇನೆಯೂ ಸರ್ಕಾರದ ರಕ್ಷಣೆಗೆ ನಿಲ್ಲುವುದಿಲ್ಲ. ಪಾಕ್ ಸರ್ಕಾರ ಭಾರತಕ್ಕೆ ಸರಿಸಮಾನವಾಗಿ ಎಷ್ಟೇ ಕ್ಷಿಪಣಿಗಳನ್ನು ಖರೀದಿ ಮಾಡಿದರೂ ಜಲ ವಿವಾದ ಪರಿಹಾರಕ್ಕೆ ಅದು ಸಾಧನವಾಗುವುದಿಲ್ಲ. ಈಗ ಸಿಂಧೂ ಕಣಿವೆಯ ನದಿಗಳು ಪಾಕ್-ಭಾರತವನ್ನು ಒಂದುಗೂಡಿಸುವುದಕ್ಕೆ ಕಾರಣೀಭೂತವಾಗುವ ಕಾಲ ಬಂದಿದೆ. ಇದುವರೆಗೆ ಜನರನ್ನು ಬೇರ್ಪಡಿಸಿದ್ದ ನದಿಗಳು ಜನರನ್ನು ಒಂದುಗೂಡಿಸಬಹುದು.