ಅಪಘಾತ ಎಸಗಿ ಆಟೋ ಚಾಲಕ ಪರಾರಿ: ಗಾಯಳು ಸಾವು

0
44

ಕುಂದಾಪುರ: ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಹೊರ ವಲಯದ ಬಸ್ರೂರು ಮೂರುಕೈ ಸಮೀಪದ ವಡೇರಹೋಬಳಿ‌ ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಅಪಘಾತದ ಬಳಿಕ ರಿಕ್ಷಾ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿ ಅಮಾನವೀಯತೆ ಮೆರೆದಿದ್ದು, ಕೆಲವು ಗಂಟೆಗಳ ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ.
ಇಲ್ಲಿನ ವಡೇರಹೋಬಳಿ ಬೆಟ್ಟಾಗರ ಮನೆ ನಿವಾಸಿ ಸೋಮಯ್ಯ(61) ಮೃತ ದುರ್ದೈವಿ. ಸೋಮಯ್ಯ ಅವರು ನಿತ್ಯ ಬೆಳಿಗ್ಗೆ ವಾಕಿಂಗ್ ಮಾಡುವ ಹವ್ಯಾಸ ಹೊಂದಿದ್ದರು. ಬುಧವಾರವೂ ವಾಕಿಂಗ್ ತೆರಳಿದ್ದ ವೇಳೆ ರಿಕ್ಷಾ ಅಪಘಾತ ನಡೆಸಿ ಪರಾರಿಯಾಗಿದ್ದು ಗಾಯಗೊಂಡು ಗದ್ದೆಗೆ ಬಿದ್ದ ಸೋಮಯ್ಯ ಮೃತಪಟ್ಟಿದ್ದಾರೆ. ಒಂದಷ್ಟು ಸಮಯದ ನಂತರ ಅದೇ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸೋಮಯ್ಯ ಸಂಬಂಧಿಯೊಬ್ಬರು ಗದ್ದೆಯಲ್ಲಿ ಯಾರೋ ವ್ಯಕ್ತಿ ಬಿದ್ದಿರುವುದನ್ನು ಕಂಡಿದ್ದು ಪರಿಶೀಲಿಸಿದಾಗ ಸೋಮಯ್ಯ ಎಂದು ತಿಳಿದುಬಂದಿತ್ತು. ಕೂಡಲೇ ಮನೆಗೆ ತೆರಳಿ ಸುದ್ದಿ ಮುಟ್ಟಿಸಿ ಮರಳಿಬಂದು ಕುಟುಂಬಿಕರ ಜೊತೆ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಾಗಲೇ ಸೋಮಯ್ಯ ಮೃತಪಟ್ಟಿರುವುದು ತಿಳಿದುಬಂದಿದೆ. ಕುಂದಾಪುರ ಟ್ರಾಫಿಕ್ ಠಾಣೆ ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಚಾಲಕನ ಅಮಾನವೀಯತೆ: ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣದಿಂದ ಮುಂಜಾನೆ 6 ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಕರೆದೊಯ್ಯುವಾಗ ಸೋಮಯ್ಯ ಅವರಿಗೆ ರಿಕ್ಷಾ ಡಿಕ್ಕಿಹೊಡೆದಿದೆ. ಅಪಘಾತದ ಬಗ್ಗೆ ತಿಳಿದರೂ ಕೂಡ ರಿಕ್ಷಾ ಚಾಲಕ ನಾರಾಯಣ ಎಂಬಾತನು ರಿಕ್ಷಾ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಒಂದೊಮ್ಮೆ ಆತ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಅವರು ಬದುಕುವ ಸಾಧ್ಯತೆಗಳಿತ್ತು ಎನ್ನಲಾಗಿದೆ. ರಿಕ್ಷಾ ಚಾಲಕನ ಅಮಾನವೀಯ ವರ್ತನೆ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ಬೆಳಿಗ್ಗೆ 9 ಗಂಟೆ ಬಳಿಕ ಅರೋಪಿ ಚಾಲಕ ಕುಂದಾಪುರ ಸಂಚಾರ ಪೊಲೀಸ್ ಠಾಣೆಗೆ ಬಂದು ಅಪಘಾತದ ವಿಚಾರ ತಿಳಿಸಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Previous articleಆಭರಣ ಕಳವು ಪ್ರಕರಣ: ಇಬ್ಬರು ಕಳ್ಳರ ಬಂಧನ
Next articleವರೂರು ನವಗ್ರಹ ತೀರ್ಥ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 2 ಕೋಟಿ