ಅಮೆರಿಕ ಈಗ ಅಕ್ರಮ ವಲಸಿಗರ ಮೊದಲ ತಂಡವನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಇದು ಹೀಗೇ ಮುಂದುವರಿಯಲಿದೆ ಎಂದು ಅಲ್ಲಿಯ ಸರ್ಕಾರ ತಿಳಿಸಿದೆ. ಭಾರತ ಕೂಡ ಅಕ್ರಮ ವಲಸಿಗರನ್ನು ಹಿಂದಕ್ಕೆ ಪಡೆಯಲು ಒಪ್ಪಿದೆ. ಆದರೆ ಇದು ಸುಲಭ ಬಗೆಹರಿಯುವ ಸಮಸ್ಯೆ ಅಲ್ಲ. ಅಮೆರಿಕ ದೇಶಕ್ಕೆ ಮೆಕ್ಸಿಕೊ ಮತ್ತಿತರ ದೇಶಗಳಿಂದ ಹೆಚ್ಚು ಜನ ಬಂದಿರಬಹುದು. ಆದರೆ ಅಮೆರಿಕ ಅನುಸರಿಸಿದ ಕ್ರಮವನ್ನು ಎಲ್ಲ ದೇಶಗಳೂ ಅನುಸರಿಸಲು ಆರಂಭಿಸಿದರೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ವಲಸೆ ಹೋಗುವವರು ಉತ್ತಮ ಬದುಕು ಕಾಣಲು ಹೋಗಿರುತ್ತಾರೆ. ಅವರು ದುಡಿಯುವ ವರ್ಗವೇ ಆಗಿರುತ್ತಾರೆ. ಹಲವು ದೇಶಗಳಲ್ಲಿ ರಾಜಕೀಯ ಅಸ್ಥಿರತೆ ಉಂಟಾದಾಗ ಜನ ವಲಸೆ ಹೋಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಜೀವಿಸಲು ವಲಸೆ ಹೋಗುವುದುಂಟು. ಈಗ ನೈಸರ್ಗಿಕ ವಿಕೋಪ ನಡೆದಲ್ಲಿ ಜನ ವಲಸೆ ಹೋಗುವುದು ಅನಿವಾರ್ಯ. ಪರಿಸರ ಅಸಮತೋಲನದಿಂದ ಜನ ತಾವು ವಾಸಿಸುತ್ತಿದ್ದ ಪ್ರದೇಶವನ್ನು ತ್ಯಜಿಸಿಬೇಕಾಗುತ್ತದೆ. ಇದೆಲ್ಲ ಮಾನವೀಯ ಸಮಸ್ಯೆಗಳು. ಇವೆಲ್ಲ ಟ್ರಂಪ್ ಅವರ ಕಣ್ಣಿಗೆ ಕಾಣದೇ ಇರಬಹುದು. ಟ್ರಂಪ್ ಅವರಿಗೆ ಅಮೆರಿಕದ ಅಕ್ರಮ ವಲಸಿಗರು ಕೇವಲ ಕಾನೂನು ಸಮಸ್ಯೆಯಾಗಿ ಕಂಡಿರಬಹುದು. ಆದರೆ ಇದೊಂದು ಮಾನವೀಯ ಸಮಸ್ಯೆ ಎಂಬುದನ್ನು ಅರಿಯಬೇಕು. ೧೯೫೯ ರಲ್ಲಿ ಚೀನಾ ಟಿಬೆಟ್ ಆಕ್ರಮಿಸಿಕೊಂಡಾಗ ೧.೩೦ ಲಕ್ಷ ಟಿಬೆಟ್ಟಿಯನ್ನರು ಭಾರತಕ್ಕೆ ಬಂದರು. ಈಗಲೂ ನಮ್ಮಲ್ಲೇ ನೆಲೆಸಿದ್ದಾರೆ. ಅವರನ್ನು ಹಿಂದಕ್ಕೆ ಕಳುಹಿಸಲು ಎಲ್ಲಿದೆ ಅವಕಾಶ? ಅದೇ ರೀತಿ ೨೩ ಲಕ್ಷ ಬಂಗ್ಲಾದೇಶಿಯರು, ೭ ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಯರು, ೪೦ ಸಾವಿರ ರೊಹಿಂಗ್ಯಾ ಇದ್ದಾರೆ. ಅವರನ್ನು ಹೊರಹಾಕಲು ಭಾರತ ಕ್ರಮ ಕೈಗೊಂಡರೆ ಅದೊಂದು ಅಂತಾರಾಷ್ಟ್ರೀಯ ಸಮಸ್ಯೆ ಆಗುವುದಂತೂ ಖಂಡಿತ ದೊಡ್ಡಣ್ಣ `ಅಮೆರಿಕವೇ ಮೊದಲು’ ಎಂದು ಘೋಷಣೆ ಮಾಡಿ ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲಿ ಮೊದಲಿಗರಾಗಬಾರದು. ಪಾಕಿಸ್ತಾನದಲ್ಲಿ ಆಫ್ಘಾನಿಸ್ತಾನದವರಿದ್ದಾರೆ. ಈ ರೀತಿ ನೋಡುತ್ತ ಹೋದಲ್ಲಿ ಅಕ್ರಮ ವಲಸಿರು ಇಲ್ಲದ ದೇಶ ನೋಡುವುದು ಕಷ್ಟ. ಬಡತನ-ನಿರುದ್ಯೋಗ ಬಹುತೇಕ ಅಕ್ರಮ ವಲಸಿಗರ ಸಮಸ್ಯೆ. ಶ್ರೀಮಂತರು ವಲಸೆ ಹೋದರೆ ಯಾವ ದೇಶವೂ ಬೇಡ ಎನ್ನುವುದಿಲ್ಲ. ಅದರಿಂದ ಲಾಭ ಇದೆ. ಬಡವರು ಬಂದರೆ ನಷ್ಟವೇ ಅಧಿಕ. ಇದು ಆರ್ಥಿಕ ಲೆಕ್ಕಾಚಾರ ಕೂಡ.
ಪ್ರಧಾನಿ ಮೋದಿ ಫೆ. ೧೩ ರಂದು ಅಮೆರಿಕಕ್ಕೆ ಹೋಗುವ ಕಾರ್ಯಕ್ರಮವಿದೆ. ಅಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ಒಂದು ಪರಿಹಾರ ಕಾಣಬಹುದು. ಅಂತರಾಷ್ಟ್ರೀಯ ಸಮಸ್ಯೆಯಾಗಿ ಇದನ್ನು ಪರಿಗಣಿಸಿದರೆ ಪರಿಹಾರ ಸಾಧ್ಯ. ಇಲ್ಲದಿದ್ದಲ್ಲಿ ದೇಶ-ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಹದಗೆಡುವುದಕ್ಕೆ ಕಾರಣವಾಗುತ್ತದೆ. ಅಕ್ರಮ ವಲಸಿಗರನ್ನು ಹೊರಹಾಕುವುದರಿಂದ ಆ ದೇಶದಲ್ಲಿ ಹಲವು ಸಮಸ್ಯೆಗಳು ತಲೆ ಎತ್ತುತ್ತವೆ. ಪ್ರಮುಖವಾಗಿ ಕಾರ್ಮಿಕರ ನಡುವೆ ಅಸಮಾಧಾನ. ಹಲವು ಆರ್ಥಿಕ- ಸಾಮಾಜಿಕ ಸಮಸ್ಯೆಗಳು ತಲೆಎತ್ತುತ್ತವೆ. ಹಿಂದೆ ಜರ್ಮನಿಯಲ್ಲಿ ೨೦೧೦ ರಲ್ಲಿ ಇದೇ ರೀತಿ ಅಕ್ರಮ ವಲಸಿಗರು ಹಿಂದಿರುಗಿ ಬಂದಿದ್ದರು. ಅದೇ ರೀತಿ ೧೯೯೦ ರಲ್ಲಿ ಇಟಲಿಯಲ್ಲೂ ನಡೆದಿತ್ತು. ಅವುಗಳು ಅಲ್ಲಿಯ ದೇಶಗಳಿಗೆ ಸೀಮಿತಗೊಂಡವು. ಜಾಗತಿಕ ಸ್ವರೂಪ ಪಡೆಯಲಿಲ್ಲ. ಕೆನಡಾ ಮೂಲಕ ಅಮೆರಿಕಕ್ಕೆ ಹೋಗುವ ಭಾರತೀಯರು ಬಹುತೇಕ ಜನ ಇದ್ದಾರೆ. ಈಗ ಅಮೆರಿಕದಲ್ಲಿ ೧೧ ಲಕ್ಷ ಭಾರತೀಯರು ಅಕ್ರಮವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಮೊದಲ ತಂಡವಾಗಿ ೨೦೫ ಜನರನ್ನು ಮಿಲಿಟರಿ ವಿಮಾನದಲ್ಲಿ ಕಳುಹಿಸಿಕೊಡಲಾಗಿದೆ. ಇದು ದುಬಾರಿ ಕಸರತ್ತು. ಅಮೆರಿಕ ಇದಕ್ಕಾಗಿ ೩೧೫ ಬಿಲಯನ್ ಡಾಲರ್ ವೆಚ್ಚ ಮಾಡಬೇಕು. ಅಮೆರಿಕ ಈ ಹಣದ ಬಗ್ಗೆ ಚಿಂತಿಸದೇ ಇರಬಹುದು. ಆದರೆ ವಲಸೆಗಾರರನ್ನು ಹಿಂದಕ್ಕೆ ಪಡೆಯಬೇಕಾದ ದೇಶದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನೂ ಚಿಂತಿಸಬೇಕು. ನಮಗೆ ಬೇಡವಾದ ಪ್ರಾಣಿಯನ್ನು ಬೇರೆ ಕಡೆ ಬಿಟ್ಟ ಹಾಗೆ ಜನರನ್ನು ಬಿಡಲು ಬರುವುದಿಲ್ಲ. ಬಹುತೇಕ ವಲಸಿಗರು ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡಿರುತ್ತಾರೆ. ಅವರು ಅದೆಲ್ಲವನ್ನೂ ತೆರೆಯಬೇಕು. ಅವರು ಗಳಿಸಿದ ಹಣ ಹಿಂದಕ್ಕೆ ತರುವುದು ಹೇಗೆ? ಎಷ್ಟೋ ದೇಶಗಳಿಗೆ ಅಮೆರಿಕದಲ್ಲಿ ದುಡಿದವರು ಕಳುಹಿಸುತ್ತಿದ್ದ ಹಣ ತೆರಿಗೆ ರೂಪದಲ್ಲಿ ಅನುಕೂಲವಾಗಿತ್ತು ಎಂಬುದೂ ನಿಜ. ಹಿಂದೆ ಮಹಾಯುದ್ಧಗಳು ನಡೆದಾಗ ಬರ್ಮಾದಿಂದ ಲಕ್ಷಾಂತರ ಭಾರತೀಯರು ಎಲ್ಲವನ್ನೂ ತ್ಯಜಿಸಿ ಭಾರತಕ್ಕೆ ಬಂದಿದ್ದರು. ಅವೆಲ್ಲ ಅಂದಿನ ಜನ ಮಾಡಿದ ತಪ್ಪುಗಳು. ಇಂಥ ತಪ್ಪುಗಳು ಮತ್ತೆ ಮರುಕಳಿಸಬಾರದು. ಅಕ್ರಮ ವಲಸೆ ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ. ಆದರೆ ಅಕ್ರಮವಾಗಿ ಬಂದವರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಬೇಕು. ಇದು ಮಾನವೀಯತೆಯ ಆಧಾರದ ಮೇಲೆ ನಡೆಯಬೇಕು. ಯಾವ ದೇಶಕ್ಕೂ ಹೊರೆ ಆಗಬಾರದು. ಇದೇ ಶಾಂತಿ ಕದಡಲು ಕಾರಣವಾಗಬಾರದು. ಅಮೆರಿಕ ತನ್ನ ಸಮಸ್ಯೆಯನ್ನು ಎಲ್ಲರಿಗೂ ಹರಡಿದಂತೆ ಆಗಬಾರದು.