ಕೇಂದ್ರ ಸರ್ಕಾರದ ಸಚಿವ ಸಂಪುಟ ಜನಗಣತಿಯಲ್ಲಿ ಜಾತಿಗಣತಿಯನ್ನು ಕೈಗೊಳ್ಳಲು ತೀರ್ಮಾನಿಸಿರುವುದು ಇಡೀ ದೇಶದ ರಾಜಕೀಯ ರಂಗದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಲಿದೆ. ೧೯೩೧ರಲ್ಲಿ ಮಾತ್ರ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿ ನಡೆದಿತ್ತು. ಸ್ವಾತಂತ್ರ್ಯ ಬಂದ ಮೇಲೆ ಯಾವ ಸರ್ಕಾರವೂ ಜಾತಿ ಗಣತಿಯನ್ನು ಒಪ್ಪಿರಲಿಲ್ಲ. ಅದು ಜೇನುಗೂಡಿಗೆ ಕಲ್ಲು ಎಸೆದಂತೆ ಎಂಬುದು ತಿಳಿದಿತ್ತು. ಅದರಿಂದ ಕೇಂದ್ರ ಸರ್ಕಾರ ಪ್ರತಿ ೧೦ ವರ್ಷಕ್ಕೊಮ್ಮೆ ಜನಗಣತಿ ಕೈಗೊಂಡರೂ ಜಾತಿ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಜಾತಿ ಗಣತಿಗೆ ಒತ್ತಾಯ ಮಾಡುತ್ತ ಬಂದಿದ್ದವು. ಆದರೂ ಕೇಂದ್ರ ಒಪ್ಪಿರಲಿಲ್ಲ. ಬಿಹಾರ, ತೆಲಂಗಾಣ, ಕರ್ನಾಟಕ ರಾಜ್ಯ ಸರ್ಕಾರಗಳು ಜಾತಿ ಸಮೀಕ್ಷೆ ನಡೆಸಿ ಅದರಂತೆ ಮೀಸಲಾತಿ ನೀಡಲು ಮುಂದಾಗಿವೆ. ನಮ್ಮಲ್ಲಿ ಕಾನೂನು ಬದ್ಧವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮಾತ್ರ ನೀಡಲಾಗಿದೆ. ಜಾತಿವಾರು ವರ್ಗೀಕರಣ ನಡೆದಿಲ್ಲ. ೨೦೧೦ರಲ್ಲಿ ಆಗಿನ ಪ್ರಧಾನಿ ಲೋಕಸಭೆಯಲ್ಲಿ ಜಾತಿ ಸಮೀಕ್ಷೆ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ ಕಾರ್ಯಗತವಾಗಲಿಲ್ಲ. ಸಂವಿಧಾನದ ೨೪೬ನೇ ವಿಧಿಯಂತೆ ಜನಗಣತಿ ನಡೆಯುತ್ತದೆ. ಅದರಲ್ಲಿ ಜಾತಿ ಸಮೀಕ್ಷೆಗೆ ಅವಕಾಶವಿದೆ ಎಂಬುದು ಹಲವರ ವಾದ. ೧೯೯೦ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಸರ್ಕಾರ ಇದ್ದಾಗ ಮಂಡಲ್ ಆಯೋಗದ ವರದಿಯ ಮೇಲೆ ತೀವ್ರ ಚಳವಳಿ ನಡೆಯಿತು. ಆಗ ಹಿಂದುಳಿದ ವರ್ಗಕ್ಕೆ ಶೇ. ೨೭ ಮೀಸಲಾತಿಯನ್ನು ನೀಡಿ ಒಟ್ಟು ಮೀಸಲಾತಿಯನ್ನು ಶೇ. ೪೯ಕ್ಕೆ ಹೆಚ್ಚಿಸಲಾಯಿತು. ೧೯೯೨ರಲ್ಲಿ ಇಂದ್ರಾಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೂರ್ಣಃ ಪೀಠ ಮೀಸಲಾತಿ ಶೇ. ೫೦ ಮೀರುವಂತಿಲ್ಲ ಎಂದು ಲಕ್ಷ್ಮಣರೇಖೆ ಎಳೆಯಿತು. ಆದರೆ ತಮಿಳುನಾಡು ಇದಕ್ಕೆ ಮುನ್ನವೇ ಶೇ. ೬೯ ಮೀಸಲಾತಿ ನೀಡಿತ್ತು. ಬಿಹಾರ ಕೂಡ ಮೀಸಲಾತಿ ಹೆಚ್ಚಿಸಲು ಕೋರಿದೆ. ಅದಕ್ಕೆ ಪೂರಕವಾಗಿ ಜಾತಿ ಸಮೀಕ್ಷೆ ನಡೆಸಿದೆ. ತೆಲಂಗಾಣ ಒಳಮೀಸಲಾತಿ ನೀಡಿದೆ. ಹೀಗಾಗಿ ಎಲ್ಲ ರಾಜ್ಯಗಳಿಂದ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಸುಪ್ರೀಂ ಕೋರ್ಟ್ ತಾನು ವಿಧಿಸಿರುವ ಶೇ. ೫೦ರ ಮೀಸಲಾತಿ ಗಡುವನ್ನು ಮತ್ತೆ ಪರಿಶೀಲಿಸುವ ಕಾಲ ಬರಲಿದೆ. ಹಲವು ರಾಜ್ಯಗಳು ಶೇ. ೬೦ರಿಂದ ೮೫ ವರೆಗೂ ಹೆಚ್ಚಿಸುವಂತೆ ಕೋರಿವೆ. ಕೇಂದ್ರ ಸರ್ಕಾರ ಆರ್ಥಿಕ ಹಿಂದುಳಿದವರಿಗೆ ಶೇ. ೧೦ರಷ್ಟು ಮೀಸಲಾತಿ ನೀಡಿದೆ. ಇದರಿಂದ ಬ್ರಾಹ್ಮಣರೂ ಸೇರಿದಂತೆ ಮುಂದುವರೆದ ಜಾತಿಗಳಿಗೆ ಅನುಕೂಲವಾಗಿದೆ ಎಂಬ ಅಪವಾದವೂ ಕೇಳಿ ಬರುತ್ತಿದೆ.
ಜನಗಣತಿ ಈ ವರ್ಷ ಆರಂಭಗೊಂಡಲ್ಲಿ ಮುಂದಿನ ವರ್ಷ ಮುಕ್ತಾಯಗೊಳ್ಳಲಿದೆ. ಅದರ ಪ್ರಭಾವ ಮುಂದಿನ ಚುನಾವಣೆಗಳಲ್ಲಿ ಆಗಲಿದೆ. ಈಗ ಬಿಹಾರ ವಿಧಾನಸಭೆ ಚುನಾವಣೆ ಇದೆ. ಕರ್ನಾಟಕದಲ್ಲಿ ಕಾಂತರಾಜು ವರದಿಯನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಪ್ರಬಲ ಕೋಮಿನವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವರದಿ ಅಧಿಕೃತವಾಗಿ ಪ್ರಕಟಗೊಳ್ಳದೆ ಇದ್ದರೂ ಸೋರಿಕೆಯಾಗಿರುವ ವರದಿಯಂತೆ ಮುಸ್ಲಿಮರ ಸಂಖ್ಯೆ ಅಧಿಕವಾಗಿದೆ. ಇದೇ ರೀತಿಯಲ್ಲಿ ಇಡೀ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಾಗಿದೆ ಎಂದಾದರೆ ಅದರ ಪರಿಣಾಮವೇ ಬೇರೆ ಆಗಲಿದೆ. ರಾಹುಲ್ ಗಾಂಧಿ ಜಾತಿ ಸಮೀಕ್ಷೆಗೆ ಹಲವು ತಿಂಗಳುಗಳಿಂದ ಒತ್ತಾಯಿಸುತ್ತ ಬಂದಿದ್ದಾರೆ. ಈಗ ಕೇಂದ್ರ ಸರ್ಕಾರ ಅವರ ಮಾತಿಗೆ ಮಣಿದಿರುವಂತೆ ಕಂಡು ಬರುತ್ತಿದೆ. ಒಟ್ಟಿನಲ್ಲಿ ಜಾತಿ ಸಮೀಕ್ಷೆ ಇಡೀ ರಾಜಕೀಯ ರಂಗದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಈಗಲೇ ಹೇಳುವುದು ಕಷ್ಟ. ಜಾತಿಗಣತಿಗೆ ಸಂಸತ್ತು ಅನುಮೋದನೆ ನೀಡಿದರೆ ಯಾವ ಯಾವ ಜಾತಿಯವರು ಯಾವ ಹೆಸರಿನಲ್ಲಿ ನಮೂದಿಸಬೇಕು ಎಂಬುದರ ಚರ್ಚೆ ನಡೆಯಲಿದೆ. ವೀರಶೈವ ಧರ್ಮದವರು ಎಲ್ಲ ಒಳಪಂಗಡವನ್ನೂ ಒಂದುಗೂಡಿಸಬೇಕೆಂದು ತೀರ್ಮಾನಿಸಿದೆ. ಮುಸ್ಲಿಮರಲ್ಲಿ ಒಳಪಂಗಡ ನಮೂದಾಗಿಲ್ಲ. ಜಾತಿ- ವರ್ಗದ ನಡುವೆ ಅಂತರ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಜಾತಿ ಸಮೀಕ್ಷೆಗೆ ಮುನ್ನ ಜಾತಿ ಎಂದರೆ ಏನು ಎಂಬುದರ ವ್ಯಾಖ್ಯಾನ ಬೇಕಾಗುತ್ತದೆ. ಅದೇರೀತಿ ವರ್ಗ ಎಂದರೇನು ಎಂಬ ವಿವರಣೆ ಬೇಕಾಗುತ್ತದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಆಯೋಗ ಅಸ್ತಿತ್ವದಲ್ಲಿವೆ. ಒಂದು ಜಾತಿ ಒಂದು ರಾಜ್ಯದಲ್ಲಿಮುಂದುವರಿದಿದ್ದರೆ ಮತ್ತೊಂದು ರಾಜ್ಯದಲ್ಲಿ ಹಿಂದುಳಿದಿದೆ. ಕೆಲವು ಜಿಲ್ಲೆಗಳಲ್ಲೂ ಈ ರೀತಿ ವ್ಯತ್ಯಾಸವಿದೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಗೊಂದಲ ಸೃಷ್ಟಿಸುವುದರಲ್ಲಿ ಸಂದೇಹವಿಲ್ಲ. ಆದರೂ ಜನರಿಗೆ ಇದು ಬೇಕು ಎಂದಾಗ ಜನಪ್ರತಿನಿಧಿಗಳು ಸ್ಪಂದಿಸುವುದು ಅನಿವಾರ್ಯ. ಮತದಾರರು ಮುಂದಿನ ಚುನಾವಣೆಯಲ್ಲಿ ಈ ಜಾತಿ ಸಮೀಕ್ಷೆಯ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಸ್ಥಾನಮಾನ ಕೊಡಿಸಲು ಶ್ರಮಿಸಿದ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಜಾತಿಗಿಂತ ವರ್ಗ ಸಂಘರ್ಷ ನಡೆಯಬೇಕೆಂದು ಬಯಸಿದ್ದರು. ಈಗ ದಲಿತರು, ಹಿಂದುಳಿದ ವರ್ಗದವರು ರಾಜಕೀಯ ಅಧಿಕಾರದಲ್ಲಿ ಹೆಚ್ಚಿನ ಪಾಲು ಬಯಸುತ್ತಿರುವುದು ಬಹಿರಂಗಗೊಂಡಿದೆ. ಮುಸ್ಲಿಮರು ಇದರ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಯಾವ ನಿಲುವು ತಳೆಯುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.