ಜಡ್ಜ್‌ಗಳ ಆಸ್ತಿ ಘೋಷಣೆ ನ್ಯಾಯದಾನಕ್ಕೆ ಭೂಷಣ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 30 ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಇತರ ನ್ಯಾಯಮೂರ್ತಿಗಳು ತಮ್ಮ ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಕೈಗೊಂಡ ನಿರ್ಣಯ ಹೇಳಿದೆ. ಇದು ನ್ಯಾಯಾಲಯದ ಘನತೆ ಮತ್ತು ಗೌರವ ಹೆಚ್ಚಿಸುತ್ತದೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನಿವಾಸದಲ್ಲಿ ಸುಟ್ಟ ನೋಟುಗಳು ಸಿಕ್ಕಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಜನರಲ್ಲಿ ಮೂಡಿದ್ದ ಅನುಮಾನಗಳನ್ನು ಹೋಗಲಾಡಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸ್ವಯಂ ಪ್ರೇರಣೆಯಿಂದ ನಿರ್ಣಯ ಕೈಗೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟು ೩೩ ನ್ಯಾಯಮೂರ್ತಿಗಳ ಹುದ್ದೆ ಇದೆ. ಇದರಲ್ಲಿ ಒಂದು ಖಾಲಿ. ಇಬ್ಬರು ಈಗ ತಾನೇ ಹುದ್ದೆಗೆ ಬಂದವರು. ಅವರು ತಮ್ಮ ಆಸ್ತಿ ವಿವರ ಘೋಷಿಸಿಕೊಳ್ಳಬೇಕಿದೆ. ಒಟ್ಟು ೨೫ ಹೈಕೋರ್ಟ್‌ಗಳಲ್ಲಿ ೧೧೨೨ ನ್ಯಾಯಮೂರ್ತಿಗಳ ಹುದ್ದೆ ಇವೆ. ಇದರಲ್ಲಿ ೩೭೧ ಖಾಲಿ. ನವೆಂಬರ್ ೨೦೧೯ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಖನ್ನಾ ಅವರಿದ್ದ ಪೀಠ ಸಿಜೆ ಅವರ ಕಚೇರಿ ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುತ್ತದೆ ಎಂದು ಹೇಳಿತ್ತು. ಅದನ್ನು ಸಿಜೆ ಎನ್.ವಿ. ರಮಣ ಅವರು ಬೆಂಬಲಿಸಿ, ನ್ಯಾಯಾಲಯದಲ್ಲಿ ಎಲ್ಲವೂ ಪಾರದರ್ಶಕವಾಗಿರಬೇಕು, ಸ್ವತಂತ್ರವಾಗಿ ನಡೆಯಬೇಕು ಎಂದು ಹೇಳಿದ್ದರು.
೧೯೯೭ರಲ್ಲಿ ಮುಖ್ಯ ನ್ಯಾಯಮೂರ್ತಿ ಜೆಎಸ್ ವರ್ಮ ಆಸ್ತಿ ವಿವರ ಬಹಿರಂಗಪಡಿಸುವ ನಿರ್ಣಯ ಕೈಗೊಂಡಿದ್ದರು. ೨೦೦೯ರಲ್ಲಿ ಸಿ.ಜೆ. ಬಾಲಕೃಷ್ಣನ್ ಅವರ ಕಾಲದಲ್ಲಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸ್ವಯಂ ಪ್ರೇರಣೆಯಿಂದ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಬಹುದು ಎಂದು ಸೂಚಿಸಿದರು. ಅದನ್ನು ಕೂಡಲೇ ಪಾಲಿಸಿದವರು ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್. ಇಡೀ ದೇಶಕ್ಕೆ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ತಮ್ಮ ಆಸ್ತಿವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದವರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಕೊನೆಯವರೆಗೂ ಅವರು ತಮ್ಮ ನಿಷ್ಠೆ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಅದಾದ ನಂತರ ಕೆಲವು ವರ್ಷಗಳು ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಪ್ರಕಟಿಸುತ್ತಿದ್ದರು. ಆದರೆ ಒಬ್ಬರು ಮಹಿಳಾ ನ್ಯಾಯಮೂರ್ತಿ ತಮ್ಮ ಆಸ್ತಿವಿವರ ಸಲ್ಲಿಸುವಾಗ ಮಗಳ ಮದುವೆ ಖರ್ಚನ್ನು ಸಾಲದ ಪಟ್ಟಿಯಲ್ಲಿ ಸೇರಿಸಿದ್ದು ವಿವಾದಕ್ಕೆ ಕಾರಣವಾಯಿತು. ಅಂದಿನಿಂದ ಆಸ್ತಿವಿವರ ಪ್ರಕಟಿಸುವ ಪರಿಪಾಠ ಕೈಬಿಟ್ಟು ಹೋಗಿತ್ತು. ಈಗ ಮತ್ತೆ ಆಸ್ತಿ ವಿವರ ಬಹಿರಂಗಪಡಿಸುವ ಪರಿಪಾಠ ಆರಂಭಗೊಂಡಿದೆ. ಇದೂ ಕೂಡ ಕಡ್ಡಾಯವೇನೂ ಅಲ್ಲ. ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಕಚೇರಿಗೆ ಸಲ್ಲಿಸುತ್ತಾರೆ. ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆ ಬೇಡವೇ ಎಂಬುದನ್ನು ಅವರೇ ತೀರ್ಮಾನಿಸಬೇಕು. ಅದಕ್ಕೆ ಕಾನೂನು ಅನ್ವಯವಾಗುವುದಿಲ್ಲ.
ಇದರಲ್ಲಿ ಒಂದು ಸಮಸ್ಯೆ ಇದೆ. ನ್ಯಾಯಮೂರ್ತಿಗಳಾಗುವ ಮುನ್ನ ಅವರು ವಕೀಲರಾಗಿ ಹಣ ಸಂಪಾದನೆ ಮಾಡಿರುತ್ತಾರೆ. ವಕೀಲರಿಗೆ ಆಸ್ತಿ ವಿವರ ಸಲ್ಲಿಸುವುದರಿಂದ ವಿನಾಯಿತಿ ಇದೆ. ಆದರೆ ಅವರು ನ್ಯಾಯಮೂರ್ತಿಗಳಾದ ಕೂಡಲೇ ಆಸ್ತಿ ವಿವರ ನೀಡಬೇಕಾಗುತ್ತದೆ. ಉತ್ತಮ ವಕೀಲ ವೃತ್ತಿ ಹೊಂದಿದವರು ಈ ಕಾರಣದಿಂದ ಜಡ್ಜ್ ಆಗಲು ಹಿಂಜರಿಯುತ್ತಾರೆ. ವಕೀಲರಿಗೆ ಆಸ್ತಿ ಘೋಷಣೆಯಿಂದ ವಿನಾಯಿತಿ ನೀಡಿರುವ ಬಗ್ಗೆ ಈಗಲೂ ವಿವಾದ ಇದೆ. ಇದನ್ನು ವೃತ್ತಿ ಎಂದು ಪರಿಗಣಿಸಿಲ್ಲ. ಸಮಾಜಸೇವೆ ಎಂದು ಪರಿಗಣಿಸಲಾಗಿದೆ. ಅದಕ್ಕೆ ನಿವೃತ್ತಿ ವಯಸ್ಸೂ ಇಲ್ಲ. ಈ ರೀತಿ ಬೇರೆ ವೃತ್ತಿಗಳಿದ್ದರೂ ಅವರೆಲ್ಲರೂ ತಮ್ಮ ಆಸ್ತಿ ಘೋಷಿಸಿಕೊಳ್ಳುವುದು ಅನಿವಾರ್ಯ. ವಕೀಲ ವೃತ್ತಿ ಬಿಟ್ಟು ನ್ಯಾಯಮೂರ್ತಿಗಳಾದ ಕೂಡಲೇ ಆಸ್ತಿ ವಿವರ ನೀಡುವುದು ಅಗತ್ಯ. ಇದು ಈಗಲೂ ಕೆಲವರಿಗೆ ಅಸಮಾಧಾನ ಉಂಟುಮಾಡುವ ಸಂಗತಿ. ಆದರೂ ನ್ಯಾಯಾಂಗದ ಪಾವಿತ್ರö್ಯö ಕಾಪಾಡಲು ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸುವುದರಿಂದ ಉನ್ನತ ಆದರ್ಶಗಳನ್ನು ಎತ್ತಿಹಿಡಿದಂತೆ ಆಗುತ್ತದೆ. ಜನರಲ್ಲಿ ನ್ಯಾಯಮೂರ್ತಿಗಳ ಬಗ್ಗೆ ನಂಬಿಕೆ ಹೆಚ್ಚುತ್ತದೆ.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮಾನ ಜವಾಬ್ದಾರಿ ಹೊಂದಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನ ಉಲ್ಲಂಘಿಸಿದಾಗ ಅದನ್ನು ಸರಿದಾರಿಗೆ ತರುವುದು ನ್ಯಾಯಾಂಗದ ಕರ್ತವ್ಯ. ಆ ಕೆಲಸವನ್ನು ನಮ್ಮ ನ್ಯಾಯಾಂಗ ಉತ್ತಮವಾಗಿ ನಿರ್ವಹಿಸುತ್ತ ಬಂದಿದೆ. ಅದರಿಂದಲೇ ಭಾರತದ ನ್ಯಾಯಾಂಗದ ಬಗ್ಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಅಭಿಪ್ರಾಯವಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲೂ ಭಾರತೀಯ ಜಡ್ಜ್ಗಳಿಗೆ ಹೆಚ್ಚಿನ ಬೆಲೆ ಇದೆ. ಉತ್ತಮ ವಕೀಲರು ನ್ಯಾಯಾಂಗದ ಆದರ್ಶಗಳನ್ನು ಎತ್ತಿಹಿಡಿಯಲು ಕಾರಣಕರ್ತರು. ಸಂವಿಧಾನಕ್ಕೆ ಕುತ್ತು ಬಂದಾಗಲೆಲ್ಲ ಜನ ನ್ಯಾಯಾಂಗದ ಕಡೆ ತಿರುಗಿ ನೋಡುತ್ತಾರೆಯೇ ಹೊರತು ರಾಜಕಾರಣಿಗಳತ್ತ ಅಲ್ಲ. ನ್ಯಾಯಾಂಗ ಯಾವುದೇ ಕಾರಣಕ್ಕೂ ಜನರ ಸಂಶಯಕ್ಕೆ ಒಳಗಾಗಬಾರದು.
ಅದಕ್ಕೆ ಪಾರದರ್ಶಕತೆಯೊಂದೇ ದಾರಿ. ಅದನ್ನು ನಮ್ಮ ನ್ಯಾಯಾಲಯಗಳು ಎತ್ತಿ ಹಿಡಿಯುತ್ತ ಬಂದಿರುವುದು ಸಮಾಧಾನಕರ ಸಂಗತಿ. ಸಮಾಜದಲ್ಲಿ ಯಾರು ಬೇಕಾದರೂ ಕೆಡಬಹುದು. ತಾಯಿ ಕೆಡುವುದಿಲ್ಲ. ಅದೇ ರೀತಿ ನ್ಯಾಯಾಲಯ ಕೆಡಬಾರದು. ಅದು ಪ್ರಜಾಪ್ರಭುತ್ವದ ತಾಯಿ ಬೇರು ಕಾಪಾಡುವ ಮೂಲಸೆಲೆ. ಅದು ಎಂದೂ ನೈತಿಕವಾಗಿ ಬತ್ತಿಹೋಗಬಾರದು.