ಧಾರವಾಡ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೇಗೆ ಪಡೆದುಕೊಳ್ಳಬೇಕೆಂಬುದು ಗೊತ್ತಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಿಎಂಗೆ ತಿರುಗೇಟು ನೀಡಿದರು.
ನಗರದ ಜುಬಿಲಿ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ೨ಎ ಮೀಸಲಾತಿ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಾಂತಿ ಕೊನೆಗೆ ಕ್ರಾಂತಿ ಮಾರ್ಗದ ಮೂಲಕವಾದರೂ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ. ಈಗ ಮೀಸಲಾತಿ ಸಿಗದಿದ್ದರೆ ೨೦೨೮ರಲ್ಲಿ ನಮ್ಮ ಸಮಾಜದ ಒಳಿತು ಬಯಸುವ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತಂದು ಅವರಿಂದ ಮೀಸಲಾತಿ ಪಡೆದೇ ತೀರುತ್ತೇವೆ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಸರಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನ ಪಟ್ಟರೂ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪೊಲೀಸರ ಲಾಠಿಚಾರ್ಜ್‌ನಿಂದ ಧೃತಿಗೆಡುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಅಸಂವಿಧಾನಿಕ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಮ್ಮದು ಸಂವಿಧಾನ ಪರವಾದ ಹೋರಾಟ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸುವುದು ಸಂವಿಧಾನಾತ್ಮಕ ಪ್ರಕ್ರಿಯೇ ತಾನೇ ಎಂಬುದನ್ನು ಸಿಎಂ ಸಿದ್ದರಾಮಯ್ಯ ಮೊದಲು ಸ್ಪಷ್ಟಪಡಿಸಲಿ ಎಂದರು.
ನಮಗೂ ಸಂವಿಧಾನ ಗೊತ್ತು….
ಸಂವಿಧಾನವನ್ನು ನೀವು ಒಬ್ಬರೇ ಓದಿಕೊಂಡಿಲ್ಲ, ನಾವೂ ಓದಿಕೊಂಡಿದ್ದೇವೆ. ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಕೇವಲ ನಿಮ್ಮೊಬ್ಬರ ಸ್ವತ್ತಲ್ಲ. ದೇಶದ ೧೪೦ ಕೋಟಿ ಜನರ ಸ್ವತ್ತು. ಅಸಂವಿಧಾನಿಕ ಹೋರಾಟ ಎಂದು ಹೇಳಿರುವುದು ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾನ. ನೀವು ಹೋರಾಟವನ್ನು ಹತ್ತಿಕ್ಕಬಹುದೆಂದು ತಿಳಿದಿದ್ದರೆ ಅದು ಕನಸಿನ ಮಾತು. ಹೋರಾಟದ ಮೂಲಕವೇ ನಾವು ಮೀಸಲಾತಿ ಪಡೆಯುವುದು ನಿಶ್ಚಿತ ಎಂದು ಸ್ವಾಮೀಜಿ ಹೇಳಿದರು.