ಆಗ ನಕಲಿ ಛಾಪಾ ಕಾಗದ ಈಗ ನಕಲಿ ಅಂಕಪಟ್ಟಿಗಳು

೧೯೯೨ ಮುದ್ರಿತ ಛಾಪಾ ಕಾಗದಪತ್ರಗಳನ್ನು ಬಳಸುತ್ತಿದ್ದ ಕಾಲ. ಮಹಾರಾಷ್ಟçದ ತೆಲಗಿ ಎಂಬ ವ್ಯಕ್ತಿ ನಕಲಿ ಛಾಪಾ ಕಾಗದವನ್ನು ಮುದ್ರಿಸಿ ಮಾರಾಟ ಮಾಡಿ ಸರ್ಕಾರಕ್ಕೆ ೩೦ ಸಾವಿರ ಕೋಟಿ ರೂ. ಪಂಗನಾಮ ಹಾಕಿದ್ದ. ಆತ ಜೈಲಿನಲ್ಲೇ ಪ್ರಾಣ ಬಿಟ್ಟ. ಈಗ ನಕಲಿ ಅಂಕಪಟ್ಟಿಗಳು ತಲೆಎತ್ತಿವೆ. ಇದು ರಾಜ್ಯದ ಎಲ್ಲ ವಿವಿಗಳಲ್ಲಿ ಹರಡಿಕೊಂಡಿದೆ. ಕಲಬುರ್ಗಿ ಮತ್ತು ಬಳ್ಳಾರಿಯಲ್ಲಿ ಈ ಅಕ್ರಮ ಜಾಲದ ಸುಳಿವು ಸಿಕ್ಕಿವೆ. ಕಲಬುರ್ಗಿಯ ಪೊಲೀಸರು ಅಕ್ರಮದ ವಾಸನೆ ಹಿಡಿದು ದೆಹಲಿಯವರೆಗೂ ಹೋಗಿ ಆತನ ಬಳಿ ೩೮ ವಿವಿಗಳ ೭೫ ಸಾವಿರ ನಮೂನೆಯ ನಕಲಿ ಅಂಕಪಟ್ಟಿಗಳ ಮಾದರಿಯನ್ನು ವಶಪಡಿಸಿಕೊಂಡು ಬಂದಿದ್ದಾರೆ. ಪ್ರತಿ ಅಂಕಪಟ್ಟಿಗೆ ೧೦ ರಿಂದ ೫೦ ಸಾವಿರ ರೂ. ವರೆಗೆ ಅವ್ಯವಹಾರ ನಡೆದಿದೆ. ಒಂದು ತನಿಖೆಯ ಮೂಲಕ ೪೦೦ ಜನರ ನಕಲಿ ಅಂಕಪಟ್ಟಿ ಲಭಿಸಿದೆ. ಬೆಂಗಳೂರಿನಲ್ಲೇ ೧೮೦ ಎಜೆಂಟರು ಈ ನಕಲಿ ದಂಧೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇದು ನಕಲಿ ಛಾಪಾ ಕಾಗದ ಹಗರಣದಷ್ಟೇ ದೊಡ್ಡದಿದೆ. ಇನ್ನು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆದಿಲ್ಲ. ಇದು ಮಧ್ಯವರ್ತಿಗಳ ಮೂಲಕ ನಡೆದ ಅಕ್ರಮವಾದರೆ ವಿವಿ ನೌಕರರೇ ನೇರವಾಗಿ ಇದರಲ್ಲಿ ತೊಡಗಿರುವುದು ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕಂಡು ಬಂದಿದೆ. ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳಿಗೆ ಸಹಿ ಮಾಡುವ ಅಧಿಕೃತ ಅಧಿಕಾರಿಗಳ ಮಾದರಿ ಸಹಿ ಪಡೆದು, ನಕಲಿ ಮೊಹರುಗಳು ಮತ್ತು ವಿವಿ ಲೋಗೋಗಳನ್ನು ಬಳಸಿ ನಕಲಿ ಪತ್ರಗಳನ್ನು ತಯಾರಿಸಿ ಕೊಡುವ ಕೆಲಸ ೨೦೨೨ರಿಂದಲೂ ನಡೆದಿದೆ ಎಂದು ತಿಳಿದುಬಂದಿದೆ. ಈ ವಿವಿ ಇದುವರೆಗೆ ೨೫ ಸಾವಿರ ಅಂಕಪಟ್ಟಿಗಳನ್ನು ವಿತರಣೆ ಮಾಡಿದ್ದು ಇದರಲ್ಲಿ ಈಗ ೩೫೦೦ ನಕಲಿ ಅಂಕಪಟ್ಟಿ ಪತ್ತೆಯಾಗಿದೆ. ಇನ್ನೂ ಎಷ್ಟು ನಕಲಿ ಇವೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಇವುಗಳನ್ನು ಬಳಸಿ ಬಹುತೇಕ ಜನ ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇವುಗಳನ್ನು ಪತ್ತೆಹಚ್ಚುವುದು ಕಷ್ಟದ ಕೆಲಸ. ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಮೀಸಲಾತಿ ನೀಡಿದ ಮೇಲೆ ಹಾಗೂ ರಾಜ್ಯ ಸರ್ಕಾರ ವಿವಿಗಳ ಸಂಖ್ಯೆ ಹೆಚ್ಚಿಸಿದ ಮೇಲೆ ಬಹುತೇಕ ವಿವಿಗಳಲ್ಲಿ ಆಡಳಿತದ ಮೇಲೆ ಹಿಡಿತ ಇಲ್ಲದಂತಾಗಿದೆ. ಅದರಲ್ಲೂ ಪರೀಕ್ಷಾ ವಿಭಾಗದಿಂದಲೇ ಹೆಚ್ಚು ಅಕ್ರಮ ನಡೆಯುತ್ತಿರುವುದು ಆತಂಕದ ಸಂಗತಿ. ಮುದ್ರಣ ಕ್ಷೇತ್ರದಲ್ಲಾದ ಕ್ರಾಂತಿಕಾರಿ ಬದಲಾವಣೆಗಳು, ಇಂಟರ್‌ನೆಟ್, ಕಂಪ್ಯೂಟರೀಕರಣ ಹಲವು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ಎಲ್ಲ ವಿವಿಗಳ ಹಾಲೋಗ್ರಾಂ ಸೇರಿದಂತೆ ಎಲ್ಲ ಮೊಹರುಗಳು, ಅಂಕಪಟ್ಟಿಗಳ ನಕಲು ದೆಹಲಿಯಲ್ಲಿ ಲಭ್ಯ ಎಂದ ಮೇಲೆ ಸಿಬಿಐ ಅಥವಾ ಎನ್‌ಐಎ ಮೂಲಕ ಈ ದಂಧೆಯನ್ನು ಸದೆಬಡಿಯುವ ಅಗತ್ಯವಿದೆ. ಹಿಂದೆ ನಕಲಿ ನೋಟು ಮುದ್ರಣ ಒಂದು ದಂಧೆಯಾಗಿತ್ತು. ಅವುಗಳನ್ನು ಈಗ ಸದೆಬಡಿಯಲು ಸಾಧ್ಯವಾಗಿರುವಾಗ ನಕಲಿ ಅಂಕಪಟ್ಟಿಯ ದಂಧೆ ಇಲ್ಲದಂತೆ ಮಾಡುವುದು ಕಷ್ಟದ ಕೆಲಸವೇನಲ್ಲ. ವಿವಿಗಳ ಸಂಖ್ಯೆ ಹೆಚ್ಚಿಸಿದ್ದು ಗ್ರಾಮೀಣ ಯುವಕರಿಗೆ ಸುಲಭವಾಗಿ ಶಿಕ್ಷಣ ಸವಲತ್ತು ಸಿಗಲಿ ಎಂದು. ಆದರೆ ಅದು ಈ ರೀತಿ ಅಕ್ರಮ ದಂಧೆಗೆ ದಾರಿ ಮಾಡಿಕೊಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಮಟ್ಟ ಕುಸಿಯಲು ಇದೂ ಒಂದು ಕಾರಣ. ಸುಲಭವಾಗಿ ಡಿಗ್ರಿ ಸರ್ಟಿಫಿಕೇಟ್ ಸಿಗುತ್ತದೆ ಎಂದರೆ ಕಷ್ಟಪಟ್ಟು ಓದಿ ಡಿಗ್ರಿ ಪಡೆಯಲು ಯಾರೂ ಬಯಸುವುದಿಲ್ಲ. ಅದೇರೀತಿ ವಿವಿಧ ನೇಮಕಾತಿಗಳಲ್ಲಿ ಪ್ರಶ್ನಪತ್ರಿಕೆ ಬಯಲು ಮಾಡುವುದು, ಬರೆದ ಉತ್ತರಪತ್ರಿಕೆಗಳನ್ನು ಬದಲಿಸಿ ಹೆಚ್ಚು ಅಂಕ ಬರುವಂತೆ ಮಾಡುವುದು, ಫೇಲಾದವರಿಗೆ ನಕಲಿ ಅಂಕಪಟ್ಟಿ ಕೊಡಿಸುವುದು ಅಲ್ಲಿಯ ಶೈಕ್ಷಣಿಕ ಮಟ್ಟವನ್ನು ಕೆಳಹಂತಕ್ಕೆ ತಳ್ಳುತ್ತದೆಯೇ ಹೊರತು ಅಲ್ಲಿಯ ಪ್ರತಿಭಾವಂತ ಯುವಕ- ಯುವತಿಯರ ಭವಿಷ್ಯವನ್ನೇ ಹಾಳು ಮಾಡುತ್ತದೆ. ಅಲ್ಲಿಂದ ಬಂದ ಯುವಕರನ್ನು ಇತರರು ಸಂದೇಹದಿಂದ ನೋಡುವಂತಾಗಿದೆ. ಯಾರೋ ಕೆಲವರು ಮಾಡುವ ಅಕ್ರಮಗಳು ಇಡೀ ಪ್ರದೇಶದ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಸಿ ಬಳಿಯುವುದರಲ್ಲಿ ಸಂದೇಹವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮೊಳಕೆಯಲ್ಲೇ ಚಿವುಟಿಹಾಕಬೇಕು.ಕೇಂದ್ರ ಸರ್ಕಾರ ಸ್ಥಾಪಿಸಿರುವ ಡಿಜಿಟಲ್ ಲಾಕರ್‌ಗಳ ನೆರವನ್ನು ಪಡೆದು ಯಾರು ಬೇಕಾದರೂ ತಮ್ಮ ವಿವಿ ಸರ್ಟಿಫಿಕೇಟ್‌ಗಳನ್ನು ಹಾಗೂ ಅಂಕಪಟ್ಟಿಯನ್ನು ಸುರಕ್ಷಿತವಾಗಿಡಬಹುದು. ಅದರಲ್ಲಿರುವ ದಾಖಲೆಗಳನ್ನು ನಕಲು ಮಾಡಲು ಬರುವುದಿಲ್ಲ. ವಿವಿಗಳು ಇಂಥ ಸವಲತ್ತುಗಳನ್ನು ಸೃಷ್ಟಿಸಿ ವಿವಿಗಳ ಘನತೆ, ಗೌರವ ಉಳಿಸುವ ಕೆಲಸ ಕೈಗೊಳ್ಳಬೇಕು. ನಕಲಿ ಹಾವಳಿ ತಪ್ಪಿಸುವುದಕ್ಕೆ ಪರಿಹಾರ ಹುಡುಕುವುದು ಎಲ್ಲ ವಿವಿಗಳ ಕರ್ತವ್ಯ. ಅದರಲ್ಲೂ ಯುಜಿಸಿ ಈ ಕೆಲಸದಲ್ಲಿ ಮುಂದಾಗಬೇಕು. ಪ್ರತಿಷ್ಠಿತ ಸಂಸ್ಥೆಗಳೂ ಈ ವಿಷಯದಲ್ಲಿ ಹೊಸ ಪದ್ಧತಿಯನ್ನು ರೂಪಿಸಿ ಭಾರತೀಯ ವಿವಿಗಳ ಪದವಿಗಳಿಗೆ ಬೆಲೆ ಇದೆ ಎಂಬುದನ್ನು ಪುನರ್ ಸ್ಥಾಪಿಸುವುದು ಅಗತ್ಯ. ಜ್ಞಾನ ಎಂಬುದು ಡಿಗ್ರಿ ಪಡೆಯುವುದರಲ್ಲಿ ಇಲ್ಲ ಎಂದರೂ ಡಿಗ್ರಿ ಸರ್ಟಿಫಿಕೇಟ್‌ಗಳು ಒಂದು ಹಂತದಲ್ಲಿ ಮಾನದಂಡವಾಗುತ್ತದೆ ಎಂಬುದನ್ನು ಮರೆಯುವ ಹಾಗಿಲ್ಲ.