ಹಿಂದುಳಿದ ವರ್ಗಗಳ ಹಣಕ್ಕೂ ಕತ್ತರಿ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಡೋಂಗಿ ಸಮಾಜವಾದವನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ಮೀಸಲಿಡಬೇಕಾಗಿದ್ದ ಹಣ ನುಂಗಿದ್ದಾಯ್ತು, ಈಗ ಹಿಂದುಳಿದ ಸಮುದಾಯಗಳಿಗೆ ಸೇರಿದ ಹಣದ ಮೇಲೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಹಿಂದುಳಿದ ವರ್ಗಗಳ ಸಮುದಾಯ ಭವನಗಳು, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಮಂಜೂರಾಗಿದ್ದ 312 ಕೋಟಿ ರೂಪಾಯಿ ಹಣವನ್ನ ರದ್ದು ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮದು ಡೋಂಗಿ ಸಮಾಜವಾದವ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಅಹಿಂದ ಹೆಸರಿನಲ್ಲಿ ಮತ ಪಡೆದು, ಅಧಿಕಾರ ಅನುಭವಿಸಿ ಈಗ ದಲಿತರು, ಹಿಂದುಳಿದ ವರ್ಗಗಳಿಗೆ ಈ ಪರಿ ಮೋಸ ಮಾಡುತ್ತಿದ್ದೀರಲ್ಲಾ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ನುಡಿದಂತೆ ನಡೆದ ಸರ್ಕಾರ ಎಂದು ಹಸಿ ಸುಳ್ಳು ಹೇಳಿಕೊಂಡು ದಲಿತರು, ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಿರುವ ತಮಗೆ ಅವರ ಶಾಪ ತಟ್ಟದೇ ಇರದು ಎಂದಿದ್ದಾರೆ.