ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ಗಂಟೆಗೂ ಹೆಚ್ಚು ಕಾಲ ದೂರವಾಣಿ ಮಾತುಕತೆ ನಡೆಸಿದರು. ಆದರೆ, ಅಂತಿಮವಾಗಿ ಟ್ರಂಪ್‌ಗೆ ಈ ಸಮಾಲೋಚನೆಯಿಂದ ಯಾವುದೇ ಧನಾತ್ಮಕ ಫಲಿತಾಂಶ ಲಭಿಸಲಿಲ್ಲ. ಈ ಮಾತುಕತೆ ಒಂದು ರೀತಿ ಅವಮಾನಕರವಾದರೂ, ಟ್ರಂಪ್ ಅದನ್ನು ಒಂದು ಯಶಸ್ಸು ಎನ್ನುವಂತೆ ಬಿಂಬಿಸಲು ಪ್ರಯತ್ನ ನಡೆಸಿದರು.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಕಳೆದ ಮೂರು ವರ್ಷಗಳಿಂದಲೂ ಮುಂದುವರಿದಿದೆ. ಕಳೆದ ವಾರ ನಡೆದ ಸಮಾಲೋಚನೆಯಲ್ಲಿ, ಅಮೆರಿಕಾ ಮತ್ತು ಉಕ್ರೇನ್ ೩೦ ದಿನಗಳ ಕಾಲ ಯುದ್ಧವನ್ನು ಸ್ಥಗಿತಗೊಳಿಸಲು ಒಪ್ಪಿಗೆ ಸೂಚಿಸಿದ್ದವು.
ಒಂದು ವೇಳೆ, ರಷ್ಯಾ ಏನಾದರೂ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸದೇ ಹೋದರೆ, ತಾನು ಇನ್ನಷ್ಟು ಕಠಿಣ ನಿಯಮಗಳ ಮೂಲಕ ರಷ್ಯಾವನ್ನು ಶಿಕ್ಷಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಆದರೆ, ಕೊನೆಗೆ ಟ್ರಂಪ್ ಅಂತಹ ಯಾವ ನಿರ್ಧಾರವನ್ನೂ ಕೈಗೊಳ್ಳಲಿಲ್ಲ.
ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುತ್ತಾ ಬಂದಿರುವ ಯುನೈಟೆಡ್ ಕಿಂಗ್‌ಡಮ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸಹ “ಪುಟಿನ್ ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದಾರೆ” ಎಂದು ಹೇಳಿದ್ದರು.
ಪೂರ್ಣ ಪ್ರಮಾಣದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವ ಬದಲು, ಉಭಯ ಪಡೆಗಳು ಪರಸ್ಪರರ ಇಂಧನ ವ್ಯವಸ್ಥೆಗಳ ಮೇಲೆ ದಾಳಿ ನಡೆಸುವುದನ್ನು ಸ್ಥಗಿತಗೊಳಿಸೋಣ ಎಂದು ಪುಟಿನ್ ಸಲಹೆ ನೀಡಿದ್ದಾರೆ. ಉಕ್ರೇನ್ ರಷ್ಯಾದ ಮೂಲಭೂತ ವ್ಯವಸ್ಥೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸುತ್ತಿರುವುದರಿಂದ, ಇಂತಹ ಒಂದು ಪ್ರಸ್ತಾಪ ಸಹಜವಾಗಿಯೇ ರಷ್ಯಾಗೆ ಲಾಭದಾಯಕವಾಗಲಿದೆ.
ಮಾತುಕತೆಯಲ್ಲಿ ಏನಾದರೂ ಪ್ರಗತಿ ಸಾಧಿಸಬೇಕಾದರೆ, ಉಕ್ರೇನ್ ಮೊದಲು ಬೇರೆ ದೇಶಗಳಿಂದ ಮಿಲಿಟರಿ ನೆರವು ಪಡೆಯುವುದನ್ನು ನಿಲ್ಲಿಸಬೇಕು, ಮತ್ತು ಮಿಲಿಟರಿ ನೇಮಕಾತಿ ಮತ್ತು ತರಬೇತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಪುಟಿನ್ ಹೇಳಿದ್ದಾರೆ. ಆದರೆ, ಉಕ್ರೇನ್ ಈ ಹೆಜ್ಜೆ ಇಡಬೇಕು ಎನ್ನುವ ರಷ್ಯಾ, ತಾನೂ ಇಂತಹ ಕ್ರಮಗಳನ್ನು ಕೈಗೊಳ್ಳಲು ಮಾತ್ರ ಸಿದ್ಧವಿಲ್ಲ!
ಪುಟಿನ್ ತಾನು ‘ಯುದ್ಧದ ಮೂಲ ಕಾರಣವನ್ನು’ ಸರಿಪಡಿಸಲು ಪ್ರಯತ್ನ ನಡೆಸುತ್ತಿದ್ದೇನೆ ಎಂದು ಹೇಳುತ್ತಿದ್ದಾರಾದರೂ, ಅವರ ಮಾತಿನ ಹಿಂದಿರುವ ಅರ್ಥ ಉಕ್ರೇನ್ ಸ್ವತಂತ್ರ ರಾಷ್ಟ್ರವಾಗಿ ಮುಂದುವರಿಯದಂತೆ ಮಾಡುವುದೇ ಆಗಿದೆ. ಪುಟಿನ್ ಮಾತುಗಳು ಶಾಂತಿ ಸ್ಥಾಪನೆಯನ್ನು ಬಯಸುವವರು ಆಡುವ ಮಾತುಗಳಂತೆ ಕಂಡುಬರುತ್ತಿಲ್ಲ. ಇಷ್ಟಾದರೂ, ಒಂದಷ್ಟು ಆಶಾಭಾವನೆ ಹೊಂದಲು ಸಣ್ಣ ಕಾರಣವಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಇಂಧನ ಸ್ಥಾವರಗಳ ಮೇಲೆ ದಾಳಿ ನಡೆಸದಿರುವ ಕುರಿತು ನಡೆದ ಮಾತುಕತೆಗೆ ಒಪ್ಪಿಗೆ ಸೂಚಿಸಿರುವುದು ಒಂದು ರೀತಿಯಲ್ಲಿ ಮುಂದೆ ಹೆಜ್ಜೆ ಇಟ್ಟಂತಾಗಿದೆ. ಸುರಕ್ಷತೆಯ ದೃಷ್ಟಿಯಿಂದ, ಉಕ್ರೇನಿನ ಪರಮಾಣು ವಿದ್ಯುತ್ ಕೇಂದ್ರಗಳನ್ನು ಅಮೆರಿಕಾ ನಿಯಂತ್ರಿಸಬೇಕು ಎಂದು ಟ್ರಂಪ್ ಸಲಹೆ ನೀಡಿದ್ದಾರೆ. ಟ್ರಂಪ್ ಯುರೋಪ್‌ನಿಂದ ಪ್ಯಾಟ್ರಿಯಟ್ ಕ್ಷಿಪಣಿಗಳನ್ನು ಪಡೆಯುವ ಕುರಿತೂ ಆಲೋಚನೆ ಹೊಂದಿದ್ದಾರೆ. ಆದರೆ, ಉಕ್ರೇನ್ ಕುರಿತು ಪುಟಿನ್‌ರ ಕಠಿಣ ಬೇಡಿಕೆಗಳನ್ನು ಟ್ರಂಪ್ ಇನ್ನೂ ಬಹಿರಂಗವಾಗಿ ಬೆಂಬಲಿಸಿಲ್ಲ.
ನಿಜವಾದ ಅಪಾಯಕಾರಿ ಪರಿಸ್ಥಿತಿ ಇನ್ನೂ ಮುಂದಿದೆ. ಉಕ್ರೇನ್‌ಗಿಂತಲೂ ದೊಡ್ಡ ಸಮಸ್ಯೆಗಳಿದ್ದು, ಅವುಗಳ ಕುರಿತು ಅಮೆರಿಕಾ ಅಧ್ಯಕ್ಷರು ಚಿಂತಿಸಬೇಕು ಎಂದು ಪುಟಿನ್ ಪ್ರತಿಪಾದಿಸಿದ್ದಾರೆ. ಉಕ್ರೇನ್ ವಿಚಾರ ಮಧ್ಯ ಬರದಿದ್ದರೆ, ಹಲವು ಕ್ಷೇತ್ರಗಳಲ್ಲಿ ಅಮೆರಿಕಾ ಮತ್ತು ರಷ್ಯಾ ಜೊತೆಯಾಗಿ ಕಾರ್ಯಾಚರಿಸಬಹುದು.
ಮಧ್ಯ ಪೂರ್ವ ಮತ್ತು ಇತರ ಪ್ರದೇಶಗಳಲ್ಲಿ ತಲೆದೋರಿರುವ ಬಿಕ್ಕಟ್ಟುಗಳನ್ನು ಪರಿಹರಿಸಲು ರಷ್ಯಾ ನೆರವು ನೀಡಬಹುದು. ಮುಖ್ಯವಾಗಿ, ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ತನ್ನ ಮಿತ್ರ ರಾಷ್ಟ್ರವಾದ ಇರಾನಿನ ಮನ ಒಲಿಸಬಹುದು. ಆರ್ಕ್ಟಿಕ್ ಪ್ರದೇಶದಲ್ಲಿ ಅನಿಲ ಅನ್ವೇಷಣೆಯಂತಹ ರಷ್ಯನ್ ಉದ್ಯಮಗಳಲ್ಲಿ ಅಮೆರಿಕನ್ ಕಂಪನಿಗಳೂ ಹೂಡಿಕೆ ನಡೆಸಬಹುದು.
ಒಂದೊಮ್ಮೆ ನಿರ್ಬಂಧಗಳನ್ನು ಹಿಂಪಡೆದರೆ, ರಷ್ಯಾ ಮರಳಿ ಜಿ೭ ಅನ್ನು ಸೇರಬಹುದು. ರಷ್ಯಾ ಏನಾದರೂ ಚೀನಾದಿಂದ ಅಂತರ ಕಾಯ್ದುಕೊಂಡರೆ, ಟ್ರಂಪ್ ಆತಂಕ ಹೊಂದಿರುವ ಮೂರನೇ ಮಹಾಯುದ್ಧದ ಅಪಾಯವನ್ನು ಕಡಿಮೆಗೊಳಿಸಬಹುದು.
ಈಡೇರಿಸಲು ಸಾಧ್ಯವಾಗದಂತಹ ಭರವಸೆಗಳಿಗೆ ಪ್ರತಿಯಾಗಿ, ಉಕ್ರೇನಿನಲ್ಲಿ ಪುಟಿನ್‌ಗೆ ಬೇಕಾದುದನ್ನು ಒದಗಿಸುವಂತೆ ಮಾಡಲು ಟ್ರಂಪ್ ಮನ ಒಲಿಸುವ ಕನಸಿನ ಭಾಗದಂತೆ ಇದು ಕಂಡುಬರುತ್ತದೆ.ಮೊದಲನೆಯದಾಗಿ, ಇಂತಹ ಬೆಳವಣಿಗೆ ನಡೆದರೆ, ಯುರೋಪ್ ಟ್ರಂಪ್‌ಗೆ ಬೆಂಬಲ ನೀಡದಿರುವುದರಿಂದ, ಅಮೆರಿಕಾ ಮತ್ತು ಯುರೋಪ್ ನಡುವಿನ ಅಂತರ ಸಾಕಷ್ಟು ಹೆಚ್ಚಾಗಬಹುದು. ಉಕ್ರೇನ್ ಇದರಿಂದ ಅಸ್ಥಿರಗೊಂಡು, ಸಂಪೂರ್ಣ ಯುರೋಪ್ ಅಪಾಯಕ್ಕೆ ಸಿಲುಕಬಹುದು. ಅಮೆರಿಕಾದ ಮೈತ್ರಿಕೂಟಗಳು, ಅಮೆರಿಕಾ ಪ್ರತಿಪಾದಿಸುತ್ತಾ ಬಂದಿರುವ ಮೌಲ್ಯಗಳು ದುರ್ಬಲಗೊಂಡು, ಅಮೆರಿಕಾದ ಶಕ್ತಿ ಕುಂಠಿತವಾದೀತು. ಟ್ರಂಪ್ ಈ ವಿಚಾರಗಳ ಕುರಿತು ತಲೆ ಕೆಡಿಸಿಕೊಳ್ಳದಿರಬಹುದು. ಆದರೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಾಗ ಬೈಡನ್ ದುರ್ಬಲರಾಗಿ ಕಂಡಂತೆ, ತಾನೂ ದುರ್ಬಲನಂತೆ ಗೋಚರಿಸುವುದನ್ನು ಟ್ರಂಪ್ ಬಯಸುವುದಿಲ್ಲ.
ಗಾಜಾದಲ್ಲಿ ಇಸ್ರೇಲಿ ದಾಳಿ ಪುನರಾರಂಭಗೊಂಡು, ಅಮೆರಿಕಾ ನೇತೃತ್ವದ ಕದನ ವಿರಾಮ ಕುಸಿಯುತ್ತಿದ್ದ ಸಮಯದಲ್ಲಿ ಪುಟಿನ್ ಮತ್ತು ಟ್ರಂಪ್ ನಡುವೆ ದೂರವಾಣಿ ಮಾತುಕತೆ ನಡೆಯುತ್ತಿತ್ತು. ಟ್ರಂಪ್ ರಾಜತಾಂತ್ರಿಕ ವಿಧಾನದಿಂದ ಕೆಲವೊಮ್ಮೆ ನಿಜಕ್ಕೂ ಕೊನೆಯಿಲ್ಲದ ಬಿಕ್ಕಟ್ಟುಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಆದರೆ, ಸುದೀರ್ಘ ಶಾಂತಿ ಸ್ಥಾಪನೆಗೆ ಬೇಕಾದ ವಿಸ್ತೃತ ಮತ್ತು ಕಷ್ಟಕರ ಕೆಲಸ ನಡೆಸಲು ಬೇಕಾದ ತಾಳ್ಮೆ ಟ್ರಂಪ್‌ಗೆ ಇರುವಂತೆ ಕಾಣುತ್ತಿಲ್ಲ.
ರಷ್ಯಾ ಜೊತೆಗಿನ ಮಾತುಕತೆಯ ಬಳಿಕ ಶ್ವೇತ ಭವನ ಕರೆಯ ವಿವರಗಳನ್ನು ನೀಡಿದ್ದು, ಶಾಂತಿ ಸ್ಥಾಪನೆಯಾದ ಬಳಿಕ ಬಹುದೊಡ್ಡ ಆರ್ಥಿಕ ಒಪ್ಪಂದಗಳು ಮತ್ತು ಜಾಗತಿಕ ಸ್ಥಿರತೆಗಳು ಉಂಟಾಗಲಿವೆ ಎಂದಿದೆ. ಪುಟಿನ್‌ಗೆ ಏನು ಬೇಕು ಎನ್ನುವುದು ಈಗಾಗಲೇ ಸ್ಪಷ್ಟವಾಗಿದ್ದು, ಅವುಗಳನ್ನು ಪುಟಿನ್‌ಗೆ ಒದಗಿಸಲು ಟ್ರಂಪ್ ಇಷ್ಟು ಉತ್ಸುಕರಾಗಿರುವುದು ಮಾತ್ರ ಆಶ್ಚರ್ಯಕರ ಬೆಳವಣಿಗೆಯಾಗಿದೆ.