ಹುಬ್ಬಳ್ಳಿ: ಜೆಮ್ ಪೋರ್ಟಲ್‌ನಲ್ಲಿ ನೋಂದಣಿಯಾದ ಕೌಶಲಭರಿತ ಉತ್ಪಾದನೆಗಳಿಗೆ ಕೇಂದ್ರ ಸರಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಸಾಕಷ್ಟು ಉದ್ಯಮಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ಭಾಗದ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೋದ್ಯಮಿಗಳು ಜೆಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕೇಂದ್ರ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ನಗರದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ‘ಐಮೆಕ್ಸ್-೨೦೨೫’ ಕೈಗಾರಿಕಾ ಮತ್ತು ಉತ್ಪಾದನಾ ವಸ್ತು ಪ್ರದರ್ಶನ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೇಂದ್ರ ಸರಕಾರವು ಸಣ್ಣ ಕೈಗಾರಿಕೆಗಳ ಬೆಳವಣಿಗೆ ಪೂರಕವಾಗಿ ದೇಶದಾದ್ಯಂತ ಮಾರುಕಟ್ಟೆ ಒದಗಿಸುವ ಜತೆಗೆ ಶೇ. ೨೫ರಷ್ಟು ಉತ್ಪಾದನೆಯನ್ನು ಖರೀದಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಅತೀ ಸಣ್ಣ, ಸಣ್ಣ ಮತ್ತು ಮಧ್ಯ ಕೈಗಾರಿಕೆಗಳು ಪ್ರಯೋಜನ ಪಡೆಯಬೇಕು ಎಂದರು.
ಇದರಲ್ಲಿ ಶೇ. 4ರಷ್ಟು ಎಸ್ಸಿ/ಎಸ್ಟಿ, ಶೇ. 3ರಷ್ಟು ಮಹಿಳೆ ಕೈಗಾರಿಕೋದ್ಯಮಿಗಳ ಉತ್ಪಾದನೆ ಖರೀದಿಸಲು ಮೀಸಲಿರಿಸಲಾಗಿದೆ. ಶೇ. 1.5ರಷ್ಟು ಮಹಿಳಾ ಕೈಗಾರಿಕೋದ್ಯಮಿಗಳು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದಾರೆ. ಸಣ್ಣ ಕೈಗಾರಿಕೆಯಲ್ಲಿರುವ ಮಹಿಳಾ ಉದ್ಯಮಿಗಳು ಇದರಿಂದ ದೂರ ಉಳಿದಿದ್ದು, ಜೆಮ್ ಪೋರ್ಟಲ್ ಬಗ್ಗೆ ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕೈಗಾರಿಕೆಗಳ ಬೆಳವಣಿಗೆ ಮತ್ತು ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯ ಸೌಕರ್ಯ ಇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ೧೦೦ ಲಕ್ಷ ಕೋಟಿ ರೂ. ಹಣವನ್ನು ಮೂಲಸೌಕರ್ಯ ಕಲ್ಪಿಸಲು ವ್ಯಯಿಸುತ್ತಿದೆ. ಆ ಮೂಲಕ ಕೈಗಾರಿಕೆ, ವಾಣಿಜ್ಯ, ವ್ಯಾಪಾರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದರ ಪರಿಣಾಮದಿಂದ ಹೂಡಿಕೆದಾರರಿಂದ ದೇಶದಲ್ಲಿ ೬.೬೭ ಬಿಲಿಯನ್ ಡಾಲರ್ ಹೂಡಿಕೆಯಾಗಿದೆ ಎಂದು ಹೇಳಿದರು.
ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಗಿರೀಶ ನಲವಡಿ, ಡಿಐಸಿ ಜಂಟಿ ನಿರ್ದೇಶಕ ಶಿವಪುತ್ರಪ್ಪ, ಬಿ.ಎಸ್.ಜವಳಗಿ, ರಮೇಶ ಪಾಟೀಲ, ಶಂಕರ ಹಿರೇಮಠ, ಜೆ.ಸಿ. ಮಠದ, ಅಶೋಕ ಕನ್ನೂರ, ಅಶೋಕ ಕಲಬುರ್ಗಿ, ಅನೀಲಕುಮಾರ ಜೈನ್, ಭರತ ಕುಲಕರ್ಣಿ, ರಮೇಶ ಯಾದವಾಡ, ಸೇರಿದಂತೆ ಇತರರು ಇದ್ದರು.
ನವೀಕರಿಸಬಹುದಾದ ಇಂಧನಕ್ಕೆ ಒತ್ತು, ೨೨ ಗಂಟೆ ವಿದ್ಯುತ್
ಅನ್ಯ ರಾಷ್ಟ್ರಗಳಲ್ಲಿ ಲಾಜಿಸ್ಟಿಕ್ ಶುಲ್ಕ ಶೇ.೬ ರಿಂದ ೭ ರಷ್ಟಿದ್ದರೆ, ಭಾರತದಲ್ಲಿ ಶೇ.೧೨ರಷ್ಟು ಲಾಜಿಸ್ಟಿಕ್ ಶುಲ್ಕವಿದೆ. ಹೀಗಾಗಿ ಗತಿಶಕ್ತಿ ಯೋಜನೆಯಡಿ ರೈಲು, ಜಲ, ರಸ್ತೆ ಮಾರ್ಗವನ್ನು ಸೂಕ್ತವಾಗಿ ಜೋಡಿಸಿ ಲಾಜಿಸ್ಟಿಕ್ ಶುಲ್ಕ ಕಡಿಮೆಗೊಳಿಸುವ ಕೆಲಸ ಮಾಡಲಾಗುತ್ತಿದೆ. ಕೈಗಾರಿಕೆಗಳಿಗೆ ವಿದ್ಯುತ್, ನೀರು, ಸಂಪರ್ಕ ಮತ್ತು ಅಗತ್ಯ ಸೌಲಭ್ಯಗಳ ಬೇಕಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಹೆಚ್ಚಿಸಿದ್ದರ ಪರಿಣಾಮ ದೇಶದಲ್ಲಿ ದಿನದ ೨೨ ಗಂಟೆಗಳ ಕಾಲವು ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸದ್ಯ ೪೬೦ ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ೦.೧ರಷ್ಟು ಮಾತ್ರ ವಿದ್ಯುತ್ ಕೊರತೆ ಇದೆ. ಆದರೆ, ರಾಜ್ಯ ಸರ್ಕಾರಗಳು ಬೇರೆ ಬೇರೆ ಉಚಿತ ಯೋಜನೆಗಳು ನೀಡಿದ್ದರಿಂದ ವಿದ್ಯುತ್‌ನ್ನು ಕಡಿತಗೊಳಿಸುವ ಕೆಲಸ ಮಾಡುತ್ತಿವೆ ಎಂದರು.
ಅಮೇರಿಕಾಕ್ಕೆ ಟಾಂಗ್..
ಭಾರತ ೨೦೨೬-೨೭ಕ್ಕೆ ೩ನೇ ಆರ್ಥಿಕ ಶಕ್ತಿ ಅತ್ಯಾಧುನಿಕತೆ ಆ್ಯಪ್ ಸೆಟ್ ಪರಿಚಯಗೊಂಡ ಸಂದರ್ಭದಲ್ಲಿ ಅಮೆರಿಕಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೀಗ ಅದೇ ಮೊಬೈಲ್ ತಯಾರಿಕೆಯಲ್ಲಿ ಭಾರತ ಸಾಧನೆ ಮಾಡಿದ್ದು, ಭಾರತದಿಂದ ಅಮೆರಿಕಾಕ್ಕೆ ೮೪,೨೯೪ ಕೋಟಿ ರೂ. ಲಾಭ ಆಗಿದೆ. ೧೪೦ ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಾರ್ಕೆಟಿಂಗ್ ಸೆಕ್ಟರ್‌ನಲ್ಲಿ ದೊಡ್ಡ ಅವಕಾಶವಿದ್ದು, ಕೈಗಾರಿಕೋದ್ಯಮ ಇಲ್ಲಿ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಬೇಕು. ಇದೆಲ್ಲದರ ಪರಿಣಾಮ ೨೦೨೬-೨೭ಕ್ಕೆ ಭಾರತ ವಿಶ್ವದ ೩ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.