ಪಠ್ಯೇತರ ಚಟುವಟಿಕೆಯೇ ಮೂಲಮಂತ್ರ

0
16

ಚಿತ್ರ: ಔಟ್ ಆಫ್ ಸಿಲಬಸ್
ನಿರ್ದೇಶನ: ಪ್ರದೀಪ್ ದೊಡ್ಡಯ್ಯ
ನಿರ್ಮಾಣ: ಕೆ.ವಿಜಯಕಲಾ ಸುಧಾಕರ್
ತಾರಾಗಣ: ಪ್ರದೀಪ್, ಹೃತಿಕಾ, ಯೋಗರಾಜ್ ಭಟ್, ಜಹಾಂಗೀರ್, ಮಹಾಂತೇಶ್ ಮತ್ತು ಲಕ್ಷ್ಮಣ್ ಇತರರು.
ರೇಟಿಂಗ್ಸ್: 3

ಜಿ.ಆರ್.ಬಿ

‘ಕಾಲೇಜು ಜೀವನದ ಒಂದು ಪಾಠವಷ್ಟೇ… ಜೀವನವೆಂಬುದು ಔಟ್ ಆಫ್ ಸಿಲಬಸ್’ ಎಂದು ಕಾಲೇಜಿನಲ್ಲಿ ನೀತಿಪಾಠ ಬೋಧಿಸುವ ನಾಯಕ ದೇವ್ (ಪ್ರದೀಪ್), ಚಿಕ್ಕ ವಯಸ್ಸಿನಲ್ಲೇ ತಕ್ಕಮಟ್ಟಿಗೆ ಗುರಿ ಮುಟ್ಟಿರುತ್ತಾನೆ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಲೇ ಓದಿನ ಕಡೆಗೂ ಆಸಕ್ತಿ ವಹಿಸಿರುವ ನಾಯಕ, ಎಲ್ಲರಿಗೂ ಅಚ್ಚುಮೆಚ್ಚು. ಅಷ್ಟಕ್ಕೂ ಆತನ ಓದಿಗೆ ಸಹಾಯಹಸ್ತ ಚಾಚಿದವರು ಕಂಪನಿಯ ಮಾಲೀಕ..!

ಇಂತಿಪ್ಪ ನಾಯಕನಿಗೆ ಸಹಪಾಠಿ ದಿವ್ಯ (ಹೃತಿಕಾ) ಮೇಲೆ ಪ್ಯಾರ್‌ಗೆ ಆಗ್ಬಿಡುತ್ತೆ. ಅಲ್ಲಿಂದ ಕಥೆ ಮತ್ತೊಂದು ಮಜಲಿಗೆ ಹೊರಳಿಕೊಳ್ಳುತ್ತದೆ. ಕಥೆಯಲ್ಲಿ ಮಾಸ್, ಕ್ಲಾಸ್ ಅಂಶಗಳು ಇರಲೇಬೇಕೆಂಬ ಕಾರಣಕ್ಕೋ ಏನೋ ಲವ್, ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಎಲ್ಲವನ್ನೂ ಬೆರೆಸಲಾಗಿದೆ. ಯಾವುದೂ ಹದಗೆಟ್ಟು ಹೋಗಬಾರದೆಂಬ ಎಚ್ಚರವನ್ನೂ ಅಲ್ಲಲ್ಲಿ ವಹಿಸಿದ್ದಾರೆ ನಿರ್ದೇಶಕ ಪ್ರದೀಪ್ ದೊಡ್ಡಯ್ಯ.

ದೇಶ, ವಿದೇಶದಲ್ಲಿ ಕಥೆ ನಡೆಯುತ್ತದೆ. ಹೀಗಾಗಿ ಕಣ್ಣಿಗೆ ಸಾಕಷ್ಟು ದೃಶ್ಯಗಳು ಹಿತಕರ. ಈ ಮಧ್ಯೆ ನಾಯಕನನ್ನೇ ನಂಬಿಕೊಂಡ ದಿವ್ಯ, ಅತ್ತ ಮನೆಯವರ ಒತ್ತಡಕ್ಕೆ ಬೇರೆ ಮದುವೆಯಾಗುವ ನಿರ್ಧಾರಕ್ಕೆ ಮುಂದಾಗುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾದರೆ ಮುಂದಾ..?

ಕಥೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಒಂದು ಹಂತಕ್ಕೆ ಕುತೂಹಲಕಾರಿ ಘಟ್ಟಕ್ಕೆ ಕೊಂಡೊಯ್ದು ನಿಲ್ಲಿಸುತ್ತಾರೆ ನಿರ್ದೇಶಕ. ಮೊದಲೇ ಹೇಳಿದಂತೆ ಕಾಲೇಜಿನ ಪಾಠಕ್ಕಿಂತ ಜೀವನದ ಅನುಭವವೇ ಪ್ರಮುಖ ಪಾಠ ಎಂಬುದೇ ಇಡೀ ಚಿತ್ರದ ಕಥಾಸಾರಂಶ. ವಿದ್ಯಾರ್ಥಿಗಳಿಗೆ ಒಂದಷ್ಟು ಸಂದೇಶ ಹೇಳುವ ಪ್ರಯತ್ನ ಮಾಡಲಾಗಿದೆ.

ನಾಯಕ, ನಿರ್ದೇಶಕನಾಗಿ ಪ್ರದೀಪ್ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ದಿವ್ಯ ಪಾತ್ರದ ಮೂಲಕ ಹೃತಿಕಾ ಹತ್ತಿರವಾಗುತ್ತಾರೆ. ಯೋಗರಾಜ್ ಭಟ್, ಜಹಾಂಗೀರ್, ಮಹಾಂತೇಶ್ ಮತ್ತು ಲಕ್ಷ್ಮಣ್ ಕಾಮಿಡಿ ಕಚಗುಳಿಯ ಮೂಲಕ ರಿಲ್ಯಾಕ್ಸ್ ಮಾಡುತ್ತಾರೆ. ತಾಂತ್ರಿಕವರ್ಗ ಸಿನಿಮಾಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಿದೆ.

Previous articleಪೊಲೀಸ್ ಪೇದೆಯ ಕೊರಳಪಟ್ಟಿ ಹಿಡಿದು ಹಲ್ಲೆ
Next articleಮತ್ತೋರ್ವ ಮಾಲಾಧಾರಿ ಸಾವು