ಆಶಾ ಕಾರ್ಯಕರ್ತರನ್ನು ಸರ್ಕಾರ ಇನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಿಲ್ಲ. ಅದರಿಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಗೌರವಧನದ ಮೇಲೆ ಬದುಕುವುದು ಅನಿವಾರ್ಯ. ಪ್ರತಿ ಬಾರಿ ಬೆಂಗಳೂರಿಗೆ ಬಂದು ಪ್ರತಿಭಟನೆ ನಡೆಸಿದಾಗಲೇ ಅವರ ಗೌರವಧನ ಅಧಿಕಗೊಳ್ಳುತ್ತ ಬಂದಿದೆ. ಈ ವಿಷಯದಲ್ಲಿ ಮೀನಮೇಷ ಎಣಿಸುವುದು ಸರಿಯಲ್ಲ. ರಾಜ್ಯದಲ್ಲಿ ಒಟ್ಟು ೪೨ ಸಾವಿರ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಇವರು ಗ್ರಾಮೀಣ ಪ್ರದೇಶದಲ್ಲಿ ಇಲ್ಲ ಎಂದರೆ ಆರೋಗ್ಯ ಇಲಾಖೆಯ ಯಾವ ಕಾರ್ಯಕ್ರಮವೂ ನಡೆಯುವುದಿಲ್ಲ. ಹೀಗಿದ್ದರೂ ಇವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಸಿಕ ಗೌರವಧನ ನೀಡುತ್ತದೆಯೇ ಹೊರತು ಸಂಬಳ ಕೊಡುವುದಿಲ್ಲ. ರಾಜ್ಯದಲ್ಲಿ ಪ್ರತಿ ೨೫೦೦ ಜನರಿಗೆ ಒಬ್ಬರು ಆಶಾ ಕಾರ್ಯಕರ್ತರಿರಬೇಕು ಎಂದು ಕರ್ನಾಟಕ ಸರ್ಕಾರ ನಿಯಮ ಮಾಡಿದೆ. ಗ್ರಾಮ ಮಟ್ಟದಲ್ಲಿ ಒಟ್ಟು ೩೭ ವಿವಿಧ ಕಾರ್ಯಕ್ರಮಗಳನ್ನು ಇವರು ನೋಡಿಕೊಳ್ಳುತ್ತಾರೆ. ಇವರು ತಮ್ಮ ಗೌರವಧನವನ್ನು ೧೫ ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಕೋರಿದ್ದಾರೆ. ಅಲ್ಲದೆ ನಗರದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಮಾಸಿಕ ೨ ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ನಿವೃತ್ತರಾದವರಿಗೆ ೫ ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರಿದ್ದಾರೆ. ಇದರ ಬಗ್ಗೆ ಸರ್ಕಾರ ಇನ್ನೂ ಆಸಕ್ತಿ ತೋರಿಸಿಲ್ಲ. ಮಕ್ಕಳ ಸಮೇತ ಬೆಂಗಳೂರಿಗೆ ಬರುವ ಕಾರ್ಯಕರ್ತರು ಚಳಿ, ಗಾಳಿಗೆ ಪರಿತಪಿಸುವುದು ಪ್ರತಿವರ್ಷದ ನೋಟವಾಗಿದೆ. ಇದನ್ನು ಸರ್ಕಾರ ತಪ್ಪಿಸಬಹುದು. ಎಲ್ಲ ಕಾರ್ಯಕರ್ತರು ಸ್ಮಾರ್ಟ್ ಮೊಬೈಲ್‌ನ್ನು ತಮ್ಮ ಹಣದಿಂದ ಖರೀದಿ ಮಾಡಬೇಕು. ಸರ್ಕಾರದ ಎಲ್ಲ ಆದೇಶಗಳೂ ಮೊಬೈಲ್ ಮೂಲಕ ಬರುತ್ತದೆ. ಹಳ್ಳಿಗಳಲ್ಲಿ ಪ್ರತಿ ಮನೆಗೂ ಹೋಗಿ ಆರೋಗ್ಯ ವಿಚಾರಿಸಬೇಕು. ಮಕ್ಕಳ ಪೌಷ್ಟಿಕತೆಯಿಂದ ಹಿಡಿದು ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಇವರ ಕೆಲಸ. ಹೀಗಿದ್ದರೂ ಇವರ ಗೌರವಧನದಲ್ಲಿ ಪ್ರತಿವರ್ಷ ಬದಲಾವಣೆ ಕಂಡು ಬರುತ್ತಿಲ್ಲ. ಕೇಂದ್ರ ಸರ್ಕಾರವೂ ಇವರ ಬಗ್ಗೆ ಹೆಚ್ಚು ಚಿಂತಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರ ಆರೋಗ್ಯದ ಬಗ್ಗೆ ಚಿಂತನೆ ನಡೆಸುವವರು ಇವರು ಮಾತ್ರ. ಆಸ್ಪತ್ರೆ ಹೋಗುವುದನ್ನು ತಪ್ಪಿಸಬೇಕು ಎಂದರೆ ಆಶಾ ಕಾರ್ಯಕರ್ತರು ಹೆಚ್ಚು ಕೆಲಸ ಮಾಡುವಂತೆ ಮಾಡಬೇಕು. ಗ್ರಾಮ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆ ಮಾಡುವುದು ಕಷ್ಟ. ಅದೇರೀತಿ ಮಕ್ಕಳು ಶಾಲೆಗಳಲ್ಲಿ ನೋಂದಣಿ ಕಡಿಮೆಯಾಗಿದ್ದಲ್ಲಿ ಇವರ ಮೂಲಕ ಜಾಗೃತಿ ಮೂಡಿಸಬಹುದು. ಸರ್ಕಾರದ ಎಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಜನರಿಗೆ ಮುಟ್ಟಿಸುವವರು ಇವರೇ ಎಂಬುದಂತೂ ನಿಜ. ಇವರಿಗೆ ಉತ್ತಮ ಗೌರವಧನ ನೀಡಿದರೆ ಸರ್ಕಾರದ ಉದ್ದೇಶ ಸಫಲವಾಗುತ್ತದೆ. ಆದರೂ ಮೊದಲಿನಿಂದಲೂ ಈ ಕಾರ್ಯಕರ್ತರ ಬೇಡಿಕೆಗಳ ಬಗ್ಗೆ ಎಲ್ಲ ಸರ್ಕಾರಗಳು ಕಾಳಜಿ ತೋರದೇ ಇರುವುದು ಸ್ಪಷ್ಟ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ಇವರ ಸೇವೆ ಅಗತ್ಯ. ಸರ್ಕಾರ ಕೈಗೊಳ್ಳುವ ಸಮೀಕ್ಷೆಗಳಿಗೆ ಅಂಕಿಅಂಶಗಳನ್ನು ಸಂಗ್ರಹಿಸುವವರು ಇವರೇ. ಹೀಗಾಗಿ ಇವರ ಸೇವೆಯ ಬಗ್ಗೆ ಆಮೂಲಾಗ್ರ ಪರಿಶೀಲನೆ ನಡೆಸುವುದು ಅಗತ್ಯ. ಅದರಲ್ಲೂ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗ ಇವರ ಪಾತ್ರ ಪ್ರಮುಖ ಎನಿಸುತ್ತದೆ. ಅದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಇವರ ಸೇವೆ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸುವುದು ಸೂಕ್ತ.
ಪಶ್ಚಿಮ ಬಂಗಾಳ ರಾಜ್ಯ ಇವರಿಗೆ ಹೆಚ್ಚಿನ ಸವಲತ್ತು ಕಲ್ಪಿಸಿಕೊಟ್ಟಿದೆ. ಅದೇರೀತಿ ಇಲ್ಲೂ ಸವಲತ್ತು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿರುವುದು ಸಕಾಲಿಕವಾಗಿದೆ. ನಗರ ಪ್ರದೇಶದಲ್ಲಿ ಹೆಚ್ಚು ಸವಲತ್ತು ಇದ್ದರೂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇವರ ನೆರವು ಅಗತ್ಯ. ಬಡವರಲ್ಲಿ ಮಹಿಳೆಯರಲ್ಲಿ ಬಹುತೇಕ ರಕ್ತಹೀನತೆಯಿಂದ ಬಳಲುತ್ತಾರೆ. ಅವರಿಗೆ ಕಬ್ಬಿಣದ ಅಂಶದ ಮಾತ್ರೆಗಳನ್ನು ನೀಡುವುದು ಅಗತ್ಯ. ಈ ಕೆಲಸವನ್ನು ಆಶಾ ಕಾರ್ಯಕರ್ತರು ಪ್ರತಿತಿಂಗಳು ಕೈಗೊಳ್ಳುತ್ತಾರೆ. ಅದರೀತಿ ಮಕ್ಕಳಲ್ಲಿ ಅಪೌಷ್ಟಿಕತೆಗೆ ವಿಟಮಿನ್ ಮಾತ್ರೆಗಳನ್ನು ನೀಡುವುದು ಮುಖ್ಯ. ಇದರಲ್ಲೂ ಇವರ ಸೇವೆ ಪ್ರಮುಖ. ನಾವು ಗ್ರಾಮೀಣ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆಗಳಲ್ಲೇ ನಡೆಯುವಂತೆ ಮಾಡಲು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಅವುಗಳು ಸಫಲವಾಗಬೇಕು ಎಂದರೆ ಆಶಾ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಲೇಬೇಕು. ಇವರಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿ, ಮಾಹಿತಿ ನೀಡುವುದು ಅಗತ್ಯ. ಅದರಿಂದ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಾಧ್ಯವಾಗಲಿದೆ. ಆಶಾ ಕಾರ್ಯಕರ್ತರು ಹೆಚ್ಚು ಮಾಹಿತಿ ಪಡೆದುಕೊಂಡರೆ ಅದರಿಂದ ಇಡೀ ಸಮಾಜಕ್ಕೆ ಅನುಕೂಲವಾಗುತ್ತದೆ. ಅದರಲ್ಲೂ ಗ್ರಾಮಸಭೆಯಲ್ಲಿ ಇವರ ಸೇವೆಯನ್ನು ಹೆಚ್ಚು ಬಳಸಿಕೊಳ್ಳುವುದು ಸೂಕ್ತ. ಈಗ ತಾಲೂಕು ಮಟ್ಟದಲ್ಲಿ ಸರ್ಕಾರಿ ಕಂಪ್ಯೂಟರ್ ಜಾಲ ತಲುಪಿರುವುದರಿಂದ ಗ್ರಾಮ ಮಟ್ಟದಲ್ಲಿ ಅದರ ಸದುಪಯೋಗ ಆಗಬೇಕು. ಕಂದಾಯ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಕ್ರಿಯವಾಗಬೇಕು. ಸಮಾಜಕಲ್ಯಾಣ ಮತ್ತು ಆರೋಗ್ಯ ಇಲಾಖೆಗೆ ಪ್ರಮುಖ ಕೊಂಡಿ ಆಶಾ ಕಾರ್ಯಕರ್ತರು ಎಂಬುದನ್ನು ಮರೆಯುವಂತಿಲ್ಲ.