ಕರ್ನಾಟಕದಲ್ಲಿ ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಬಾರದೆ ಇರುವುದಕ್ಕೆ ಸಂಬಳದಲ್ಲಿರುವ ಅಂತರ ಕಾರಣ ಎಂಬ ಅಭಿಪ್ರಾಯವಿದೆ. ಇದು ಭಾಗಶಃ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಅಧಿಕಗೊಂಡಿದೆ. ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದಿಲ್ಲ. ಹಿಂದೆ ಗ್ರಾಮೀಣ ಜನ ವೈದ್ಯರನ್ನು ದೇವರಂತೆ ಕಾಣುತ್ತಿದ್ದರು. ಈಗ ಇದು ಹೋಗಿ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸುವುದು ಅಧಿಕಗೊಂಡಿದೆ. ಪೊಲೀಸರು ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಅದನ್ನು ಜಾಮೀನು ರಹಿತ ಅಪರಾಧ ಎಂದು ಮಾಡಿ ನ್ಯಾಯಾಲಯದಲ್ಲೇ ಜಾಮೀನು ಪಡೆಯಬೇಕೆಂದು ಮಾಡಬೇಕು. ಆಗ ಸರ್ಕಾರಿ ವೈದ್ಯರಿಗೆ ಸಿಗುತ್ತದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪೊಲೀಸ್ ಠಾಣೆ ತೆರೆಯಲು ಬರುವುದಿಲ್ಲ.
ನಮ್ಮಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಬೇರೆ ಬೇರೆ ಇದೆ. ಹೀಗಾಗಿ ಸಾಮರಸ್ಯ ಕಂಡುಕೊಳ್ಳುವುದು ಕಷ್ಟ. ಆರೋಗ್ಯ ಇಲಾಖೆಯಿಂದ ನೇಮಕಗೊಂಡ ಕಾಯಂ ವೈದ್ಯರಿಗೆ 92 ಸಾವಿರ ಸಂಬಳ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಬರುವವರಿಗೆ 40 ಸಾವಿರ ರೂ. ಈ ಅಂತರವೇ ಗ್ರಾಮೀಣ ಸೇವೆಗೆ ಬರುವ ವೈದ್ಯರ ಸಂಖ್ಯೆ ಇಳಿಮುಖಗೊಳ್ಳಲು ಕಾರಣ. ಈಗ ಗುತ್ತಿಗೆ ಆಧಾರದ ಮೇಲೆ ಆಯಾ ಜಿಲ್ಲೆಗಳಲ್ಲಿ ನೇಮಕಗೊಂಡವರಿಗೆ 56 ಸಾವಿರ ರೂ. ನೀಡಲಾಗುತ್ತಿದೆ. ಆದರೂ ೨ಸಾವಿರ ವೈದ್ಯರ ಕೊರತೆ ಗ್ರಾಮೀಣ ಭಾಗದಲ್ಲಿದೆ. ಸರ್ಕಾರ ಈಗ ೬೦೦ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಕೇಂದ್ರದಿಂದ 532 ಕೋಟಿ ರೂ. ನೆರವು ಪಡೆದುಕೊಂಡಿದೆ. ಆರೋಗ್ಯ ಇಲಾಖೆಗೆ ಹಣದ ಕೊರತೆ ಇಲ್ಲ. ಸೇವಾ ಭದ್ರತೆ ಪ್ರಮುಖ ವಿಷಯವಾಗಿದೆ.
ರಾಜ್ಯದಲ್ಲಿ ಒಟ್ಟು 67 ವೈದ್ಯಕೀಯ ಕಾಲೇಜುಗಳು. ಇದರಲ್ಲಿ ಪ್ರತಿವರ್ಷ 11ಸಾವಿರ ಎಂಬಿಬಿಎಸ್ ವೈದ್ಯರು ಡಿಗ್ರಿ ಪಡೆದು ಹೊರ ಬರುತ್ತಿದ್ದಾರೆ. 21 ಸರ್ಕಾರಿ ಕಾಲೇಜುಗಳಿವೆ. ಈ ಕಾಲೇಜುಗಳಿಂದ 3200 ವೈದ್ಯರು ಪ್ರತಿ ವರ್ಷ ಬರುತ್ತಿದ್ದಾರೆ. ಇಷ್ಟು ಬಂದರೂ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಇರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಸರಿಯಾದ ನೀತಿ ರೂಪಿಸಿದರೆ ವೈದ್ಯರ ಕೊರತೆ ನಿವಾರಿಸಬಹುದು. ಪ್ರತಿಯೊಂದು ವೈದ್ಯಕೀಯ ಕಾಲೇಜಿಗೆ ಎರಡು ಜಿಲ್ಲೆ ಸಂಪೂರ್ಣ ಜವಾಬ್ದಾರಿ ಒಪ್ಪಿಸಬೇಕು. ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನೋಡಿಕೊಳ್ಳುವುದು ಅಯಾ ಕಾಲೇಜಿನ ಕರ್ತವ್ಯ. ಸರ್ಕಾರ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ನೋಡಿಕೊಳ್ಳಬೇಕು. ಪ್ರಮುಖ ತಾಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸರ್ಜರಿಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಬೇಕು. ಉಳಿದ ಎಲ್ಲ ಆಸ್ಪತ್ರೆಗಳಲ್ಲಿ ಮೈನರ್ ಓಟಿ ಮಾತ್ರ ಇರುತ್ತದೆ. ಮೇಜರ್ ಸರ್ಜರಿ ವಿಶೇಷ ಆಸ್ಪತ್ರೆಯಲ್ಲಿ ಮಾತ್ರ ನಡೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ನೋಡಿಕೊಳ್ಳುವುದಕ್ಕೆ ಪ್ರತ್ಯೇಕ ಅಧಿಕಾರಿ ನೇಮಕ. ಅದಕ್ಕಾಗಿ ಈಗ ವಿಶೇಷ ಪದವಿ ಇದೆ. ವೈದ್ಯರ ಕಾನೂನು ಪ್ರಕರಣ ನೋಡಿಕೊಳ್ಳಲು ಆರೋಗ್ಯ ಇಲಾಖೆ ಪ್ರತ್ಯೇಕ ಕಾನೂನು ವಿಭಾಗ ಹೊಂದಬೇಕು. ಆಗ ವೈದ್ಯರು ತಮ್ಮ ಉತ್ತರದಾಯಿತ್ವ ಅರಿತು ಕೆಲಸ ಮಾಡಬಹುದು. ಆಂಬುಲೆನ್ಸ್ ಸೇವೆ ಕಡ್ಡಾಯ. ಪ್ರತಿ ಆಸ್ಪತ್ರೆಗೆ ಆಂಬುಲೆನ್ಸ್ ನೀಡಬೇಕು. ಔಷಧ ಮತ್ತು ಸ್ವಚ್ಛತೆಗೆ ಆದ್ಯತೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿ ಜತೆ ಒಬ್ಬರು ಸಹಾಯಕರು ಮಾತ್ರ ಇರಬೇಕು. ಇಡೀ ಸಂಸಾರ ಇರುವುದಲ್ಲ. ಖಾಸಗಿ ಆಸ್ಪತ್ರೆಗಳು ತೆಗೆದುಕೊಳ್ಳುವ ಯಂತ್ರಗಳಿಗೆ ಅಬಕಾರಿ ಸುಂಕದಿಂದ ರಿಯಾಯಿತಿ ನೀಡಿದ್ದೇವೆ. ಅದರಿಂದ ತುರ್ತು ಚಿಕಿತ್ಸೆಯನ್ನು ಎಲ್ಲರಿಗೂ ನೀಡಬೇಕು. ಒಂದುವೇಳಿ ನಿರಾಕರಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಮಾಡಬೇಕು. ಗ್ರಾಮೀಣ ವೈದ್ಯರಿಗೆ ರಕ್ಷಣೆ ಮತ್ತು ಉತ್ತರದಾಯಿತ್ವ ಎರಡೂ ಬೇಕು. ಮುಖ್ಯವಾಗಿ ಪ್ರತಿ ಆಸ್ಪತ್ರೆಯಲ್ಲಿ ಎಷ್ಟು ವೈದ್ಯಕೀಯ ಸವಲತ್ತು ಇದೆ ಎಂಬುದರ ಮೇಲೆ ವರ್ಗೀಕರಿಸಬೇಕು. ಆಗ ರೋಗಿಗಳಿಗೆ ಪ್ರತಿ ಆಸ್ಪತ್ರೆಯ ಸಾಮರ್ಥ್ಯ ತಿಳಿಯುತ್ತದೆ. ವೈದ್ಯರಿಗೆ ಸಂಬಳ ಹೆಚ್ಚಳದೊಂದಿಗೆ ರಕ್ಷಣೆ ಮತ್ತು ವೈದ್ಯಕೀಯ ಸಲಕರಣೆಗಳ ಸವಲತ್ತು ನೀಡಬೇಕು. ಆಗ ಅವರ ನಿರ್ಲಕ್ಷ್ಯ ತೀರ್ಮಾನಿಸುವುದು ಸುಲಭ. ಅವರಿಗೆ ಯಾವ ಸವಲತ್ತು ಕೊಡದೆ ರೋಗಿಯನ್ನು ಕಾಪಾಡಿ ಎಂದರೆ ಹೇಗೆ ಸಾಧ್ಯ? ಅವರೇನೂ ಜಾದೂಗಾರರಲ್ಲ. ನಗರಗಳಲ್ಲಿ ಆಸ್ಪತ್ರೆಗಳಲ್ಲಿ ಎಲ್ಲ ಸವಲತ್ತು ಕಲ್ಪಿಸಿರುತ್ತಾರೆ. ಅದರಿಂದ ವೈದ್ಯರಿಗೆ ಚಿಕಿತ್ಸೆ ಕೊಡುವುದು ಸುಲಭ. ತಜ್ಞರ ಸಲಹೆ ಪಡೆಯುವುದು ಕಷ್ಟವೇನಲ್ಲ. ರಕ್ತದಿಂದ ಹಿಡಿದು ಎಲ್ಲ ಪರೀಕ್ಷೆ ಮಾಡಲು ಲ್ಯಾಬ್‌ಗಳು ಸಮೀಪದಲ್ಲೇ ಇರುತ್ತವೆ. ಹಳ್ಳಿಗಳಲ್ಲಿ ಇವುಗಳು ಲಭ್ಯ ಇರುವುದಿಲ್ಲ. ಈಗಂತೂ ಗ್ರಾಮೀಣ ಜನರಲ್ಲಿ ರೋಗ ನಿರೋಧಕ ಶಕ್ತಿ ಇಳಿಮುಖಗೊಂಡಿದೆ. ರಕ್ತ ಒತ್ತಡ, ಸಕ್ಕರೆ ರೋಗ ಸಾಮಾನ್ಯವಾಗುತ್ತಿದೆ. ಹೀಗಾಗಿ ವೈದ್ಯರಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಿದೆ. ಅಲ್ಲದೆ ನಗರಗಳಲ್ಲಿ ಕೆಲಸ ಮಾಡಿದರೆ ಕಡಿಮೆ ಶ್ರಮದಲ್ಲಿ ಹೆಚ್ಚು ಸಂಪಾದಿಸಬಹುದು. ಸರ್ಕಾರ ಹಿಂದೆ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿತ್ತು. ಆಮೇಲೆ ಅದನ್ನು ದಂಡಕ್ಕೆ ಪರಿವರ್ತಿಸಿದರು. ಎಲ್ಲರೂ ದಂಡ ಕಟ್ಟಿದರೆ ಹೊರತು ಗ್ರಾಮೀಣ ಸೇವೆಗೆ ಹೋಗಲಿಲ್ಲ. ಈಗ ನಗರದಲ್ಲಿರುವ ವೈದ್ಯರು ಪ್ರತಿ ತಿಂಗಳು 1ಲಕ್ಷಕ್ಕಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ. ದಿನಕ್ಕೆ 3-4 ಆಸ್ಪತ್ರೆಗಳಿಗೆ ಹೋಗುತ್ತಾರೆ. ಹಗಲು ರಾತ್ರಿ ದುಡಿಯುತ್ತಾರೆ. ಅವರು ಹಳ್ಳಿಗೆ ಹೋಗಿ ಬಡಿದಾಡಲು ಸಿದ್ಧವಿರುವುದಿಲ್ಲ. ಯಾವ ವೈದ್ಯರೂ ಹಣವಿಲ್ಲದೆ ಕೆಲಸ ಮಾಡುವುದಿಲ್ಲ. ಸುಲಭವಾಗಿ ಹಣ ಸಿಗುವ ಸ್ಥಳವನ್ನು ಹುಡುಕಿಕೊಳ್ಳುತ್ತಾರೆ. ಸರ್ಕಾರ ಇವೆಲ್ಲವನ್ನೂ ಪರಿಶೀಲಿಸುವ ಅಗತ್ಯವಿದೆ. ಖಾಸಗಿ ಆಸ್ಪತ್ರೆಗಳ ಲಾಬಿಗೆ ಸರ್ಕಾರ ಮಣಿಯುವುದಂತೂ ಖಚಿತ.