ಆಕಾಶದಿಂದ ಇಳಿದು ಬಾ ದೊರೆಯೇ ಇಳಿದು ಬಾ

ವಿಶ್ವ ಮತ್ತು ವಿಶಾಲು ಮನೆಯ ಮುಂದೆ ನಿಂತು ಆಕಾಶದತ್ತ ಮುಖ ಮಾಡಿದ್ದರು, ಕುತ್ತಿಗೆಯ ವ್ಯಾಯಾಮ ಇರಬಹುದೇ ಎಂದು ನನಗೆ ಅನ್ನಿಸಿತು.
“ಧೂಮಕೇತುನ ಹುಡುಕ್ತಾ ಇದ್ದೀರಾ?”
“ನಾವು ಗೆಲ್ಲಿಸಿದ ನಾಯಕನ್ನ ಹುಡುಕ್ತಾ ಇದ್ದೀವಿ” ಎಂದಳು ವಿಶಾಲು.
“ನಮ್ಮ ಫ್ರೆಂಡು ರಾಜಕಾರಣಿ ಆಗಿದ್ದಾನೆ, ಆತ ವಾರಕ್ಕೆರಡು ಸಲ ದೆಹಲಿಗೆ ವಿಮಾನದಲ್ಲಿ ಹೋಗ್ತಾನೆ, ಅಗೋ ಕಾಣಿಸ್ತಾ?” ಎಂದ ವಿಶ್ವ. ಆಕಾಶದಲ್ಲಿ ಏರೋಪ್ಲೇನ್ ಕಾಣಿಸಿತು.
“ರೆಕ್ಕೆ ಚಾಚ್ಕೊಂಡು ಹೋಗ್ತಾ ಇದ್ಯಲ್ಲ ಅದೇ ಏರೋಪ್ಲೇನ್ನಾ?” ಎಂದು ರೇಗಿಸಿದೆ, ವಿಮಾನ ಮರೆಯಾಯಿತು, ಕತ್ತು ನೋವು ಹೆಚ್ಚಾಗಿ ಮನೆ ಒಳಗೆ ಬಂದರು.
“ನಾವೆಲ್ಲ ಓಟು ಕೊಟ್ಟು ನಮ್ಮ ಗೆಳೆಯ ಮೋನಪ್ಪನ್ನ ಗೆಲ್ಲಿಸಿದ್ವಿ, ಆತ ಆಗಾಗ ದೆಹಲಿಗೆ ಹೋಗ್ತಾ ರ‍್ತಾನೆ. ಅಲ್ಲಿಂದ ಭಾಗ್ಯ ರ‍್ತೀನಿ ಅಂತ ಹೇಳ್ತಿದ್ದಾನೆ” ಎಂದ ವಿಶ್ವ.
“ಎಂಥ ಭಾಗ್ಯ?”
“ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ, ನೇತಾರನ ಕುರಿತು ಭಜನೆ ಸುಖವಯ್ಯ” ಎಂದು ವಿಶಾಲು ಹಾಡಲು ಶುರು ಮಾಡಿದಳು.
“ಹಾವನ್ನು ಹೊಡೆದು ಹದ್ದಿಗೆ ಹಾಕೋ ಸ್ಕೀಮುಗಳೇ ಈಗಿರೋದು” ಎಂದು ನಾನು ನಕ್ಕೆ.
“ನಮ್ಮ ಹಳ್ಳಿಯ ಹಳೇ ಸರ್ಕಾರಿ ಶಾಲೇಲಿ ಮೊನ್ನೆ ಏನ್ ಆಯ್ತು ಗೊತ್ತಾ? ಎಳೇ ಮಕ್ಕಳ ತಲೆ ಮೇಲೆ ತಾರಸಿಯ ಗಾರೆ ಬಿತ್ತು, ಏನ್ ಮಾಡ್ತಿದೆ ಸರ್ಕಾರ?”
“ತುರ್ತು ಸಮಯದಲ್ಲಿ ಶಾಲೆಯವರೇ ಏನಾದರೂ ಪರಿಹಾರ ಹುಡುಕಬೇಕು” ಎಂದೆ.
“ಹುಡುಕಿದ್ದಾರೆ ಗೆಳೆಯ, ಶಾಲೆಗೆ ಬರೋವರಿಗೆ ಚತ್ರಿ ಕಂಪಲ್ಸರಿ ಮಾಡಿದ್ದಾರೆ”
“ಇದೆಂಥ ಚತ್ರಿ ಪ್ರಸಂಗ?” ಎಂದೆ.
“ಮಕ್ಕಳು ಚತ್ರಿ ಹಿಡಿದಿದ್ರೆ ಮೇಲಿಂದ ಗಾರೆ ಕೇಕ್‌ಗಳು ಬಿದ್ರೂ ಜಾಸ್ತಿ ಪೆಟ್ಟು ಆಗೊಲ್ಲ” ಎಂದ ವಿಶ್ವ.
“ನೀವು ಆಯ್ಕೆ ಮಾಡಿದ ರಾಜಕಾರಣಿಗಳಿಗೆ ಈ ವಿಷಯ ತಿಳಿಸಿ, ದಬಾಯಿಸಿ” ಎಂದೆ.
“ಅವರು ಕೈಗೆ ಸಿಕ್ರೆ ಅಲ್ವಾ?” ಎಂದಳು ವಿಶಾಲು.
“ಅದಕ್ಕೆ ಏರೋಪ್ಲೇನ್ ನೋಡ್ತಾ ಇದ್ವಿ, ಅದರಲ್ಲಿ ಅವರು ದೆಹಲಿಗೆ ಪ್ರಯಾಣ ಮಾಡ್ತಿದ್ರು” ಎಂದು ನಿಟ್ಟುಸಿರು ಬಿಟ್ಟ ವಿಶ್ವ.
“ನಿಮ್ಮ ಹಳ್ಳಿಯ ಸರ್ಕಾರಿ ಶಾಲೆ ಕಟ್ಟಿ ಎಷ್ಟು ವರ್ಷ ಆಯ್ತು?”
“ಶಾಲಾ ಬಿಲ್ಡಿಂಗ್ ಕಟ್ಟಿ ಹತ್ತು ವರ್ಷ ಆಗಿದೆ ಅಷ್ಟೇ, ಗೋಡೆಗಳ ಮೇಲೆ ಚಕ್ಕೆಗಳು ಏಳ್ತಾ ಇವೆ, ಸೂರಿನಲ್ಲಿರೋ ಗಾರೆ ಆಗಾಗ ತಲೆ ಮೇಲೆ ಬೀಳ್ತಾ ಇರುತ್ತೆೆ” ಎಂದ.
ನೀನು ಆಕಾಶ ನೋಡ್ತಾ ಇದ್ದ ವಿಷಯ ಹೇಳು?” ಎಂದು ಹಳೇ ಕತೆಗೆ ಎಳೆದೆ.
“ನಮ್ಮ ನಾಯಕ ಮೋನಪ್ಪ ಮತ್ತೆ ಮತ್ತೆ ದೆಹಲಿಗೆ ಹೋಗ್ತಾನೆ, ಅಲ್ಲಿ ಬಜೆಟ್ ಸ್ಯಾಂಕ್ಷನ್ ಮಾಡಿಸ್ಕೊಂಡು ರ‍್ತಾನಂತೆ, ಬಂದ ಮೇಲೆ ಶಾಲೆಗಳ್ನ ರಿಪೇರಿ ಮಾಡಿಸ್ತೀನಿ, ಶೌಚಾಲಯ ಕಟ್ಟಿಸ್ತೀನಿ ಅಲ್ಲಿವರೆಗೂ ತಡ್ಕೊಳ್ಳಿ ಅಂತ ಅಂತ ಮೊನ್ನೆ ಗಣ ರಾಜ್ಯೋತ್ಸವದ ಭಾಷಣದಲ್ಲಿ ಹೇಳಿದ್ದಾನೆ”
“ಹೋದ ವರ್ಷ ಗಣ ರಾಜ್ಯೋತ್ಸವದ ದಿನವೂ ಅವರು ಇದೇ ರೀತಿ ಭಾಷಣ ಮಾಡಿದ್ದು” ಎಂದಳು ವಿಶಾಲು.
“ಹೌದೌದು, ಪ್ರತೀ ವರ್ಷ ಅದನ್ನೇ ಭಾಷಣ ಮಾಡ್ತಾನೆ, ನಾವು ಪ್ರತಿ ಸಲ ಕುರಿಗಳಂತೆ ನಂಬ್ತೀವಿ” ಎಂದ.
“ಸರ್ಕಾರಿ ಶಾಲೆಯ ದುರಸ್ತಿಗೆ ಸರ್ಕಾರ ಹಣ ಯಾಕ್ ಕೊಡ್ತಾ ಇಲ್ಲ?” ಎಂದು ಕೇಳಿದೆ.
“ಬೇರೆ ಬೇರೆ ಭಾಗ್ಯಗಳು ಇವೆಯಲ್ಲ, ತಿಂಗಳಿಗೆ ೨ ಸಾವಿರ ರೂಪಾಯಿ ಹೆಣ್ಣು ಮಕ್ಕಳಿಗೆ ಕೊಡಬೇಕು, ಅಕ್ಕಿ ಕೊಡಬೇಕು, ಕೆಲ್ಸ ಇಲ್ದೇ ಇರೋ ಗ್ರ್ಯಾಜುಯೇಟ್‌ಗಳಿಗೆ ಹಣ ಕೊಡಬೇಕು, ಕರೆಂಟ್ ಬಿಟ್ಟಿ ಕೊಡಬೇಕು, ಬಸ್‌ಗಳಲ್ಲಿ ಲೇಡೀಸ್‌ನ ಫ್ರೀ ಬಿಡಬೇಕು, ಈ ಖರ್ಚುಗಳ ಮಧ್ಯೆ ಶಾಲೆಗಳ ದುರಸ್ತಿಗೆ ಹಣ ಇರೊಲ್ಲ” ಎಂದ.
ನನಗೆ ದುಃಖವಾಯ್ತು, ಅಲ್ಲ, ಇವತ್ತಿನ ಮಕ್ಕಳೇ ಮುಂದಿನ ಪ್ರಜೆಗಳು, ಎಳಸು ಮಕ್ಕಳ ತಲೆ ಮೇಲೆ ಗಡಸು ಗಾರೆ ಚಕ್ಕೆಗಳು ಬಿದ್ದು ಮೆದಳು ಉಡೀಸ್ ಆದ್ರೆ ಯಾರು ಜವಾಬ್ದಾರಿ ಎಂದು ಯೋಚನೆ ಮಾಡಿದೆ.
“ತಲೆ ಮುಖ್ಯ ಅಂತ ರಾಜಕಾರಣಿಗಳಿಗೆ ಅನ್ನಿಸ್ಲೇ ಇಲ್ಲ” ಎಂದಳು ವಿಶಾಲು.
“ತಲೆ ಇದ್ದೋನು ರಾಜಕಾರಣಿ ಹೆಂಗ್ ಆಗ್ತಾನೆ? ಚೆನ್ನಾಗಿ ಓದಿ ಐ.ಎ.ಎಸ್. ಆಫೀಸರ್ ಆಗ್ತಾನೆ” ಎಂದೆ.
“ನಿಜ ಗೆಳೆಯ, ಫಸ್ಟ್ ಕ್ಲಾಸುಗಳು, ರ‍್ಯಾಂಕ್‌ಗಳು ಪಡೆದವರು ಐ.ಎ.ಎಸ್.ಪಾಸ್ ಮಾಡಿ ಅಧಿಕಾರಿಗಳಾಗ್ತಾರೆ”
“ಕೈ ಕಟ್ಟಿಕೊಂಡು ಮಂತ್ರಿಗಳ ಮುಂದೆ ನಿಲ್ತಾರೆ, ಹೆಬ್ಬೆಟ್ ಹಾಕೋರು, ಕಾಗುಣಿತ ಬರೆಯೋದಕ್ಕೆ ಬರದೇ ಇರೋರು ನಮಗೆ ಮಿನಿಸ್ಟರ್‌ಗಳಾಗಿ ಐ.ಎ.ಎಸ್.ಗೆ ಮಾರ್ಗದರ್ಶನ ಕೊಡ್ತಾರೆ” ಎಂದೆ.
“ಹಳೆಯ ಕಾಲದಲ್ಲೂ ಇದಕ್ಕಿಂಥ ಕಮ್ಮಿ ಓದಿನ ಮಿನಿಸ್ಟರ್‌ಗಳಿದ್ರು, ರಾಬ್ರಿದೇವಿ, ಪೂಲನ್‌ದೇವಿಗಿಂತ ಬೇಕಾ? ವಿದ್ಯೆ ಇಲ್ಲದವ ಎಜುಕೇಷನ್ ಮಿನಿಸ್ಟರ್, ದೇಶದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲದವ ಫೈನಾನ್ಸ್ ಮಿನಿಸ್ಟರ್, ರಕ್ಷಣೆ ಬೇಕಾಗಿರುವ ರಕ್ಷಣಾ ಮಂತ್ರಿ, ಇಂಥಾದ್ದನ್ನೆಲ್ಲ ದಶಕಗಳ ಹಿಂದೆಯೇ ನಾನು ನೋಡಿದ್ದೇನೆ” ಎಂದೆ.
ವಿಶಾಲುಗೆ ಒಂದು ಹೊಸ ಐಡಿಯಾ ಬಂತು.
“ಜನಕ್ಕೆ ಕೊಡೋ ಉಚಿತ ಫ್ರೀಬೀಸ್ ಇದ್ಯಲ್ಲ, ಇದರ ಖರ್ಚು ತಿಂಗಳಿಗೆ ಎಷ್ಟಾಗುತ್ತೆ?”
“ಪ್ರತಿ ತಿಂಗಳು ನೂರಾರು ಕೋಟಿ ರೂಪಾಯಿ ಹೊರೆ ಆಗಬಹುದು”
“ಒಂದು ತಿಂಗಳು ಫ್ರೀಬೀಸ್ ಕೊಡೋದು ನಿಲ್ಲಿಸಲಿ, ಆ ಹಣದಲ್ಲಿ ಶಾಲೆ ರಿಪೇರಿ ಮಾಡಿಸಲಿ?” ಎಂದಳು ವಿಶಾಲು.
“ನಿಜಾ ವಿಶಾಲು ಒಂದು ತಿಂಗಳಿಗೆ, ನೂರು ಕೋಟಿ ಉಳಿಯುತ್ತೆ ಅಂತ ಇಟ್ಕೊಂಡ್ರೂ, ಅದರಲ್ಲಿ ೪೦೦ ಸರ್ಕಾರಿ ಶಾಲೆ ಒಟ್ಟಿಗೆ ದುರಸ್ಥಿ ಮಾಡಿಸಬಹುದು” ಎಂದೆ.
“ಶಾಲಾ ಮಕ್ಕಳಿಗೆ ಕಟ್ಟಡ ದುರಸ್ತಿ ಮಾಡಿಸಿಕೊಟ್ರೆ ರಾಜಕಾರಣಿಗಳಿಗೆ ಏನ್ ಪ್ರಯೋಜನ ಆಗುತ್ತೆ? ಮಕ್ಕಳಿಗೆ ಓಟ್ ಇಲ್ಲ! ಓಟ್ ಕೊಡೋರಿಗೆ ದುಡ್ಡು ಖರ್ಚು ಮಾಡಬೇಕು, ಈಗ ಫ್ರೀಬೀಸ್ ಲಾಭ ಪಡೀತಿರೋರು ಓಟಿನ ಹಕ್ಕು ಇರೋವರು ಮಾತ್ರ.” ಎಂದ.
“ಕೆಲವು ಹಳ್ಳಿಗಳಲ್ಲಿ ಊರಿನ ಜನ ಚಂದಾ ಎತ್ತಿ ಸರ್ಕಾರಿ ಶಾಲೆಗಳನ್ನು ರಿಪೇರಿ ಮಾಡಿಸ್ತಿದ್ದಾರೆ” ಎಂದೆ.
“ಸರ್ಕಾರ ಕೋಟ್ಯಾಂತರ ರೂಪಾಯಿ ತೆರಿಗೆ ವಸೂಲಿ ಮಾಡುತ್ತೆ. ವಸೂಲಿ ಮಾಡಿದ ದುಡ್ಡಲ್ಲಿ ಎಷ್ಟೋ ಭಾಗ ಅವರೇ ಸ್ವಂತಕ್ಕೇ ಖರ್ಚು ಮಾಡ್ತಾರೆ” ಎಂದ ವಿಶ್ವ.
“ಯಾವ ರೀತಿ ಖರ್ಚು ಮಾಡ್ತಾರೆ?” “ಸಣ್ಣ ಪುಟ್ಟ ವಿಷಯಕ್ಕೆಲ್ಲ ದೆಹಲಿಗೆ ದಂಡ ಯಾತ್ರೆ ಮಾಡ್ತರ‍್ತಾರೆ, ಆಗಾಗ ಫ್ಲೈಟಲ್ಲಿ ಹೋಗಿ ರ‍್ತಿದ್ರೆ ಲಕ್ಷ ಲಕ್ಷ ಖರ್ಚು ಆಗುತ್ತಲ್ಲ?” ಎಂದಳು ವಿಶಾಲು.
ಅವರ ಟಿಕೇಟ್ ಖರ್ಚು ಕೊಡೋರ ಪ್ರಜೆಗಳು” ಎಂದೆ.
“ಓಟ್ ಕೊಟ್ಟ ಮೇಲೆ ಅವರನ್ನ ಕಣ್ಣಲ್ಲಿ ನೋಡೋದು ಸಹ ಕಷ್ಟ” ಎಂದ ವಿಶ್ವ.
“ಏರೋಪ್ಲೇನ್‌ನಲ್ಲಿ ಅವರು ಹೋಗೋವಾಗ ಕೈ ಎತ್ತಿ ಟಾಟಾ ಮಾಡಿದ್ರೆ ಸಾಕು” ಎಂದೆ.