ನವದೆಹಲಿ: ಅಂಕೋಲಾ ಬಳಿ ರಾಷ್ಟ್ತ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಮೃತಪಟ್ಟವರನ್ನು ಹೊರ ತೆಗೆಯಲು ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಿದ್ದು, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೋರಿದ್ದಾರೆ.
ಈ ದುರ್ಘಟನೆಯಲ್ಲಿ ಬಲಿಯಾಗಿ ಕಾಣೆಯಾಗಿರುವ ಮೃತರ ದೇಹಗಳ ಶೋಧ ಕಾರ್ಯ ಮುಂದುವರೆದಿದೆ. ಈ ಕಾರ್ಯಕ್ಕೆ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದ್ದು, ಶೋಧ ಕಾರ್ಯ ಮುಂದುವರೆಸಲು ಈ ತಂಡಕ್ಕೆ ಬೇಕಾದ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಜೋಶಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ರಣ ಮಳೆಯಿಂದಾಗಿ ಅವಘಡಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಜನರು ಬಹು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಉತ್ತರ ಕನ್ನಡದ ಅಂಕೋಲಾ ಸಮೀಪ ಶಿರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಜನರು ಮೃತಪಟ್ಟಿರುವ ಬಗ್ಗೆ ಸಚಿವ ಜೋಶಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಚಿವ ಪ್ರಲ್ಹಾದ ಜೋಶಿ `ಎಕ್ಸ್’ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಹೇಳಿಕೆ ನೀಡಿದ್ದಾರೆ.