ಸಂ.ಕ.ಸಮಾಚಾರ ಕಲಬುರಗಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸೋಮವಾರ ನಗರದ ದಕ್ಷಿಣ ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದ ಬಿಜೆಪಿ ಪ್ರತಿಭಟನಾ ಸಮಾವೇಶದಲ್ಲಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿರಬಹುದು’ ಎಂದು ಹೇಳಿಕೆ ನೀಡಿದ್ದ ಎನ್.ರವಿಕುಮಾರ್, ಪೊಲೀಸ್ ಅಧಿಕಾರಿಗಳ ವಿರುದ್ಧ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೂಡ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ಇಕ್ಕಳಕಿ ಅವರು ಜಾತಿ ನಿಂದನೆ ಕುರಿತು ರವಿಕುಮಾರ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಹೈಕೋರ್ಟ್ ಸೂಚನೆ ಮೇರೆಗೆ ಎನ್.ರವಿಕುಮಾರ್ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ದಕ್ಷಿಣ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಹೈಕೋರ್ಟ್ ಬಹಳ ಸ್ಪಷ್ಟವಾಗಿ ಸೂಚನೆ ನೀಡಿರುವುದರಿಂದ ಸೋಮವಾರ ವಿಚಾರಣೆಗೆ ಹಾಜರಾಗಿದ್ದೇನೆ. ಜೊತೆಗೆ ನನ್ನನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದೆAದು ನಿರ್ದೇಶನ ನೀಡಿದೆ. ವಿಚಾರಣೆಯಲ್ಲಿ ಪೊಲೀಸರ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ಕೊಟ್ಟಿದ್ದೇನೆ. ಸಂವಿಧಾನ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರೋದ್ರಿಂದ ಪೂರ್ಣ ಮನಸ್ಸಿನಿಂದ ತನಿಖೆಗೆ ಸಹಕಾರ ನೀಡಿದ್ದೇನೆ. ವಿಚಾರಣೆ ಅವಶ್ಯಕತೆ ಇದ್ರೆ ನಾನು ಹಾಜಾರಾಗುತ್ತೇನೆಂದು ಹೇಳಿದ್ದೇನೆ ಎಂದು ರವಿಕುಮಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.