ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಶಾಸಕ, ರೈತರಿಂದ ಬೃಹತ್ ಪ್ರಮಾಣದ ಬೆಂಬಲ

0
24

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಇಲ್ಲಿನ ತಾಲೂಕಾ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರ ಶನಿವಾರ 6 ನೇ ದಿನಕ್ಕೆ ಕಾಲಿರಿಸಿದೆ.

ಶನಿವಾರ ತೇರದಾಳ ಶಾಸಕ ಸಿದ್ದು ಸವದಿಯವರ ಕಚೇರಿಗೆ ತೆರಳಿ ಮನವಿ ಅರ್ಪಿಸಿದ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಸಮಸ್ಯೆಗಳ ಕುರಿತು ಮನವರಿಕೆ ಮಾಡಿದರು. ಇವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಸವದಿ, 60 ಕ್ಕೂ ಅಧಿಕ ಕೆಲಸಗಳನ್ನು ನಿರ್ವಹಣೆಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿದ್ದು ಒಪ್ಪಿಗೆಯಿದೆ. ಅದರಂತೆ ತಾಂತ್ರಿಕತೆಯಿಲ್ಲದೆ ಪೂರಕ ಸೌಕರ್ಯಗಳನ್ನು ಒದಗಿಸದೆ ತೀವ್ರ ನಿರ್ಲಕ್ಷ್ಯವಹಿಸುವ ಮೂಲಕ ಸಾರ್ವಜನಿಕರೊಂದಿಗೆ ಆಡಳಿತಾಧಿಕಾರಿಗಳಿಗೂ ಕಂಟಕವಾಗುವಲ್ಲಿ ಸರ್ಕಾರ ಕಾರಣವಾಗಿದೆ. ಈ ಕೂಡಲೇ ಸಕಲ ಸೌಕರ್ಯಗಳನ್ನು ಒದಗಿಸಬೇಕು.

ಈ ಹೋರಾಟಕ್ಕೆ ನಮ್ಮ ಬೆಂಬಲವೂ ಇದ್ದು, ಸರ್ಕಾರಕ್ಕೆ ನಾನೂ ಕೂಡ ಒತ್ತಡ ಹೇರುತ್ತೇನೆಂದು ಸವದಿ ಸ್ಪಷ್ಟಪಡಿಸಿದರು.

ರೈತ ಸಂಘ, ಹಸಿರು ಸೇನೆ ಬೆಂಬಲ: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಲ್ಲಿ ರೈತ ಸಂಘ ಹಾಗು ಹಸಿರು ಸೇನೆ ತಾಲೂಕಾ ಸಂಘಟನೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ರೈತ ಮುಖಂಡ ಹೊನ್ನಪ್ಪ ಬಿರಡಿ ಮಾತನಾಡಿ, ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಿಸುವ ಕೆಲಸದಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನಾಗರಿಕರ ಅನುಕೂಲಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳ ಕಾನೂನಾತ್ಮಕ ತೊಡಕುಗಳಿಗೆ ತಕ್ಷಣ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವೂ ಸಹ ಮುಷ್ಕರದಲ್ಲಿ ಭಾಗಿಯಾಗಲಿದ್ದೇವೆಂದು ಸರ್ಕಾರವನ್ನು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಭೇಟಿ: ರಬಕವಿ-ಬನಹಟ್ಟಿಯಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಭಾಗವಹಿಸಿದ ಗ್ರಾಮ ಆಡಳಿತಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕವಟಗೊಪ್ಪ ಮಾತನಾಡಿ, 21 ಅಪ್ಲಿಕೇಶನ್‌ಗಳಿಗೆ ಒಂದೇ ಒಂದು ಮೊಬೈಲ್, ಪ್ರಿಂಟರ್, ಕಂಪ್ಯೂಟರ್ ಒದಗಿಸದೆ ಧನಾತ್ಮಕ ಸ್ಪಂದನೆಗೆ ಸರ್ಕಾರದಿಂದ ಅವಕಾಶ ದೊರಕುತ್ತಿಲ್ಲ. ಸಾರ್ವಜನಿಕರಿಗೆ ಒದಗಿಸುವ ಸೌಕರ್ಯಗಳಿಗೆ ನಮ್ಮ ಹೋರಾಟವಾಗಿದೆ ವಿನ: ಸ್ವಾರ್ಥಕ್ಕಾಗಿ ಅಲ್ಲವೆಂದರು.

Previous articleಕಾಟಾಚಾರಕ್ಕೆ ನಡೆಯುತ್ತಿರುವ ಬಜೆಟ್ ಪೂರ್ವಭಾವಿ ಸಭೆ
Next articleಸೇವಾಲಾಲ ಜಯಂತಿ: ಭವ್ಯ ಮೆರವಣಿಗೆ