ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ

0
18

ಗದಗ: ಗದಗ ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಯ ಮೂರು ಜನ ಸದಸ್ಯರನ್ನು ರಾತ್ರಿ 12ಗಂಟೆಗೆ ಅಮಾನತು ಮಾಡಿ ಅವರನ್ನು ಮತ ಹಾಕದಂತೆ ನೋಡಿಕೊಂಡಿದ್ದಾರೆ. ಅಮಾನತುಗೊಂಡ ಸದಸ್ಯರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟು ಆದೇಶ ನೀಡಿದೆ. ಚುನಾವಣಾಧಿಕಾರಿ ಅದನ್ನು ದಿಕ್ಕರಿಸಿ, ಎಲ್ಲ ಸಂಪರ್ಕ ಬಂದು ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ನಿರ್ದೇಶನದಂತೆ ಕೆಲಸ ಮಾಡಿದ್ದಾರೆ ಎಂದರು.
ಜಯ ತಾತ್ಕಾಲಿಕ
ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಚುನಾವಣೆ ನಡೆಸಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಹೈಕೋರ್ಟ್ ಆದೇಶವನ್ನು ಧಿಕ್ಕರಿಸುವ ಉದ್ದಟತನವನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ್ದಾನೆ. ಅಧಿಕಾರಿ ಆಗಲು ಯೋಗ್ಯತೆ ಇಲ್ಲ ಇವರಿಗೆ, ಕಾನೂನು ಪರಿಪಾಲನೆ ಮಾಡುವ ಯೋಗ್ಯತೆ ಇಲ್ಲ. ಇವರು ನ್ಯಾಯಾಂಗ ನಿಂದನೆ ಮಾಡಿದ್ದು, ಅದರ ವಿರುದ್ದ ಕೋರ್ಟ್‌ಗೆ ಹೋಗುತ್ತೇವೆ. ಮೂರು ಜನ ಅಮಾಯಕ ಸದಸ್ಯರ ಸದಸ್ಯತ್ವ ಅಮಾನತಿಗೆ ಹುನ್ನಾರ ಮಾಡಿರುವುದರ ವಿರುದ್ಧವೂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇವತ್ತಿನ ಜಯ ತಾತ್ಕಾಲಿಕವಾಗಿದ್ದು, ಅಸಂವಿಧಾನಿಕವಾಗಿದೆ. ಕಾನೂನು ಬಾಹಿರವಾಗಿದೆ. ಇದನ್ನು ಜನರೂ ಒಪ್ಪುವುದಿಲ್ಲ ನಾವೂ ಒಪ್ಪುವುದಿಲ್ಲ, ಯಾರೂ ಒಪ್ಪುವುದಿಲ್ಲ. ಈ ಚುನಾವಣೆಗೆ ಧಿಕ್ಕಾರ ಹಾಕಿ ನಾವು ಬಹಿಷ್ಕಾರ ಹಾಕಿದ್ದೇವೆ. ಮತ್ತೆ ಚುನಾವಣೆ ನಡೆಯಲಿದೆ ಎಂದರು.
ಚುನಾವಣೆಯನ್ನು ಬುಧವಾರದವರೆಗೂ ಮುಂದೂಡಿ ಡಿಸಿಯವರಿಗೆ ಸಂಪರ್ಕಿಸುವಂತೆ ಎಜಿಯವರಿಗೆ ಸೂಚಿಸಿದ್ದಾರೆ. ಡಿಸಿಯವರಿಗೂ ಸಂಪರ್ಕಿಸುವುದು ಎಜಿಯವರ ಕೆಲಸ, ಆದರೆ, ಎಲ್ಲ ಸಂಪರ್ಕವನ್ನು ಬಂದ್ ಮಾಡಿಕೊಂಡು ಕುಂತಿದ್ದಾರೆ. ನಮಗೂ ಯಾರನ್ನೂ ಸಂಪರ್ಕ ಮಾಡಲು ಅವಕಾಶ ನೀಡಿಲ್ಲ. ಸರ್ಕಾರ ಚುನಾವಣೆ ವ್ಯವಸ್ಥೆಯನ್ನು ದುರುಯೋಗ ಮಾಡಿಕೊಂಡು ಕೃತಕ ಬಹುಮತ ಪಡೆದುಕೊಂಡು ಚುನಾವಣೆ ನಡೆಸಿದ್ದಾರೆ. ಅಂತಿಮವಾಗಿ ಜಯ ನಮಗೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

Previous articleಮಸೀದಿಯಲ್ಲಿ ಬಾಂಬ್ ಸ್ಫೋಟ
Next articleದೈವರಾಧನೆ ಆಚರಣೆಗೆ ಸರ್ಕಾರ ಅಡ್ಡಿ ಪಡಿಸದಿರಲಿ