ಎಲ್ಲಾ ಉಚಿತ ಆದರೆ ನಷ್ಟ ಖಚಿತ

ವಿಶ್ವ ಮೈಸೂರಿಗೆ ಕೆಂಪು ಬಸ್ಸಲ್ಲಿ ಹೊರಟಿದ್ದ, ಕಂಡಕ್ಟರ್ ವಿಶ್ವನಿಗೆ ಎರಡು ಟಿಕೆಟ್ ಕೊಟ್ಟ.
“ಕಂಡಕ್ಟ್ರೇ, ನಾನೊಬ್ನೇ ಇರೋದು ಸಿಂಗಲ್ಲು”
“ಗೊತ್ತು ಸಾರ್ ನೀವ್ ಒಬ್ರೇ ಇರೋದು, ನೀವು ನಮಗೆ ಬಹಳ ಬೇಕಾದವ್ರಲ್ವೇ, ಡಬಲ್ ಟಿಕೇಟ್ ಕೊಳ್ಳಿ ಪ್ಲೀಸ್” ಎಂದಾಗ ವಿಶ್ವನಿಗೆ ಆಶ್ಚರ್ಯವಾಯ್ತು.
“ನಾನೇನು ಅಷ್ಟು ದಪ್ಪ ಇದ್ದೀನಾ?” ಎಂದು ಕೇಳಿದ.
“ಸಣ್ಣ, ದಪ್ಪ ಪ್ರಶ್ನೆ ಅಲ್ಲ ಸಾರ್, ತಲೆಗೊಂದು ಟಿಕೇಟ್” ಎಂದ ಕಂಡೆಕ್ಟರ್.
“ತಲೆ ಇಲ್ಲದವರಿಗೆ?”
“ಅವರು ನಮ್ಮ ಬಸ್ಸಲ್ಲಿ ಬರೋದೇ ಇಲ್ಲ, ನಾಯಕರಾಗಿ ದೊಡ್ಡ ಕಾರಲ್ಲೇ ಓಡಾಡ್ತಾರೆ”
“ಎರಡು ಟಿಕೇಟ್ ಯಾಕೆ ತಗೋಬೇಕು ಕಾರಣ ಕೊಡಿ!” ಎಂದ ವಿಶ್ವ.
“ಸಾರ್, ನಮ್ಗೆ ನೆಟ್ಟಗೆ ಸಂಬಳ ರ‍್ತಾ ಇಲ್ಲ, ಸಂಸ್ಥೆಗೆ ನಷ್ಟ ಆಗ್ತಾ ಇದೆ, ಅರ್ಧ ಮಂದಿ ಪ್ರಯಾಣಿಕರಿಗೆ ಬಿಟ್ಟಿ ಸೌಲಭ್ಯ ಕೊಟ್ರೆ ಖರ್ಚು ತೂಗ್ಸೋಕೆ ಹೇಗೆ ಆಗುತ್ತೆ, ಒಬ್ರನ್ನ ಫ್ರೀಯಾಗಿ ಬಿಟ್ಟಿದ್ದಕ್ಕೆ ಇನ್ನೊಬ್ಬರಿಂದ ಡಬಲ್ ಚಾರ್ಜ್ ಪೀಕಿಸ್ತೀವಿ”.
“ಎತ್ತಿಗೆ ಜ್ವರ ಆದ್ರೆ ಎಮ್ಮೆಗೆ ಬರೆ ಹಾಕೋದಾ?”
“ಬರೆ ಹಾಕಲೇಬೇಕು ಸಾರ್, ಪ್ರತೀ ವಾರ ನಿಮ್ಮ ವೈಫು ನಮ್ಮ ಬಸ್ನಲ್ಲೇ ಮೈಸೂರಿಗೆ ಹೋಗಿ ಚಾಮುಂಡಿಯ ದರ್ಶನ ಮಾಡ್ಕೊಂಡ್ ಅಲ್ಲೇ ಊಟ ಮುಗಿಸಿ ಖರ್ಚಿಲ್ಲದೆ ವಾಪಸ್ ರ‍್ತಾರೆ” ಎಂದ ಕಂಡಕ್ಟರ್.
“ಗೊತ್ತು, ಬಸ್ಸು ಬಿಟ್ಟಿ ಇರೋವಾಗ ಎಲ್ಲೆಲ್ಲೋ ಊಟ, ಇಂಥವರಿಂದ ಬಸ್ಸಲ್ಲಿ ವಿಪರೀತ ರಶ್ಶು”. ಎಂದ ವಿಶ್ವ.
“ನಿಮ್ಮ ಶ್ರೀಮತಿಯವರಿಂದ ಆದ ನಷ್ಟಾನ ನೀವು ಕಾಂಪನ್ಸೇಟ್ ಮಾಡಬೇಕಲ್ಲ, ದಯವಿಟ್ಟು ಎರಡು ಟಿಕೇಟ್ ಕೊಳ್ಳಿ, ನಮ್ಮ ಸಂಸ್ಥೆಗೆ ಸಹಾಯ ಮಾಡಿ, ಎಲ್ಲ ಗಂಡಂದಿರಲ್ಲೂ ಇದೇ ನನ್ನ ಮನವಿ” ಎಂದು ಒತ್ತಾಯ ಮಾಡಿದ. ವಿಶ್ವನಿಗೆ ಆತನ ಮೇಲೆ ಕನಿಕರ ಬಂದು ಎರಡು ಟಿಕೆಟ್ ಪಡೆದ.
ಮರುದಿನ ವಿಶ್ವನ ಮನೆಯಲ್ಲಿ ನಾನು ಕುಳಿತಿದ್ದಾಗ ಈ ವಿಷಯ ಚರ್ಚೆಗೆ ಬಂತು.
“ಸಂಸ್ಥೆಗೆ ಕಷ್ಟ ಇರೋವಾಗ ಬಿಟ್ಟಿ ಬಸ್ ಯಾಕ್ ಬಿಡಬೇಕಾಗಿತ್ತು?” ಎಂದು ವಿಶ್ವ ಕೇಳಿದ.
“ಚುನಾವಣೆ ಟೈಮಲ್ಲಿ ಆಶ್ವಾಸನೆ ಕೊಟ್ಟರ‍್ತಾರೆ, ನಮಗೆ ಓಟು ಕೊಟ್ರೆ, ಬಿಟ್ಟಿ ಕರೆಂಟು, ಬಿಟ್ಟಿ ಬಸ್ಸು, ಬಿಟ್ಟಿ ಅಕ್ಕಿ ಭಾಗ್ಯ, ಪ್ರತಿ ತಿಂಗಳು ಒಂದಷ್ಟು ಬಿಟ್ಟಿ ಹಣ ಕೊಡ್ತೀವಿ ಎಂದೆಲ್ಲ ಹೇಳರ‍್ತಾರಲ್ಲ?” ಎಂದೆ.
“ಗಾಳಕ್ಕೆ ಎರೆ ಹುಳು ಸಿಕ್ಕಿಸಿದರೆ ಮೀನು ಸಿಗುತ್ತೆ, ಮೊದಲು ನಾಯಕರು ತಾವೇ ಎಲ್ಲಾ ತಿಂತಾ ಇದ್ರು, ಈಗ ಅವರು ತಿನ್ನೋದಲ್ಲೇ ಒಂದು ಮುಷ್ಠಿ ಅನ್ನ ಜನಕ್ಕೂ ಹಾಕ್ತಾರೆ” ಎಂದ ವಿಶ್ವ.
“ಊಟ ಮಾಡೋ ಮೊದಲು ಕಾಗೆಗೆ ಒಂದು ಮುಷ್ಠಿ ಅನ್ನ ಹಾಕ್ತಾರಲ್ಲ ಹಾಗೆ!” ಎಂದೆ. ವಿಶಾಲು ಕಾಫಿ ತಂದಿಟ್ಟಳು.
“ನೀವು ಏನೇ ಹೇಳಿ, ಇಷ್ಟು ಭಾಗ್ಯಗಳು ಬೇರೆ ಯಾರೂ ಕೊಟ್ಟಿರಲಿಲ್ಲ, ಮುಟ್ಟಿದ್ದೆಲ್ಲ ಭಾಗ್ಯ ಆಗ್ತಿದೆ, ಹಂಚಿ ತಿನ್ನೋದ್ರಲ್ಲಿ ಸುಖ ಇದೆ. ತಮಗೆ ಬರೋ ಭಾಗ್ಯದಲ್ಲಿ ಜನಗಳಿಗೂ ಸ್ವಲ್ಪ ಕೊಡ್ತಾರಪ್ಪ, ಏನ್ ತಪ್ಪು?” ಎಂದಳು ವಿಶಾಲು. ಅವಳಿಗೆ ಪ್ರತಿ ತಿಂಗಳು ಹಣ ರ‍್ತಿತ್ತು. “ವಿಶಾಲು, ನಿಮಗೆ ಬರೋ ಹಣ ಬಡ ಜನಗಳ ತೆರಿಗೆಯಿಂದ ಬಂದಿರುತ್ತೆ” ಎಂದೆ.
“ಬರಲಿ, ಏನೀಗ? ಇದರಿಂದ ಅನೇಕ ಅನುಕೂಲಗಳೂ ಇರುತ್ತೆ ಜಯಲಲಿತ ಸಿ.ಎಂ. ಆಗಿದ್ದಾಗ ಮೊದಲ ಬಾರಿಗೆ ಎಲ್ಲಾ ಪಿ.ಯು.ಸಿ. ಹುಡುಗರಿಗೆ ಒಂದೊಂದು ಲ್ಯಾಪ್ ಟಾಪ್ ಉಚಿತವಾಗಿ ಕೊಟ್ಟರು. ಇದರಿಂದ ತಮಿಳು ನಾಡಿನ ವಿದ್ಯಾರ್ಥಿಗಳಿಗೆ ಅನುಕೂಲ ಆಯ್ತಲ್ವಾ?” ವಿಶಾಲು ಸವಾಲೆಸೆದಳು.
ಅದಕ್ಕೆ ವಿಶ್ವ ಒಪ್ಪಲಿಲ್ಲ. “ಅವರ ಕೈಯಿಂದ ಕೊಟ್ಟಿದ್ರೆ ಓಕೆ, ಸರ್ಕಾರದ ಹಣ ಅಂದರೆ ಬಡವರ ತೆರಿಗೆ ದುಡ್ಡು” ಎಂದು ವಿಶ್ವ ಹೇಳಿದಾಗ ವಿಶಾಲು ವಿವರಿಸಿದಳು.
“ನೋಡಿ, ಸರ್ಕಾರದಿಂದ ಆರೋಗ್ಯದ ಸ್ಕೀಮ್‌ಗಳಿವೆ, ಬೀದಿ ದೀಪಗಳು, ಪಬ್ಲಿಕ್ ಟ್ಯಾಪ್‌ಗಳು ಎಲ್ಲಾದಕ್ಕೂ ತೆರಿಗೆ ಹಣ ಖರ್ಚು ಮಾಡ್ತಾರಲ್ಲ ಅದೇ ರೀತಿ ಕ್ಯಾಷು ಕೊಡ್ತಾರಪ್ಪ”
“ಕ್ಯಾಷ್ ಕೊಡೋ ಬಗ್ಗೆ ನನಗೆ ತಕರಾರು ಇದ್ಯಪ್ಪ, ನೋಡು ವಿಶ್ವ, ಜನಕ್ಕೆ ಎಲ್ಲಾ ವಸ್ತುಗಳನ್ನ ಕೊಡ್ತೀವಿ ನಿಜ. ಆದರೆ ಕೈಗೆ ಕ್ಯಾಷ್ ಬಂದಾಗ ಆಗೋ ಸಂತೋಷ ಬೇರೆ ಏನು ಕೊಟ್ಟಾಗಲೂ ಆಗೊಲ್ಲ” ಎಂದೆ.
ನನಗೆ ಹಳೇ ಜೋಕೊಂದು ನೆನಪಾಯ್ತು ಅದನ್ನ ವಿಶ್ವನಿಗೆ ಹೇಳಿದೆ.“ಇದು ನೀನು ಕೇಳಿರೋ ಜೋಕೇ, ಒಂದು ಹೋಟೆಲ್ ಮುಂದೆ ಬೋರ್ಡ್ ಹಾಕಿದ್ರಂತೆ, ‘ಬನ್ನಿ, ತಿನ್ನಿ, ಬಿಲ್ ಕೊಡುವಷ್ಟು ಇಲ್ಲ, ನಿಮ್ಮ ಮೊಮ್ಮಗ ಕೊಡುತ್ತಾನೆ’ ಅಂತಿತ್ತು. ಒಬ್ಬ ವ್ಯಕ್ತಿಗೆ ಬೋರ್ಡ್ ನೋಡಿ ಖುಷಿ ಆಗೋಯ್ತು, ಹೋಟೆಲ್‌ನಲ್ಲಿ ಇರೋ ಐಟಂಸ್‌ಗಳ್ನೆಲ್ಲ ತರಿಸಿ ಚೆನ್ನಾಗಿ ತಿಂದ, ಬಿಲ್ ಸಾವಿರ ರೂಪಾಯಿ ಆಯ್ತು, ಎದ್ದು ಬರುವಾಗ, ವೆಯ್ಟರ್ ‘ಸ್ವಾಮಿ ೧೨೫೦/- ಬಿಲ್ ಇದೆ, ಇದನ್ನು ಕ್ಲಿಯರ್ ಮಾಡಿ’ ಎಂದ.
“ರೀ ೧೨೫೦/- ಬಿಲ್ ನಂದಲ್ಲ” ಎಂದ ಗ್ರಾಹಕ.
‘ನಿಜ ಇದು ನಿಮ್ಮ ಬಿಲ್ ಅಲ್ಲ ಸ್ವಾಮಿ, ನೀವು ತಿಂದಿರೋದನ್ನ ನಿಮ್ಮ ಮೊಮ್ಮಗ ಕೊಡ್ತಾನೆ, ಆದರೆ ನಿಮ್ಮ ತಾತ ತಿಂದಿರೋ ಬಿಲ್ಲು ಇದು ರೂ.೧,೨೫೦/- ಮೊಮ್ಮಗನಾಗಿ ಇದನ್ನ ನೀವು ಕೊಡ್ಲೇಬೇಕಾಗುತ್ತಲ್ಲ” ಎಂದು ಒತ್ತಾಯಿಸಿ ಹಣ ವಸೂಲಿ ಮಾಡಿದ. “ಹೀಗೆ ತಾತಾ ಮಾಡಿದ ಸಾಲನಾ ಮೊಮ್ಮಗ ತೀರಿಸಿದಂತೆ ಹಳೇ ಸರ್ಕಾರ ಮಾಡಿದ ಸಾಲಾನ ಹೊಸ ಸರ್ಕಾರ ತೀರಿಸಬೇಕು” ಎಂದಳು ವಿಶಾಲು.
“ಇಂಧನದ ಬೆಲೆ ಜಾಸ್ತಿ ಮಾಡಿದ್ರು, ಅವರಿಗೆ ಆಗ್ಲೇ ಗೊತ್ತಿತ್ತು, ನೀರು, ಹಾಲು, ಸಾರಿಗೆ, ತರಕಾರಿ, ಆಟೋ ಚಾರ್ಚು, ಎಲ್ಲಾ ಇದರಿಂದ ದುಬಾರಿ ಆಗುತ್ತೆ ಅಂತ. ತಮ್ಮ ಸ್ವಾರ್ಥಕ್ಕೆ ನಮ್ಮನ್ನ ಬಳಸಿಕೊಳ್ಳ ಬಾರದಿತ್ತು”.
“ಎಲ್ಲಿ ಉಚಿತವಾಗಿ ಐಟಂಗಳ್ನ ಕೊಡ್ತಾರೋ ಅಲ್ಲಿ ಅಪಾಯದ ಗಂಟೆಗಳು ತಮಗೆ ತಾವೇ ಹೊಡೆದುಕೊಳ್ಳುತ್ತೆ. ರೇಷನ್ ಅಕ್ಕಿ ಇಪ್ಪತ್ತು ಮೂವತ್ತು ಕೆ.ಜಿ. ಕೊಟ್ಟಾಗ ಅನೇಕರು ಪಕ್ಕದ ಅಂಗಡಿಗೇ ಮಾರಿಕೊಳ್ತಾರೆ, ನೋಡಿರೋ ಸತ್ಯ ಇದು, ಲಾರಿಗಳಲ್ಲಿ ರೇಷನ್ ಅಕ್ಕೀನ ಬೇರೆ ಕಡೆ ಸಾಗಿಸಿದ ವಿಷ್ಯಯಾನ ಪೇಪರ್‌ಗಳಲ್ಲಿ ಹಾಕ್ತಾನೇ ರ‍್ತಾರೆ, ಆದ್ದರಿಂದ ಜನಕ್ಕೆ ಅಗತ್ಯ ಇರೋದನ್ನ ಮಾತ್ರ ಕೊಡಬೇಕು”
“ಏನಪ್ಪ ಆ ರೀತಿ ಅಗತ್ಯ ಇರೋದು?” ಎಂದು ವಿಶ್ವ ನನ್ನೇ ಕೇಳಿದ. “ಟೋಲ್‌ನಲ್ಲಿ ಚಾರ್ಜಸ್ ಕಡಿಮೆ ಮಾಡಿ, ಹಾಲಿನ ಬೆಲೆ ಕಡಿಮೆ ಮಾಡಿ, ಎಲ್ಲಾ ರೇಟ್‌ಗಳೂ ಕಮ್ಮಿ ಆಗಲಿ, ನೇರವಾಗಿ ಕ್ಯಾಷ್ ಕೊಡೋ ಬದಲು ಈ ರೀತಿ ಮಾಡಿದ್ರೆ ಎಲ್ಲಾ ಜನಕ್ಕೆ ಖಂಡಿತ ಸಹಾಯ ಆಗುತ್ತಲ್ಲ” ಎಂದೆ.
“ಅದೇ ರೀತಿ ಸಹಾಯ ಮಾಡಿದರೆ ಓಟು ಸಿಗಲ್ಲವಲ್ಲ?” ಎಂದು ವಿಶ್ವ ನಕ್ಕ.