ಬೆಂಗಳೂರು: ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಏರ್ಪಡಿಸಿದ್ದ ಡಾ. ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನನ್ನ ಆತ್ಮೀಯ ಸ್ನೇಹಿತನಿಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು ಖಾದ್ರಿ ಶಾಮಣ್ಣ ಅವರನ್ನು 1978ರಲ್ಲಿ ನೋಡಿದ್ದೆ ಆಗ ತುರ್ತು ಪರಿಸ್ಥಿತಿ ಮುಗಿದಿತ್ತು. ಇಡಿ ವಿಶ್ವದಲ್ಲಿ ವೈಎನ್ ಕೆ ಅವರ ಹೆಸರಿತ್ತು. ಕರ್ನಾಟಕದಲ್ಲಿ ಎಮರ್ಜೆನ್ಸಿ ವಿರುದ್ಧ ಸಿಡಿದೆದ್ದ ವ್ಯಕ್ತಿ ಖಾದ್ರಿ ಶಾಮಣ್ಣ ಅವರು, ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಇರುವ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾಸ ಎಂದು ಹೇಳಿದರು.
ಖಾದ್ರಿ ಶಾಮಣ್ಣ ಅವರು ಬಹಳ ಪ್ರಭಾವಶಾಲಿ ಆಗಿದ್ದರು. ಅವರು ಬದುಕಿದ್ದಾಗ ಮುಂದೆ ಬರುವ ಸರ್ಕಾರಗಳು ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಿದ್ದರು.
ಪತ್ರಿಕೋದ್ಯಮ ಬಹಳ ಕ್ಲೀಷ್ಟವಾಗಿರುತ್ತದೆ ಕೆಲವು ಸಾರಿ ಪರ ಮತ್ತು ವಿರೋಧ ಅಭಿಪ್ರಾಯಗಳು ಬಂದಾಗ ಸತ್ಯದ ಮೇಲೆ ನಿಲುವು ತೆಗೆದುಕೊಂಡಾಗ ಅದಕ್ಕೆ ಮಹತ್ವ ಬರುತ್ತದೆ. ಕೆಲವು ಸಾರಿ ತಾವು ತೆಗೆದುಕೊಂಡ ನಿಲುವಿನ ವಿರುದ್ಧ ತೆಗೆದುಕೊಳ್ಳುವ ಸಂದರ್ಭ ಬರಬಹುದು ಆಗ ಸ್ಪಷ್ಟವಾಗಿ ಗಟ್ಟಿಯಾಗಿ ನಿಲುವು ತೆಗೆದುಕೊಳ್ಳಬೇಕು. ಖಾದ್ರಿ ಶಾಮಣ್ಣ ಅಂತಹ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದರು. ಅಂತಹವರ ಗರಡಿಯಲ್ಲಿ ಕೂಡ್ಲಿ ಗುರುರಾಜ್ ಬೆಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ಕನ್ನಡ ಪ್ರಭದಲ್ಲಿ ಇವರು ಇದ್ದಾಗ ಅವರ ಲೇಖನಗಳನ್ನು ಓದಿದ್ದೆ. 1998ರಲ್ಲಿ ನಾನು ಸ್ಥಳೀಯ ಸಂಸ್ಥೆಯಿಂದ ಚುನಾವಣೆ ನಿಂತಿದ್ದೆ, ನಮ್ಮ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿ ನಿಂತಿದ್ದರು. ಆಗ ಎಲ್ಲ ಪತ್ರಿಕೆಯವರು 24 ದಿನ ನನ್ನ ವಿರುದ್ಧ ಬರೆದಿದ್ದರು. ಒಬ್ಬರು ಪತ್ರಕರ್ತೆ ಸನ್ ಆಸ್ ಸೆಟ್ ಅಂತ ಬರೆದಿದ್ದರು. ಆದರೆ, ನಾನು ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೆ ಎಂದು ನೆನಪಿಸಿಕೊಂಡರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ. ರಾಜಕೀಯ ಸುದ್ದಿ ಇಲ್ಲದೆ ಇದ್ದರೆ ಪತ್ರಿಕೆ ಆಕರ್ಷಣೆ ಇರುವುದಿಲ್ಲ. ಅದೇ ರೀತಿ ರಾಜಕಾರಣಿಯ ಸುದ್ದಿಗಳು ಪತ್ರಿಕೆಯಲ್ಲಿ ಬರದಿದ್ದರೇ ಆ ರಾಜಕಾರಣಿಗೆ ಅಸ್ತಿತ್ವವೇ ಇಲ್ಲ. ನನಗೆ ಮದನ ಮೋಹನ್ ಅವರು ಮಾರ್ಗದರ್ಶನ ಮಾಡಿದ್ದರು. ಅವರ ಮಾರ್ಗದರ್ಶನದಿಂದ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಚರ್ಚೆ ಮಾಡಿದ್ದೆ. ರಾಮಕೃಷ್ಣ ಹೆಗಡೆ ಅವರು ಮದನ ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದಾರಾ ಅಂತ ಕೇಳುತ್ತಿದ್ದರು. ಅವರ ಬಗ್ಗೆ ರಾಜಕಾರಣಿಗಳಿಗೆ ಭಯ ಇತ್ತು ಎಂದರು.
ರಾಜಕಾರಣಿಗಳನ್ನು ಹುರುದುಂಬಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ. ನಮ್ಮ ಸರ್ಕಾರ ಬದಲಾಗುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ನಾನು ದೆಹಲಿಯಲ್ಲಿ ಕೇಂದ್ರದಿಂದ ಏಳು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದೆ, ಅದನ್ನು ಉಮಾಪತಿಯವರು ಸರ್ಕಾರ ಬೀಳುವ ಸಂದರ್ಭದಲ್ಲಿಯೂ ಈ ಸಚಿವರು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದಾರೆ ಎಂದು ವಿಶ್ಲೇಷಣಾತ್ಮಕ ಲೇಖನ ಬರೆದಿದ್ದರು. ಒಳ್ಳೆಯ ಕೆಲಸ ಮಾಡಿದರೆ ಪತ್ರಿಕೆಯವರು ಗುರುತಿಸುತ್ತಾರೆ ಎಂದು ಅನಿಸಿತು. ತುಂಗಭದ್ರ ಯೋಜನೆ ಕುರಿತು ಪತ್ರಿಕೆಯಲ್ಲಿ ಒಂದು ಲೇಖನ ಬಂದಿತ್ತು. ಅದು ನನಗೆ ಸ್ಫೂರ್ತಿಯಾಯಿತು. ಅದರಿಂದ ತುಂಗಭದ್ರಾ ಕಾಲುವೆ ಯೋಜನೆ ಜಾರಿಗೊಳಿಸಲು ಅನುಕೂಲವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷರಾದ ವೂಡೇ ಪಿ. ಕೃಷ್ಣ, ಆಸ್ಸಾಂ ಕೇಂದ್ರಿಯ ವಿವಿ ನಿವೃತ್ತ ಸಮ ಕುಲಪತಿ ಪ್ರೊ. ಕೆ.ವಿ. ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಕೂಡ್ಲಿ ಗುರುರಾಜ್ ಹಾಗೂ ಖಾದ್ತಿ ಶಾಮಣ್ಣ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಎಚ್. ಆರ್. ಶ್ರೀಶ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಹಾಜರಿದ್ದರು.