ಕೇಂದ್ರ ಸರ್ಕಾರ ಫೆಬ್ರವರಿ ೧ ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಸೋಲಾರ್‌ಗೆ ಹೆಚ್ಚಿನ ಅನುದಾನ ದೊರಕಲಿದೆ. ಡೊನಾಲ್ಡ್ ಟ್ರಂಪ್ ಸೋಲಾರ್‌ಗೆ ತಣ್ಣೀರು ಹಾಕುತ್ತಿದ್ದರೆ ಮೋದಿ ಹೆಚ್ಚಿನ ಬಂಡವಾಳ ಹೂಡಲು ತೀರ್ಮಾನಿಸಿದ್ದಾರೆ. ಈಗ ಸೋಲಾರ್ ಸೇರಿದಂತೆ ನವೀಕರಣ ವಿದ್ಯುತ್‌ಗೆ ೩೦ ಸಾವಿರ ಕೋಟಿ ರೂ. ಅನುದಾನ ಲಭಿಸುವ ಸಂಭವವಿದೆ. ಇದರಲ್ಲಿ ೫೦ ಲಕ್ಷ ಮನೆಗಳ ಮೇಲೆ ಸೋಲಾರ್ ಫಲಕ ಅಳವಡಿಸುವ ಪ್ರಮುಖ ಕಾರ್ಯಕ್ರಮ ಸೇರ್ಪಡೆಗೊಂಡಿದೆ. ಕನಿಷ್ಠ ೧೦ ಸಾವಿರ ಕೋಟಿ ರೂ. ಲಭಿಸುವುದು ಖಚಿತ. ಈ ವರ್ಷ ೧೯ ಸಾವಿರ ಕೋಟಿ ರೂ. ಅನುದಾನ ನೀಡಲಾಗಿತ್ತು. ೨೦೨೩ರಲ್ಲಿ ಅದು ಕೇವಲ ೭,೮೪೮ ಕೋಟಿ ರೂ. ಮಾತ್ರ ಆಗಿತ್ತು. ೨೦೨೪ರಲ್ಲಿ ೧ ಕೋಟಿ ಮನೆಗಳ ಮೇಲೆ ಸೋಲಾರ್ ಅಳವಡಿಕೆಗೆ ೭೫,೦೨೧ ಕೋಟಿ ರೂ. ನಿಗದಿಪಡಿಸಲಾಗಿತ್ತು. ಈ ಯೋಜನೆ ೨೦೨೭ಕ್ಕೆ ಮುಕ್ತಾಯಗೊಳ್ಳಲಿದೆ. ಇದರೊಂದಿಗೆ ಸೋಲಾರ್ ವಿದ್ಯುತ್ ಪ್ರತ್ಯೇಕ ಜಾಲವನ್ನು ನಿರ್ಮಿಸಲಾಗುವುದು. ಈಗ ೨೫೭.೬೨ ಗಿಗಾವ್ಯಾಟ್ ನವೀಕರಣ ವಿದ್ಯುತ್ ದೇಶದಲ್ಲಿ ಬಳಕೆಯಾಗುತ್ತಿದೆ. ಒಟ್ಟು ನವೀಕರಣ ವಿದ್ಯುತ್‌ನಲ್ಲಿ ಸೋಲಾರ್ ಶೇ. ೪೭ ಆಗಿದೆ.
ಕೇಂದ್ರದ ನೆರವಿನಿಂದ ಕರ್ನಾಟಕದಲ್ಲಿ ಸೋಲಾರ್ ಉತ್ಪಾದನೆ ಅಧಿಕಗೊಳ್ಳಲಿದೆ. ಇದರೊಂದಿಗೆ ಬ್ಯಾಟರಿ ದಾಸ್ತಾನು ವ್ಯವಸ್ಥೆ ಕೂಡ ಉತ್ತಮಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಕೇವಲ ಸೋಲಾರ್ ಮಾತ್ರ ಬರುವುದಿಲ್ಲ. ಅದರೊಂದಿಗೆ ಬ್ಯಾಟರಿ ಇದ್ದೇ ಇರುತ್ತದೆ. ಅಂದರೆ ಹಗಲು ವೇಳೆ ನಮಗೆ ಬೇಕಾದಷ್ಟು ಸೋಲಾರ್ ಬಳಸಿಕೊಳ್ಳುವುದು. ಹೆಚ್ಚುವರಿ ವಿದ್ಯುತ್ ಬ್ಯಾಟರಿಯಲ್ಲಿ ದಾಸ್ತಾನು ಆಗಿರುತ್ತದೆ. ರಾತ್ರಿ ಸೋಲಾರ್ ಇರುವುದಿಲ್ಲ. ಆಗ ಬ್ಯಾಟರಿಯಲ್ಲಿರುವ ವಿದ್ಯುತ್ ಬಳಸುವುದು. ಈ ಪದ್ದತಿ ಅಮೆರಿಕ ಮತ್ತಿತರ ದೇಶಗಳಲ್ಲಿ ಹಲವು ವರ್ಷಗಳ ಹಿಂದೆ ಜಾರಿಗೆ ಬಂದಿದೆ. ಈಗ ನಮ್ಮಲ್ಲೂ ಕಾಲಿಟ್ಟಿದೆ. ಪಾವಗಡದಲ್ಲಿ ಬ್ಯಾಟರಿ ಅಳವಡಿಕೆಯ ಸೌರ ಫಲಕ ತಲೆ ಎತ್ತಲಿದೆ. ಇದರಿಂದ ಅತಿ ಕಡಿಮೆ ದರದಲ್ಲಿ ವಿದ್ಯುತ್ ಪಡೆಯಬಹುದು. ಲೀಥಿಯಂ ಬ್ಯಾಟರಿಗಳು ಬಂದ ಮೇಲೆ ಈಗ ಪಾವಗಡದಂಥ ಸೋಲಾರ್ ಜತೆ ಅಲ್ಲೇ ಬ್ಯಾಟಿರಿಗಳನ್ನು ಅಳವಡಿಸಿ ಸೂರ್ಯ ಮುಳುಗಿದ ಮೇಲೂ ಬ್ಯಾಟರಿ ಮೂಲಕ ವಿದ್ಯುತ್ ನೀಡಬೇಕು. ಕ್ರೆಡಿಲ್ ಸಂಸ್ಥೆಯ ಅಂದಾಜಿನ ಪ್ರಕಾರ ಪ್ರತಿ ಯೂನಿಟ್‌ಗೆ ೧-೨ ರೂ. ಹೆಚ್ಚುವರಿ ವಿದ್ಯುತ್ ದರ ಬೀಳಲಿದೆ. ಜಲ ವಿದ್ಯುತ್ ಕೇಂದ್ರಗಳಲ್ಲಿ ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿದರೂ ಇಷ್ಟು ಕಡಿಮೆ ದರಕ್ಕೆ ವಿದ್ಯುತ್ ಲಭಿಸುವುದಿಲ್ಲ. ಇದುವರೆಗೆ ನಾವು ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಿದ್ದೇವೆ. ಬ್ಯಾಟರಿ ಬಗ್ಗೆ ಚಿಂತನೆ ನಡೆಸಿರಲಿಲ್ಲ. ಅದರಿಂದ ಸೋಲಾರ್ ವಿದ್ಯುತ್ ಕೂಡಲೇ ಬಳಕೆಯಾಗಿ ಬಿಡಬೇಕು ಎಂದು ಕೆಇಆರ್‌ಸಿ ಸೋಲಾರ್ ವಿದ್ಯುತ್ ಖರೀದಿಯನ್ನು ಕಡ್ಡಾಯಗೊಳಿಸಿತ್ತು. ಈಗ ಅದರ ಅಗತ್ಯವಿಲ್ಲ. ಬ್ಯಾಟರಿ ಮೂಲಕ ವಿದ್ಯುತ್ ದಾಸ್ತಾನು ಮಾಡಬಹುದು. ಕಲಬುರ್ಗಿಯಲ್ಲಿ ೧೦೦ ಮೆಗಾವ್ಯಾಟ್ ಸೋಲಾರ್ ೧೩೦ ಮೆಗಾವ್ಯಾಟ್ ಬ್ಯಾಟರಿ ಮೂಲಕ ವಿದ್ಯುತ್ ಪಡೆಯುವ ಕೇಂದ್ರ ಮತ್ತು ಪಾವಗಡ ಸಮೀಪ ಮತ್ತೊಂದು ಗ್ರಾಮದಲ್ಲಿ ೨೫೦ ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರ ತಲೆ ಎತ್ತಲಿದೆ. ಬ್ಯಾಟರಿ ಮೂಲಕ ಬರುವ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಕೇವಲ ೧-೨ ರೂ. ಮಾತ್ರ. ಸೋಲಾರ್ ಮತ್ತು ಲೀಥಿಯಂ ಬ್ಯಾಟರಿ ಡಿ.ಸಿ. ಕರೆಂಟ್‌ನಲ್ಲಿ ಕೆಲಸ ಮಾಡುತ್ತದೆ. ಆ ವಿದ್ಯುತ್ ಬಳಸಬೇಕು ಎಂದರೆ ಅದನ್ನು ಎ.ಸಿ. ರೂಪಕ್ಕೆ ಪರಿವರ್ತಿಸಬೇಕು. ಇದಕ್ಕೆ ಇನ್ವರ್ಟರ್ ಬಳಸುವುದು ಅನಿವಾರ್ಯ. ಕೇಂದ್ರ ಸರ್ಕಾರ ಸೌರ ವಿದ್ಯುತ್ ಬಳಸುವವರಿಗೆ ಹಲವು ರಿಯಾಯಿತಿ ಮತ್ತು ಸಬ್ಸಿಡಿಗಳನ್ನು ಘೋಷಿಸಿದ್ದರೂ ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಅವುಗಳನ್ನು ಜಾರಿಗೆ ತರುವ ಕಾರ್ಯಕೈಗೊಳ್ಳಬೇಕು. ಪ್ರತಿ ತಿಂಗಳೂ ೩೦೦ ಯೂನಿಟ್ ಮೇಲ್ಪಟ್ಟು ಸೌರ ವಿದ್ಯುತ್ ಉತ್ಪಾದಿಸಿ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಪ್ರತಿ ಕಿವ್ಯಾಟ್‌ಗೆ ೧೮ ಸಾವಿರ ರೂ. ನಿಂದ ೮೦ ಸಾವಿರ ರೂವರೆಗೆ ಸಬ್ಸಿಡಿ ಘೋಷಿಸಿದೆ. ಇವುಗಳನ್ನು ಜಾರಿಗೆ ತರಲು ಆಯಾ ರಾಜ್ಯದಲ್ಲಿರುವ ವಿದ್ಯುತ್ ವಿತರಣ ಕಂಪನಿಗಳನ್ನು ನೋಡಲ್ ಕೇಂದ್ರವಾಗಿ ಕೇಂದ್ರ ಇಂಧನ ಇಲಾಖೆ ನೇಮಿಸಿದೆ. ಪಾವಗಡದಲ್ಲಿರುವ ಸೌರವಿದ್ಯುತ್ ಕೇಂದ್ರ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಲಭಿಸುತ್ತಿದೆ. ಅದನ್ನು ಖರೀದಿಸುವುದರಲ್ಲಿ ವಿತರಣ ಕಂಪನಿಗಳಲ್ಲಿ ಉತ್ಸಾಹ ಕಂಡು ಬರುತ್ತಿದೆ.
ಈಗ ಹಸಿರು ವಿದ್ಯುತ್‌ಗೆ ಬಹಳ ಬೇಡಿಕೆ ಬಂದಿದೆ. ಸಾಮಾನ್ಯವಾಗಿ ಸೋಲಾರ್ ಸೇರಿದಂತೆ ಹಲವು ನವೀಕರಣ ವಿದ್ಯುತ್ ಮೂಲಗಳಿವೆ. ಇವುಗಳಲ್ಲಿ ಇಂಗಾಲಾಮ್ಲ ಬಿಡುಗಡೆಯಾಗುವುದಿಲ್ಲ. ವಿದ್ಯುತ್ ಮುಕ್ತ ಮಾರುಕಟ್ಟೆಯಲ್ಲಿ ಹಸಿರು ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಇದಕ್ಕೆ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿಗಳು. ಖಾಸಗಿ ಉದ್ಯಮಿಗಳು ಇದರಲ್ಲಿ ಹೆಚ್ಚು ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಇಡೀ ದೇಶದಲ್ಲಿ ಹಸಿರು ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ಶೇ.೩೦ ರಷ್ಟು ಉತ್ಪಾದನೆ ಸಾಮರ್ಥ್ಯ ಪಡೆದಿದೆ. ಕರ್ನಾಟಕ ಹೊರತುಪಡಿಸಿದರೆ ಮಹಾರಾಷ್ಟ್ರ ಶೇ. ೧೪, ತಮಿಳುನಾಡು ಶೇ. ೧೧ರಷ್ಟು ಸೋಲಾರ್ ವಿದ್ಯುತ್ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಸೋಲಾರ್ ವಿದ್ಯುತ್ ಬಳಸುವ ಕೈಗಾರಿಕೆಗಳು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ವರ್ಷ ಮೊದಲ ೬ ತಿಂಗಳಲ್ಲಿ ಕರ್ನಾಟಕ ೩.೬ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಕಂಡಿದೆ. ಕಳೆದ ವರ್ಷ ಇದು ೧.೪ ಗಿಗಾವ್ಯಾಟ್ ಮಾತ್ರ ಇತ್ತು. ಕೆಲವು ಕಡೆ ಸೋಲಾರ್ ಜತೆ ಗಾಳಿಯಂತ್ರವನ್ನೂ ಅಳವಡಿಸಲಾಗಿದೆ. ಹೀಗಾಗಿ ನವೀಕರಣ ವಿದ್ಯುತ್ ನಿರಂತರ ಲಭಿಸಲು ಸಾಧ್ಯವಾಗಿದೆ. ಉತ್ತರ ಕರ್ನಾಟಕ ಇದಕ್ಕೆ ಹೇಳಿಮಾಡಿಸಿದ ತಾಣವಾಗಿದೆ. ಬಂಜರು ಭೂಮಿ ಇದಕ್ಕೆ ಉತ್ತಮ ಸ್ಥಳ. ಆಂಧ್ರದಲ್ಲಿ ಈಗ ಸೋಲಾರ್ ಹೆಚ್ಚಿನ ಪ್ರಮಾಣದಲ್ಲಿ ತಲೆ ಎತ್ತುತ್ತಿದೆ. ಮುಂದಿನ ದಿನಗಳಲ್ಲಿ ೨೩ ಗಿಗಾವ್ಯಾಟ್ ವಿದ್ಯುತ್ ಕರ್ನಾಟಕ ಸೇರಿದಂತೆ ರಾಜಾಸ್ತಾನ, ಆಂಧ್ರ, ಮಹಾರಾಷ್ಟ್ರ. ತಮಿಳುನಾಡು ರಾಜ್ಯಗಳಲ್ಲಿ ಉತ್ಪಾದನೆಗೊಳ್ಳಲಿದೆ. ಈಗ ಸೋಲಾರ್ ಮಾರುಕಟ್ಟೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಬೇಕಿದೆ. ಇದಕ್ಕೆ ಪ್ರಮುಖ ಸಮಸ್ಯೆ ಭೂಮಿ. ಒಣ ಭೂಮಿ ಬೇಕು. ಅಲ್ಲಿ ಸೂರ್ಯನ ಕಿರಣಗಳು ಹೆಚ್ಚಿನ ಹೊತ್ತು ಲಭ್ಯವಿರಬೇಕು. ಕನಿಷ್ಠ ೬-೭ ಗಂಟೆ ಸೂರ್ಯನ ಶಾಖ ಲಭಿಸಬೇಕು. ಅಲ್ಲದೆ ವರ್ಷದಲ್ಲಿ ಎಷ್ಟು ದಿನ ಸೂರ್ಯ ಸಂಪೂರ್ಣವಾಗಿ ಲಭಿಸುತ್ತಾನೆ ಎಂಬುದು ಮುಖ್ಯ. ಇದನ್ನು ಅಧ್ಯಯನ ಮಾಡಲು ಪ್ರತ್ಯೇಕ ಸಂಸ್ಥೆ ಇದೆ. ಭೂಮಿ ಲಭಿಸಿದರೂ ಸಮೀಪದಲ್ಲಿ ವಿದ್ಯುತ್ ಮಾರ್ಗ ಇರಬೇಕು. ಇಲ್ಲದಿದ್ದಲ್ಲಿ ಉತ್ಪಾದಿತ ವಿದ್ಯುತ್ ಸಾಗಿಸುವುದಕ್ಕೆ ಹೆಚ್ಚು ಹಣ ಬೇಕಾಗುತ್ತದೆ. ವಿತರಣ ಕಂಪನಿಗಳ ವಿದ್ಯುತ್ ಮಾರ್ಗ ಸಮೀಪದಲ್ಲಿರುವುದು ಮುಖ್ಯ. ಎಲ್ಲಿ ಉತ್ಪಾದಿತ ವಿದ್ಯುತ್ ಇರುತ್ತದೋ ಅಲ್ಲಿ ಸಂಬಂಧಪಟ್ಟ ವಿದ್ಯುತ್ ಕಂಪನಿಗೆ ಕೊಟ್ಟು ಅದೇ ವಿದ್ಯುತ್ ಮತ್ತೊಂದು ಕಡೆ ನಮಗೆ ಬೇಕಾದ ಸ್ಥಳದಲ್ಲಿ ಪಡೆಯಬಹುದು. ಇದಕ್ಕೆ ನಿಗದಿತ ಶುಲ್ಕವನ್ನು ವಿತರಣ ಕಂಪನಿಗೆ ಕೊಡಬೇಕು. ೧೫ ರಾಜ್ಯಗಳಲ್ಲಿ ಸಗಟು ವಿದ್ಯುತ್ ಖರೀದಿ ದರ, ವಿದ್ಯುತ್ ಖರೀದಿ ಒಪ್ಪಂದ, ಮುಕ್ತ ಮಾರುಕಟ್ಟೆ ಮೇಲೆ ಸುಂಕ ಸೇರಿದಂತೆ ಹಲವು ವೆಚ್ಚಗಳಿವೆ. ಇದರಿಂದ ಸೋಲಾರ್ ಖರೀದಿ ದರ ನಿಗದಿಯಾಗುತ್ತದೆ. ಈ ರೀತಿ ಉತ್ಪಾದನೆಗೊಂಡ ವಿದ್ಯುತ್ತನ್ನು ಬೇಡಿಕೆ ಇರುವ ಸ್ಥಳಕ್ಕೆ ರವಾನಿಸಿ ಅಲ್ಲಿ ಬ್ಯಾಟರಿಗಳಲ್ಲಿ ದಾಸ್ತಾನು ಮಾಡಿ ಬಳಸಬಹುದು. ೨೦೫೦ಕ್ಕೆ ಇಂಧನ ತೈಲಗಳ ಬಳಕೆ ಶೂನ್ಯಕ್ಕೆ ಬರಲಿದೆ. ಅಷ್ಟರಲ್ಲಿ ಬ್ಯಾಟರಿ ಉತ್ಪಾದನೆ ಹೆಚ್ಚಿಸಿಕೊಳ್ಳುವುದು ಅಗತ್ಯ.