ಹಾವು ಕಚ್ಚಿ ಬಾಲಕಿ ಸಾವು

0
54

ತಾಯಿಯೊಂದಿಗೆ ಹೊಲಕ್ಕೆ ತೆರಳಿದ್ದಾಗ ನಡೆದ ದುರ್ಘಟನೆ

ಜಗಳೂರು: ತಾಯಿ ಜೊತೆಗೆ ಜಮೀನಿಗೆ ತೆರಳಿದ ಬಾಲಕಿಗೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಮಲಿಯಪ್ಪ ಮತ್ತು ಮಮತಾ ದಂಪತಿಯ ಪುತ್ರಿ ವರ್ಷ(೧೩) ಹಾವು ಕಚ್ಚಿ ಮೃತಪಟ್ಟ ಬಾಲಕಿ. ಭಾನುವಾರ ಬೆಳಗ್ಗೆ ೧೧.೩೦ ಗಂಟೆ ಸುಮಾರಿನಲ್ಲಿ ತಾಯಿಯೊಂದಿಗೆ ಹೊಲಕ್ಕೆ ತೆರಳಿದ್ದಳು.
ಹೊಲದಲ್ಲಿ ಬಾಲಕಿಗೆ ನಾಗರಹಾವು ಕಚ್ಚಿದೆ. ಈ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಕೂಡಲೇ ಸೊಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರ ರಜೆ ಆಗಿದ್ದರಿಂದ ವೈದ್ಯರು ಇರಲಿಲ್ಲ. ನರ್ಸ್ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಜಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಬಾಲಕಿ ವರ್ಷ ದಾವಣಗೆರೆ ವಿಶ್ವ ಭಾರತಿ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದಳು. ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ ಸ್ವಗ್ರಾಮಕ್ಕೆ ಮರಳಿದ್ದರು. ಸೋಮವಾರ ಬೆಳಗ್ಗೆ ದಾವಣಗೆರೆಗೆ ಹೋಗಬೇಕು ಎನ್ನುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸುಹಾಸ್ ಶೆಟ್ಟಿ ಕೊಲೆ ಪ್ರಕರಣ NIAಗೆ
Next articleಕಾಲ್ತುಳಿತ ಪ್ರಕರಣದಲ್ಲಿ ಮೃತ RCB ಅಭಿಮಾನಿ ಮನೆಗೆ ಚಲುವರಾಯಸ್ವಾಮಿ ಭೇಟಿ