ಆರ್ಥಿಕ ಸಂಕಷ್ಟಗಳ ಕಾರಣದಿಂದಾಗಿ ಕೆನಡಿಯನ್ನರು ಟ್ರುಡೋ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದರು. ಟ್ರುಡೋ ಎರಡನೇ ಅವಧಿಯಲ್ಲಿ ಕೆನಡಾದ ಆರ್ಥಿಕತೆ ಹೆಚ್ಚಿನ ಪ್ರಗತಿ ಸಾಧಿಸಲಿಲ್ಲ. ಬಹಳಷ್ಟು ಜನರು ನಿರುದ್ಯೋಗಿಗಳಾದರು. ಉಳಿದವರಿಗೆ ಏರುತ್ತಿದ್ದ ಬೆಲೆಗಳಿಗೆ ತಕ್ಕಂತೆ ಸಂಬಳ ಸಿಗದೆ, ಹಣದುಬ್ಬರ ಭಾರೀ ಹೆಚ್ಚಳ ಕಂಡಿತು. ಇದು ಸಾಲದೆಂಬಂತೆ, ಮನೆಗಳು ದುಬಾರಿಯಾಗಿದ್ದು, ಬಹಳಷ್ಟು ಕೆನೆಡಿಯನ್ನರಿಗೆ ವಾಸಿಸಲು ಒಂದು ಸ್ಥಳ ಹೊಂದುವುದೇ ಕಷ್ಟಕರವಾಗಿದೆ. ೨೦೨೨ರಲ್ಲಿ ಉತ್ತುಂಗಕ್ಕೇರಿದ ಹಣದುಬ್ಬರ, ಬಳಿಕ ಕ್ರಮೇಣ ಕಡಿಮೆಯಾಗತೊಡಗಿತು. ಆದರೆ ಅಷ್ಟರಲ್ಲಿ ಹಲವಾರು ರಾಜಕೀಯ ಹಗರಣಗಳು ಟ್ರುಡೋರ ವರ್ಚಸ್ಸನ್ನು ಹಾಳುಗೆಡವಿತ್ತು.
ಹಗರಣಗಳತ್ತ ಒಂದು ನೋಟ
೨೦೧೬ರಲ್ಲಿ ಟ್ರುಡೋ ಮತ್ತವರ ಕುಟುಂಬಸ್ತರು ಅಘಾ ಖಾನ್ ಅವರ ಖಾಸಗಿ ದ್ವೀಪದಲ್ಲಿ ರಜಾ ದಿನಗಳನ್ನು ಕಳೆದಿದ್ದರು. ೨೦೧೭ರಲ್ಲಿ, ಕೆನಡಾದ ನೈತಿಕ ಆಯುಕ್ತರು ಟ್ರುಡೋರನ್ನು ಖಾಸಗಿ ದ್ವೀಪದಲ್ಲಿ ವಾಸ್ತವ್ಯ, ಖಾಸಗಿ ಹೆಲಿಕಾಪ್ಟರ್ ಪ್ರಯಾಣದಂತಹ ಉಡುಗೊರೆಗಳನ್ನು ಸ್ವೀಕರಿಸಿದ್ದಕ್ಕಾಗಿ ಟೀಕಿಸಿದ್ದರು.
ಬಳಿಕ, ೨೦೨೦ರಲ್ಲಿ, ಟ್ರುಡೋ ಕುಟುಂಬಕ್ಕೆ ವಿ ಚಾರಿಟಿ ಎಂಬ ಕೆನಡಾದ ಯುವಜನ ಅಭಿವೃದ್ಧಿ ಮತ್ತು ಜಾಗತಿಕ ಬದಲಾವಣೆಯ ಗುರಿ ಹೊಂದಿರುವ ಲಾಭರಹಿತ ಸಂಸ್ಥೆ ನೂರಾರು ಸಾವಿರ ಡಾಲರ್‌ಗಳನ್ನು ನೀಡಿದ್ದ ವಿಚಾರ ಬೆಳಕಿಗೆ ಬಂತು. ವಿ ಡೇ' ಮತ್ತು ಶಾಲಾ ಕಾರ್ಯಕ್ರಮಗಳಿಗೆ ಹೆಸರಾಗಿದ್ದ ಸಂಸ್ಥೆ ೨೦೨೦ರಲ್ಲಿ ಹಣಕಾಸು ಮತ್ತು ರಾಜಕೀಯ ವಿವಾದಗಳಿಂದಾಗಿ ಸ್ಥಗಿತಗೊಂಡಿತು. ಟ್ರುಡೋ ಸರ್ಕಾರ ಸಂಸ್ಥೆಗೆ ೧೯.೫ ಮಿಲಿಯನ್ ಕೆನಡಿಯನ್ ಡಾಲರ್ ಮೌಲ್ಯದ ಗುತ್ತಿಗೆ ನೀಡಿದಾಗಲೇ ಈ ಬೆಳವಣಿಗೆ ನಡೆಯಿತು. ಹಿಂದೆ ಕೆನಡಾದ ಮೂಲನಿವಾಸಿ ವಿದ್ಯಾರ್ಥಿಗಳು ಬಲವಂತದ ವಸತಿ ಶಾಲೆಗಳಲ್ಲಿನ ಹಿಂಸೆ, ನಿರ್ಲಕ್ಷ÷್ಯ ಮತ್ತು ರೋಗಗಳಿಂದ ಸಾವಿಗೀಡಾಗಿದ್ದರು. ಸಾವನ್ನಪ್ಪಿದ ಮೂಲನಿವಾಸಿ ವಿದ್ಯಾರ್ಥಿಗಳನ್ನು ಗೌರವಿಸುವ, ಉಳಿದವರಿಗೆ ಬೆಂಬಲ ನೀಡುವ
ನ್ಯಾಷನಲ್ ಡೇ ಫಾರ್ ಟ್ರುತ್ ಆಂಡ್ ರಿಕಾನ್ಸಿಲೇಷನ್’ ಸಮಾರಂಭದಿಂದ ೨೦೨೧ರಲ್ಲಿ ಟ್ರುಡೋ ದೂರ ಉಳಿದಿದ್ದರು. ಮುಖ್ಯವಾದ ಸಮಾರಂಭದಲ್ಲಿ ಭಾಗವಹಿಸುವ ಬದಲು, ಟ್ರುಡೋ ತನ್ನ ಕುಟುಂಬದವರೊಡನೆ ಸರ್ಫಿಂಗ್ ಪ್ರವಾಸಕ್ಕೆ ತೆರಳಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಕಳೆದ ಚುನಾವಣೆಯಲ್ಲಿ ೩೩೮ ಸ್ಥಾನಗಳಲ್ಲಿ ಕೇವಲ ೧೫೩ ಸ್ಥಾನಗಳನ್ನು ಗೆದ್ದ ಟ್ರುಡೋ ಸರ್ಕಾರ ಅಲ್ಪ ಬಹುಮತ ಹೊಂದಿದೆ. ಇದರಿಂದಾಗಿ ಟ್ರುಡೋ ಅಧಿಕಾರದಲ್ಲಿ ಮುಂದುವರಿಯಲು ಜಗ್‌ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಾರ್ಟಿಯಂತಹ (ಎನ್‌ಡಿಪಿ) ಸಣ್ಣ ಪಕ್ಷಗಳ ಮೇಲೆ ಅವಲಂಬಿತರಾಗಿದ್ದರು.
ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ, ಟ್ರುಡೋರ ಆಪ್ತ ಸಹವರ್ತಿ, ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾದ ಕ್ರಿಸ್ತಿಯಾ ಫ್ರೀಲ್ಯಾಂಡ್ ಅವರು ರಾಜೀನಾಮೆ ನೀಡಿದರು. ಒಂದು ವೇಳೆ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಸಂಭಾವ್ಯ ಸವಾಲುಗಳನ್ನು ಟ್ರುಡೋ ಎದುರಿಸಬಲ್ಲರೇ ಎಂದು ಫ್ರೀಲ್ಯಾಂಡ್ ಪ್ರಶ್ನಿಸಿದ್ದರು. ಕನಿಷ್ಠ ೨೧ ಲಿಬರಲ್ ಸಂಸದರು ಬಹಿರಂಗವಾಗಿಯೇ ಟ್ರುಡೋರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಫ್ರೀಲ್ಯಾಂಡ್ ರಾಜೀನಾಮೆಯ ಬಳಿಕ ಈ ಒತ್ತಾಯ ತೀವ್ರಗೊಂಡಿತ್ತು.
ಮುಂದೇನು ಎಂಬ ಪ್ರಶ್ನೆ?
ಲಿಬರಲ್ ಪಕ್ಷ ಮುಂದಿನ ನಾಯಕನನ್ನು ಆರಿಸುವ ತನಕ ಟ್ರುಡೋ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಸೋಮವಾರ, ಕೆನಡಾದಲ್ಲಿ ಕಿಂಗ್ ಚಾರ್ಲ್ಸ್ ೩ ಅವರ ಪ್ರತಿನಿಧಿಯಾದ ಗವರ್ನರ್ ಜನರಲ್ ಮೇರಿ ಸಿಮನ್ ಅವರು ಹೌಸ್ ಆಫ್ ಕಾಮನ್ಸ್ ಅನ್ನು ಅಧಿಕೃತವಾಗಿ ವಿಸರ್ಜಿಸದೆ, ಸಂಸತ್ತಿನ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಟ್ರುಡೋ ಘೋಷಿಸಿದರು.
ಮಾರ್ಚ್ ೨೪ರ ತನಕ ಸಂಸತ್ತಿನ ಚಟುವಟಿಕೆಗಳು ನಿರ್ಬಂಧಿಸಲ್ಪಡಲಿವೆ. ಈ ಅವಧಿ ಲಿಬರಲ್ ಪಕ್ಷಕ್ಕೆ ಸರ್ಕಾರದ ಮುಖ್ಯ ಚಟುವಟಿಕೆಗಳನ್ನು ಮುಂದುವರಿಸುತ್ತಲೇ, ಮುಂದಿನ ನಾಯಕನನ್ನು ಆರಿಸಲು ಸಮಯಾವಕಾಶ ಒದಗಿಸುತ್ತದೆ. ಸಂಸತ್ತಿನ ಅಧಿವೇಶನ ಪುನರಾರಂಭಗೊಂಡಾಗ, ಸರ್ಕಾರ ಬಹುಮತ ಸಾಬೀತುಪಡಿಸುವ ಅಗತ್ಯ ಎದುರಾಗಲಿದ್ದು, ಇದು ಲಿಬರಲ್ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ.
ಲಿಬರಲ್ ಸರ್ಕಾರ ಈಗಾಗಲೇ ಅಲ್ಪ ಬಹುಮತ ಹೊಂದಿದ್ದು, ವಿಪಕ್ಷಗಳು ಲಿಬರಲ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವ ಗುರಿ ಹೊಂದಿವೆ. ಹೊಸ ಸರ್ಕಾರವನ್ನು ಆರಿಸಲು ಫೆಡರಲ್ ಚುನಾವಣೆ ಅನಿವಾರ್ಯವಾಗಬಹುದು. ಕೆನಡಾದ ಸಾರ್ವತ್ರಿಕ ಚುನಾವಣೆ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಿದ್ದು, ವಿಪಕ್ಷಗಳು ಚುನಾವಣೆ ನಡೆಯುವಂತೆ ಮಾಡಿದರೆ, ಬಹುಶಃ ಮೇ ತಿಂಗಳಲ್ಲೇ ಚುನಾವಣೆ ನಡೆದೀತು.
ಒಂದೊಮ್ಮೆ ಮೊದಲ ಬಾರಿಗೆ ಸರ್ಕಾರ ಬಹುಮತ ಸಾಬೀತುಪಡಿಸಿದರೂ, ಬಳಿಕ ಅದು ಮತ್ತೆ ಅಲ್ಪಮತಕ್ಕೆ ಕುಸಿಯುವ ಸಾಧ್ಯತೆಗಳಿವೆ. ಉದಾಹರಣೆಗೆ, ಎಪ್ರಿಲ್ ತಿಂಗಳ ವೇಳೆಗೆ ಬಜೆಟ್‌ಗೆ ಒಪ್ಪಿಗೆ ಪಡೆಯುವಂತಹ ಸಂದರ್ಭದಲ್ಲಿ, ಸರ್ಕಾರ ಬಹುಮತ ಕಳೆದುಕೊಳ್ಳಬಹುದು. ಸರ್ಕಾರ ಹೇಗೆ ಹಣವನ್ನು ವ್ಯಯಿಸಲಿದೆ ಎನ್ನುವುದನ್ನು ಬಜೆಟ್ ನಿರೂಪಿಸುವುದರಿಂದ, ಇತರ ಪಕ್ಷಗಳ ಬೆಂಬಲ ಲಭಿಸದಿದ್ದರೆ ಸರ್ಕಾರ ಪತನಗೊಳ್ಳಬಹುದು.
ಮುಂದಿನ ನಾಯಕ ಯಾರು?
ಕ್ರಿಸ್ತಿಯಾ ಫ್ರೀಲ್ಯಾಂಡ್: ಟ್ರುಡೋ ಸರ್ಕಾರದಲ್ಲಿ ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾಗಿದ್ದ ಫ್ರೀಲ್ಯಾಂಡ್ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಬಣ್ಣಿತವಾಗಿದ್ದರು. ಆದರೆ, ಟ್ರುಡೋ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ರಾಜೀನಾಮೆ ನೀಡಿದರು.
ಮಾರ್ಕ್ ಕಾರ್ನೀ: ಹಿಂದೆ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಎರಡರ ನೇತೃತ್ವ ವಹಿಸಿದ್ದ ಕಾರ್ನೀ ಓರ್ವ ಪ್ರಬಲ ಅಭ್ಯರ್ಥಿಯಾಗಿದ್ದಾರೆ.
ಮೆಲಾನಿ ಜಾಲಿ: ಜಾಲಿ ೨೦೨೧ರಿಂದ ವಿದೇಶಾಂಗ ಸಚಿವರಾಗಿದ್ದು, ರಾಜತಾಂತ್ರಿಕ ಪಾತ್ರಗಳಲ್ಲಿ ಅನುಭವ ಹೊಂದಿದ್ದಾರೆ. ಅವರು ಇಂದಿಗೂ ಪಕ್ಷದಲ್ಲಿ ಜನಪ್ರಿಯ, ಪ್ರಭಾವಿಯಾಗಿದ್ದಾರೆ. ಡಾಮಿನಿಕ್ ಲೆಬ್ಲಾಂಕ್: ಫ್ರೀಲ್ಯಾಂಡ್ ರಾಜೀನಾಮೆಯ ಬಳಿಕ ಲೆಬ್ಲಾಂಕ್ ಹಣಕಾಸು ಸಚಿವರ ಹುದ್ದೆಗೇರಿದ್ದು, ನಂಬಿಕಾರ್ಹ ನಾಯಕರಾಗಿದ್ದಾರೆ.
ಅನಿತಾ ಆನಂದ್: ಸಾರಿಗೆ ಸಚಿವರಾದ ಅನಿತಾ ಆನಂದ್ ಅವರೂ ಸಹ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.
ಚುನಾವಣೆಯಲ್ಲಿ ಪಿಯರ್ ಪಾಲಿಯೆವ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಲಿಬರಲ್ ಪಕ್ಷಕ್ಕಿಂತ ೨೯ ಸ್ಥಾನ ಮುಂದಿದೆ. ಅಂದರೆ, ಅವರು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಿದ್ದು, ಟ್ರುಡೋ ಬಳಿಕ ಲಿಬರಲ್ ಪಕ್ಷದ ಯಾವ ನಾಯಕ ಪ್ರಧಾನಿಯಾದರೂ ಅದು ದೀರ್ಘಕಾಲಿಕವಾಗಿರಲಾರದು.
ಖಲಿಸ್ತಾನಿಗಳೊಡನೆ ಬಾಂಧವ್ಯ
ಒಟ್ಟಾವಾದ ಪಾರ್ಲಿಮೆಂಟ್ ಹಿಲ್‌ನಲ್ಲಿ ನಡೆದ ದೀಪಾವಳಿ ಆಚರಣೆಯ ವೇಳೆ, ಕೆನಡಾದಲ್ಲಿ ಖಲಿಸ್ತಾನಿ ಚಳವಳಿಯ ಕುರಿತು ಟ್ರುಡೋ ಬಹಿರಂಗವಾಗಿ ಮಾತನಾಡಿದ್ದರು. “ಕೆನಡಾದಲ್ಲಿರುವ ಖಲಿಸ್ತಾನಿ ಬೆಂಬಲಿಗರೆಲ್ಲರೂ ಸಮಸ್ತ ಸಿಖ್ ಸಮುದಾಯದ ಪ್ರತಿನಿಧಿಗಳಲ್ಲ. ಹಾಗೆಯೇ, ಮೋದಿ ಸರ್ಕಾರಕ್ಕೆ ಬೆಂಬಲ ನೀಡಿದವರು ಭಾರತದ ಎಲ್ಲ ಹಿಂದೂಗಳ ಪ್ರತಿನಿಧಿಗಳೂ ಅಲ್ಲ” ಎಂದು ಟ್ರುಡೋ ಹೇಳಿದ್ದರು. ಸಿಖ್ ಸಮುದಾಯ ಕೆನಡಾದ ಜನಸಂಖ್ಯೆಯ ೨%ಕ್ಕೂ ಹೆಚ್ಚಿನ ಪಾಲು ಹೊಂದಿದ್ದು, ೨೦೨೨ರ ವೇಳೆಗೆ ೮ ಲಕ್ಷ ಸಿಖ್ಖರು ಕೆನಡಾದಲ್ಲಿದ್ದರು. ಅವರು ಚುನಾವಣೆಗಳ ಮೇಲೆ ಭಾರೀ ಪ್ರಭಾವ ಹೊಂದಿದ್ದು, ಗ್ರೇಟರ್ ಟೊರಾಂಟೋ ಮತ್ತು ವ್ಯಾಂಕೋವರ್ ನಗರಗಳಲ್ಲಿ ಹೆಚ್ಚಿನ ಉಪಸ್ಥಿತಿ ಹೊಂದಿದ್ದಾರೆ. ಟ್ರುಡೋ ಸರ್ಕಾರ ಕೆನಡಾದ ಸಿಖ್ ಸಮುದಾಯದೊಡನೆ ಹೆಚ್ಚಿನ ಹೊಕ್ಕುಬಳಕೆ ಹೊಂದಿತ್ತು. ಅದರಲ್ಲೂ, ಎನ್‌ಡಿಪಿ ನಾಯಕ ಜಗ್‌ಮೀತ್ ಸಿಂಗ್ ಅವರಂತಹ ಖಲಿಸ್ತಾನ ಪರ ನಾಯಕರೊಡನೆ ಟ್ರುಡೋ ಆತ್ಮೀಯ ಬಾಂಧವ್ಯ ಹೊಂದಿದ್ದರು.
ನವದೆಹಲಿಯ ದೃಷ್ಟಿಕೋನ
ಸೆಪ್ಟೆಂಬರ್ ೨೦೨೩ರಲ್ಲಿ, ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಟ್ರುಡೋ ಆರೋಪಿಸಿದ ಬಳಿಕ, ಭಾರತ ಮತ್ತು ಕೆನಡಾ ಸಂಬಂಧ ಉದ್ವಿಗ್ನಗೊಂಡಿತು. ಆದರೆ, ನೂತನ ಸರ್ಕಾರ ಅಧಿಕಾರಕ್ಕೆ ಬಂದರೆ, ಉದ್ವಿಗ್ನತೆ ಶಮನಗೊಳಿಸಿ, ಉಭಯ ದೇಶಗಳ ಸಂಬಂಧವನ್ನು ಸುಧಾರಿಸಬಹುದು.
ಕೆನಡಾದಲ್ಲಿ ಕೇವಲ ಪ್ರಧಾನಿ ಬದಲಾದರೂ, ಭಾರತದೊಡನೆ ಸಂಬಂಧವನ್ನು ಉತ್ತಮಪಡಿಸಬಹುದು. ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಕೆನಡಾ ಪ್ರಧಾನಿಯ ಬದಲಾವಣೆ ಧನಾತ್ಮಕ ಬೆಳವಣಿಗೆ ಎಂದು ಕೆನಡಿಯನ್ ಪತ್ರಕರ್ತ ಮಿಲೆವ್ಸ್ಕಿ ಅಭಿಪ್ರಾಯ ಪಟ್ಟಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಪಡಿಸಲು ಮಾತುಕತೆ ನಡೆಸಬಹುದು. ಇದರಿಂದ, ಉಭಯ ದೇಶಗಳು ತಮ್ಮ ಬಾಂಧವ್ಯವನ್ನು ಸರಿಪಡಿಸಿ, ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸಬಹುದು ಎಂದು ಅವರು ಹೇಳಿದ್ದಾರೆ.ಆದರೆ, ವಾಸ್ತವವಾಗಿ ಅಷ್ಟೊಂದು ಬದಲಾವಣೆಗಳಾಗುವುದು ಕಷ್ಟ ಎಂದೂ ಮಿಲೆವ್ಸ್ಕಿ ಹೇಳಿದ್ದಾರೆ.