ಜಾತಿಗಣತಿ ವರದಿ ಬಗ್ಗೆ ನಮಗೂ ಆತಂಕ

0
38

ಕಲಬುರಗಿ: ಜಾತಿ ಗಣತಿಯ ಕುರಿತು ನಾನಾಗಲಿ, ಮಠಾಧೀಶರಾಗಲಿ ಹೇಳಿದರೆ ನಡೆಯೊಲ್ಲ. ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ಈ ಬಗ್ಗೆ ನಮಗೂ ಆತಂಕ ಇದೆ ಎಂದು ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.
ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಠಾಧೀಶರು ಹೇಳಿದಂತೆ ಸರ್ಕಾರಗಳು ನಡೆಯುವುದಿಲ್ಲ. ಅದರೆ ಸರಕಾರ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಮಠಾಧೀಶರೇನು ಕರೆಕ್ಟ್ ಇದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಒಮ್ಮೊಮ್ಮೆ ಅವರ ಅಭಿಪ್ರಾಯ ಸಹ ತಪ್ಪು ಆಗಬಹುದು. ಜಾತಿಗಣತಿ ವರದಿಯ ಬಗ್ಗೆ ತಿರಸ್ಕಾರವಾಗಲಿ, ಸ್ವೀಕಾರ ಮತ್ತು ಮಾರ್ಪಾಡಿಸುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಯಾವುದೂ ಏನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು.
ಕೆಲ ದಿನಗಳ ಹಿಂದಿನ ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ಓಪನ್ ಮಾಡಿ ಸಾರಾಂಶ ಹೇಳಿದ್ದಾರೆ. ಊಹೆ ಮಾಡಿಕೊಂಡು ನಾನು ಏನೂ ಹೇಳಲ್ಲ, ವರದಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಜಾತಿವಾರು ಜನಗಣತಿ ಅಲ್ಲ, ಅದೊಂದು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ವರದಿ ಅಷ್ಟೇ ಎಂದರು.
ದಿ. 17ರ ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಒಂದೇ ವಿಷಯದ ಮೇಲೆ ಚರ್ಚೆಯಾಗಲಿದೆ. ಕ್ಯಾಬಿನೆಟ್ ನಿರ್ಧಾರ ಏನು ಆಗುತ್ತೆ ಎಂದು ಅಂದೇ ನಿರ್ಧಾರವಾಗಲಿದೆ. ಜಾತಿಗಣತಿ ಅವೈಜ್ಞಾನಿಕ ಎಂದು ಬಿಜೆಪಿಯವರು ಈಗ ಹೇಳುತ್ತಿದ್ದಾರೆ. ಈ ಹಿಂದೆ ನಾಲ್ಕು ವರ್ಷ ಅವರದೇ ಸರ್ಕಾರ ಇದ್ದಾಗ ಅದನ್ನು ಯಾಕೆ ರದ್ದು ಮಾಡಲಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿಯವರು ಯಾವುದು ಸಹ ಸರಿಯಾಗಿ ಹೇಳುವದಿಲ್ಲ. ಲಿಂಗಾಯತರಲ್ಲಿ ಯಾವುದೇ ಒಡಕು ಉಂಟು ಮಾಡಿಲ್ಲ ಎಂದು ಪುನರುಚ್ಚರಿಸಿದರು.

Previous articleಅಶೋಕ ಹಾರನಹಳ್ಳಿ ಬಣದ ಗುರುರಾಜಗೆ ಜಯ
Next articleಸಾಮಾಜಿಕ ಜಾಲತಾಣದಲ್ಲಿ ವೀಡಿಯೋ: ಇಬ್ಬರು ಯುವಕರ ಬಂಧನ