ಗೋಧಿ ಉತ್ಪಾದನೆ ಸಮೀಕ್ಷೆಗೆ ಅಪಸ್ವರ

ಕಳೆದ ೨೦೨೪-೨೫ನೇ ಸಾಲಿನ ಗೋಧಿ ಉತ್ಪಾದನೆ ೧೧೦ ದಶಲಕ್ಷ ಟನ್‌ದಷ್ಟಾಗಲಿದ್ದು, ಶೇ. ೮.೨ರಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ರೋಲರ್ ಹಿಟ್ಟಿನ ಗಿರಣಿಗಳ ಮಹಾಮಂಡಳದ ಪ್ರಾಥಮಿಕ ಸಮೀಕ್ಷಾ ವರದಿಯಲ್ಲಿ ಅಂದಾಜಿಸಲಾಗಿದೆ. ಬೆಳೆ ಹೆಕ್ಟೇರ್‌ವಾರು ಕ್ಷೇತ್ರ ಹೆಚ್ಚಳದ ಜೊತೆಗೆ ಹವಾಮಾನ ವೈಪರೀತ್ಯದ ಬಾಧೆಯನ್ನು ತಾಳಿಕೊಳ್ಳುವ ಹೊಸ ತಳಿಗಳನ್ನು ಅಳವಡಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಇದಕ್ಕೂ ಹಿಂದಿನ ವರ್ಷದ ಉತ್ಪಾದನೆ ೧೦೫.೭೯ ದಶಲಕ್ಷ ಟನ್‌ದಷ್ಟಿತ್ತು. ೨೦೨೪ರಲ್ಲಿ ಕೃಷಿ ಸಚಿವಾಲಯವು ಗೋಧಿ ಉತ್ಪಾದನೆ ೧೧೩.೨೯ ದಶಲಕ್ಷ ಟನ್‌ದಷ್ಟಾಗಲಿದೆ ಎಂದು ಅಂದಾಜಿಸಿದೆ. ಕಳೆದ ವರ್ಷ ಗೋಧಿಬೆಳೆ ಹೆಕ್ಟೇರ್‌ವಾರು ಕ್ಷೇತ್ರ ೩೧೨ ಲಕ್ಷ ಹೆಕ್ಟೇರ್‌ದಷ್ಟಿದ್ದರೆ ೨೦೨೪-೨೫ರಲ್ಲಿ ೩೨೮ ಲಕ್ಷ ಹೆಕ್ಟೇರ್‌ದಷ್ಟಾಗಿದೆ. ಇಳುವರಿಯೂ ಶೇ.೨ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಗೋಧಿ ಬೆಳೆಯ ಪ್ರಮುಖ ಪ್ರದೇಶಗಳಲ್ಲಿ ಅಕಾಲಿಕ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವ ಕಾರಣ ಭಾರತೀಯ ರೋಲರ್ ಹಿಟ್ಟಿನ ಗಿರಣಿಗಳ ಮಹಾಮಂಡಳ ಉತ್ಪಾದನೆಯ ಅಂದಾಜಿನಲ್ಲಿ ಸಾಕಷ್ಟು ಜಾಗರೂಕತೆ ವಹಿಸಿದೆ.
ಉತ್ತರಪ್ರದೇಶದಲ್ಲಿ ಗೋಧಿ ಬೆಳೆ ಹೆಕ್ಟೇರ್‌ವಾರು ಕ್ಷೇತ್ರ ಶೇ.೦.೪ರಷ್ಟು ಇಳಿಮುಖವಾಗಿದೆ. ಆದ್ದರಿಂದ ಇಲ್ಲಿ ಉತ್ಪಾದನೆ ಶೇ.೦.೬ರಷ್ಟು ಕಡಿಮೆಯಾಗುವ ಸಂಭವ ಇದೆ. ಆದಾಗ್ಯೂ ೩೨.೦೫ ದಶಲಕ್ಷ ಟನ್ ಉತ್ಪಾದನೆಯಾಗುವದೆಂದು ಹೇಳಲಾಗಿದ್ದು, ಅತಿ ದೊಡ್ಡ ಉತ್ಪಾದಕ ರಾಜ್ಯವಾಗಿ ಹೊರಹೊಮ್ಮಿದೆ. ಆದರೆ ಮಧ್ಯಪ್ರದೇಶದಲ್ಲಿ ಬೆಳೆ ಕ್ಷೇತ್ರ ಶೇ. ೪.೨ರಷ್ಟು ಹೆಚ್ಚಳವಾಗಿದ್ದು, ಈ ಸಂದರ್ಭದಲ್ಲಿ ಇಲ್ಲಿ ಉತ್ಪಾದನೆ ಶೇ.೮ಕ್ಕಿಂತ ಹೆಚ್ಚಾಗಬಹುದೆಂದು ಹೇಳಲಾಗಿದೆ. ಉಳಿದಂತೆ ರಾಜಸ್ಥಾನ, ಗುಜರಾತ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಉತ್ಪಾದನೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯು ತಿಳಿಸಿದೆ.
ಆದರೆ ವ್ಯಾಪಾರಿ ಸಮುದಾಯವು ಸರ್ಕಾರದ ಹಾಗೂ ರೋಲರ್ ಫ್ಲೋರ್ ಮಿಲ್ಲರ್ಸ್ ಮಹಾಮಂಡಳದ ಅಂದಾಜುಗಳನ್ನು ಒಪ್ಪಿಕೊಂಡಿಲ್ಲ. ಪ್ರಸಕ್ತ ಸಾಲಿನಲ್ಲಿ ಇದು ಕೇವಲ ೧೦೪-೧೦೬ ದಶಲಕ್ಷ ಟನ್ ಮಟ್ಟದಲ್ಲಿರಲಿದೆ ಎಂದು ಅಂದಾಜಿಸಿದೆ. ಹಾಗಾದರೆ ಇಷ್ಟೆಲ್ಲಾ ಉತ್ಪಾದನೆಯಾಗಿದ್ದರೆ ಪೂರೈಕೆಯಲ್ಲೇಕೆ ವ್ಯತ್ಯಯವಾಗುತ್ತಿದೆ ಎಂದು ವ್ಯಾಪಾರಸ್ಥರು ಪ್ರಶ್ನಿಸಿದ್ದಾರೆ. ೨೦೨೩ರಿಂದಲೂ ಗೋಧಿ ಬೆಳೆಗೆ ಬಿಸಿ ಗಾಳೆಯಿಂದ ತೀವ್ರ ಬಾಧೆಯಾಗುತ್ತಿದೆ. ಇದು ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಪೂರೈಕೆ ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಉತ್ಪಾದನೆ ಆಗಿದ್ದರೂ ಹೆಚ್ಚುತ್ತಿರುವ ಬಳಕೆಗೆ ತಕ್ಕಷ್ಟು ಉತ್ಪಾದಿಸಲಾಗುತ್ತಿಲ್ಲ ಎಂದು ತಿಳಿಸಿದೆ. ಪ್ರಸ್ತುತ ತಿಂಗಳಿಗೆ ಒಂಭತ್ತು ದಶಲಕ್ಷ ಟನ್ ಗೋಧಿ ಬಳಕೆಯಾಗುತ್ತಿದೆ. ವಾರ್ಷಿಕ ಬಳಕೆ ಪ್ರಮಾಣ ೧೦೮ ದಶಲಕ್ಷ ಟನ್‌ದಷ್ಟಿದೆ. ಸರ್ಕಾರ ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಉತ್ಪಾದನೆಯ ಅಂದಾಜು ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.