ಕಲ್ಲಡ್ಕರಿಗೆ ಜಾಮೀನು ಕೊಡಿಸಿದ ವಕೀಲರಿಗೆ ಸನ್ಮಾನ

0
16

ಶ್ರೀರಂಗಪಟ್ಟಣ: ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯಲ್ಲಿ ತಮ್ಮ ಹೇಳಿಕೆಯಿಂದ ಮುಸ್ಲೀಂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿ ಪ್ರಕರಣ ದಾಖಲುಗೊಂಡಿದ್ದ ಹಿಂದುತ್ವವಾಧಿ ಕಲ್ಲಡ್ಕ‌ ಪ್ರಭಾಕರ್ ರವರಿಗೆ ನಿರೀಕ್ಷಣಾ ಜಾಮೀನು ಕೊಡಿಸಿದ ಪಟ್ಟಣದ ವಕೀಲ ಚಂದ್ರೇಗೌಡರಿಗೆ ಕಾಂಗ್ರೆಸ್ ಪಕ್ಷವು ಉಚ್ಚಾಟಿಸಿದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳ ಮುಖಂಡರು‌ ಅಭಿನಂಧಿಸಿ ಸನ್ಮಾನಿಸಿದರು.
ಬಿಜೆಪಿ‌ ಮುಖಂಡ ಇಂಡುವಾಳು ಸಚ್ಚಿದಾನಂದ, ಪುರಸಭೆ ಸದಸ್ಯ ಎಸ್.ಪ್ರಕಾಶ್, ಹಿಂದೂ ಜಾಗರಣಾ ವೇಧಿಕೆಯ ಚಂದನ್ ನೇತೃತ್ವದಲ್ಲಿ ಪಟ್ಟಣದ ಖಾಸಗಿ ಹೋಟೆಲ್ ಬಳಿ ವಕೀಲ ಚಂದ್ರೇಗೌಡರನ್ನು‌ ಅಭಿನಂಧಿಸಿ, ಶುಭ ಕೋರಿದ ಹಿಂದೂಪರ ಸಂಘಟನೆಗಳ‌ ಮುಖಂಡರು, ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿ ಎನ್ನುವುದಕ್ಕೆ‌ ಇದೊಂದು ಸ್ಪಷ್ಟ ಉದಾಹರಣೆ. ಹಿಂದುತ್ವವಾದಿಗೆ ಜಾಮೀನು ಕೊಡಿಸಿದ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ತಾಲ್ಲೂಕು ಕಾನೂನು ವಿಭಾಗದ ಅಧ್ಯಕ್ಷ ಸ್ಥಾನದಿಂದ ಚಂದ್ರೇಗೌಡರನ್ನು‌‌ ಉಚ್ಚಾಟನೆ ಮಾಡಿರುವುದು ತಮ್ಮ‌ ಪಕ್ಷದ ಹಿಂದೂ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ‌ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ವಕೀಲ ಚಂದ್ರೇಗೌಡ, ನಾನೊಬ್ಬ ಹಿಂದೂ ವಕೀಲ. ವಕೀಲ ವೃತ್ತಿಯಲ್ಲಿ‌ ಯಾವುದೇ ಸಮುದಾಯದ ನನ್ನ ಕಕ್ಷಿದಾರರಿಗೆ ನ್ಯಾಯ ಕೊಡಿಸುವುದು ನನ್ನ ಕರ್ತವ್ಯ. ಆ ಹಿನ್ನೆಲೆಯಲ್ಲಿ ಹಿಂದೂಪರ ಹೋರಾಟಗಾರ ಕಲ್ಲಡ್ಕ ಪ್ರಭಾಕರ್ ರವರಿಗೆ ನ್ಯಾಯ ಕೊಡಿಸಿದ್ದೇನೆ. ನನ್ನನ್ನು ಕಾನೂನು ವಿಭಾಗದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಬುದ್ದಿಯನ್ನು ತೋರಿಸಿದೆ. ನನ್ನ ರಕ್ತದಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ. ಕಲ್ಲಡ್ಕ ಪ್ರಭಾಕರ್ ರವರು ಯಾವುದೇ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗದೇ ಕೇವಲ ಹಿಂದುಪರ ಮಾತನಾಡಿದರು‌ ಎಂಬ ಕಾರಣಕ್ಕಾಗಿ ಅನ್ಯ ಕೋಮಿನವರು ಅವರ ವಿರುದ್ದ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ನನ್ನ ವಾದಕ್ಕೆ ಮನ್ನಣೆ ಸಿಕ್ಕಿದೆ. ಹಿಂದುತ್ವಕ್ಕೆ ಜಯ ದೊರೆತಿದೆ. ನನ್ನ ಹಿತೈಷಿಗಳೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು‌ ನಿರ್ಧರಿಸಲಾಗುವುದು ಎಂದು ತಿಳಿಸಿದರು.

Previous articleಮಂತ್ರಾಲಯದಲ್ಲಿ 36 ಅಡಿಯ ಅಭಯರಾಮ ಪ್ರತಿಷ್ಠಾಪನೆಗೆ ಸಿದ್ಧತೆ
Next articleಗ್ರಾಹಕರ ಅಭಿರುಚಿಗೆ ತಕ್ಕಂತೆ KSDL ಉತ್ಪಾದನೆಯಲ್ಲಿ ತೊಡಗಿದೆ