ಸಿದ್ದರಾಮಯ್ಯ ಸಿಬಿಐ ತನಿಖೆ ಎದುರಿಸಲಿ

0
32

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಲೋಕಾಯುಕ್ತ ಸಂಸ್ಥೆ ಕ್ಲೀನ್‌ಚಿಟ್ ನೀಡಿರುವುದರಲ್ಲಿ ವಿಶೇಷವೇನಿಲ್ಲ. ಸಂಪೂರ್ಣವಾಗಿ ಆರೋಪ ಮುಕ್ತವಾಗಬೇಕು ಎಂಬ ಉದ್ದೇಶ ಮುಖ್ಯಮಂತ್ರಿಗಿದ್ದರೆ ಸಿಬಿಐ ತನಿಖೆ ಎದುರಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿಗಳ ಆಣತಿಯಂತೇ ಕೆಲಸ ಮಾಡುತ್ತಾರೆ. ಲೋಕಾಯುಕ್ತ ಅಧಿಕಾರಿಗಳ ಪೋಸ್ಟಿಂಗ್ ಪ್ರಮೋಷನ್ ಸಿಎಂ ಕೈಯಲ್ಲೇ ಇರುವುದರಿಂದ, ಮುಡಾ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಲೋಕಾಯುಕ್ತಕ್ಕೆ ನೀಡಬಾರದು ಎಂದು ನಾನು ಮೊದಲೇ ಹೇಳಿದ್ದೆ. ಅದೇ ತರನಾಗಿ ರಾತ್ರೋರಾತ್ರಿ ಅಧಿಕಾರಿಗಳನ್ನು ಕರೆಸಿಕೊಂಡು ಅವರಿಗೆ ಸಲಹೆ- ಸೂಚನೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಅದರ ಪರಿಣಾಮವೇ ಕ್ಲೀನ್‌ಚಿಟ್ ಎಂದು ಆರೋಪಿಸಿದರು.
ಕೇಂದ್ರದಿಂದ ಪಡಿತರ ಅಕ್ಕಿ ಖರೀದಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ. ನಾವು ಅಕ್ಕಿ ಕೊಡುತ್ತೇವೆ ಅಂದಾಗ ಇವರು ತೆಗೆದುಕೊಳ್ಳಲಿಲ್ಲ. ಆದರೆ, ಇದೀಗ ಅನಿವಾರ್ಯವಾಗಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಪ್ರಯಾಗ್ ರಾಜ್‌ಗೆ ಪುಣ್ಯ ಸ್ನಾನ ಮಾಡಲು ದಿನನಿತ್ಯ ಕೋಟ್ಯಂತರ ಜನ ಬರುತ್ತಿದ್ದಾರೆ. ಅದು ಪವಿತ್ರ ಜಲ ಎಂದು ನಮ್ಮ ನಂಬಿಕೆ. ಆದರೂ ಅಲ್ಲಿನ ನೀರು ಕಲುಷಿತವಾಗಿದೆ ಎಂದು ಎನ್‌ಜಿಟಿ ವರದಿ ಸಲ್ಲಿಸಿದ್ದು ಗಮನಕ್ಕೆ ಬಂದಿದೆ. ನಾನೂ ಕೂಡ ಅಲ್ಲೇ ಸ್ನಾನ ಮಾಡಿದ್ದೇನೆ. ಎನ್‌ಜಿಟಿ ಯಾಕೆ ಹೀಗೆ ವರದಿ ಕೊಟ್ಟಿದೆ ಎಂಬುದು ಗೊತ್ತಿಲ್ಲ. ಅಲ್ಲಿ ಏನಾದ್ರೂ ಸಮಸ್ಯೆ ಇದ್ದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗಮನ ಹರಿಸುತ್ತಾರೆ ಎಂದರು.

Previous article21ರಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಪ್ರಶಸ್ತಿ ಪ್ರದಾನ
Next articleಕಾಮೇನಹಳ್ಳಿ ಜಲಪಾತದಲ್ಲಿ ಬಿದ್ದು ಯುವಕ ಸಾವು