ಮುಂಬೈ: ಬಿಜೆಪಿಯ ಸಂಸದ ನಿತೇಶ್ ರಾಣೆ ಈಗ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡುವ ಮೂಲಕ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮೊದಲೇ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಈ ಸಂಸದರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಂತ ರಾಮಗಿರಿ ಮಹಾರಾಜರ ವಿರುದ್ಧ ಯಾರಾದರೂ ಏನನ್ನಾದರೂ ಹೇಳಿದರೆ ನಿಮ್ಮ ಮಸೀದಿಯೊಳಗೆ ಬಂದು ಒಬ್ಬೊಬ್ಬರಿಗೆ ಹೊಡೆಯುತ್ತೇವೆ, ನೆನಪಿಡಿ ಎಂದು ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಹ್ಮದ್‌ನಗರ ಜಿಲ್ಲೆಯ ಶ್ರೀರಾಮಪುರ ಹಾಗೂ ಟೋಪ್‌ಖಾನ್ ಪ್ರದೇಶಗಳಲ್ಲಿ ಹಿಂದೂ ಧರ್ಮದರ್ಶಿ ಮಹಂತ್ ರಾಮಗಿರಿ ಮಹಾರಾಜ್ ಅವರನ್ನು ಬೆಂಬಲಿಸಿ ಭಾನುವಾರ ನಡೆದಿರುವ ಎರಡು ಸಾರ್ವಜನಿಕ ಸಭೆಗಳಲ್ಲಿ ಶಾಸಕರು ಭಾಷಣ ಮಾಡಿದ್ದಾರೆ. ಆದರೆ ನೆರೆಯ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯ ಪ್ರತಿಭಟಿಸಿ ಸಕಲ್ ಹಿಂದೂ ಸಮಾಜ ಅಹ್ಮದ್ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಣೆಯವರ ಈ ಮೇಲಿನ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ. ನಿತೇಶ್ ಅವರು ಮಹಾರಾಷ್ಟ್ರದ ಮಾಜಿ
ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ನಾರಾಯಣ ರಾಣೆಯ ಪುತ್ರರು. ಸದ್ಯ ರತ್ನಗಿರಿ-ಸಿಂಧುದುರ್ಗದ ಸಂಸದರು.
ತತ್ಸಂಬಂಧಿ ಬೆಳವಣಿಗೆಯಲ್ಲಿ ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್ವಾಡ್ ಅವರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮುಂಬೈ ಪೊಲೀಸ್ ಮುಖ್ಯಸ್ಥ ವಿವೇಕ್ ಪನ್ಸಾಲ್ಕರ್ ಅವರನ್ನು ಭೇಟಿಯಾಗಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.