ಹುಬ್ಬಳ್ಳಿ: ಪಾಕ್ ಆಕ್ರಮಿತ ಕಾಶ್ಮೀರದ ಉಗ್ರಗಾಮಿಗಳ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಹಿನ್ನೆಲೆಯಲ್ಲಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿವೃತ್ತ ಸೈನಿಕರಿಗೆ ಸಿಂಧೂರ ಹಚ್ಚುವ ಮೂಲಕ ಶ್ರೀರಾಮ ಸೇನೆಯ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಭಾರತ ಮಾತೆ ಪರ ಘೋಷಣೆ ಕೂಗಿ ಸಂಭ್ರಮಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರು, ಭಾರತೀಯ ಸೇನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಆಪರೇಷನ್ ಸಿಂಧೂರ ಮೂಲಕ ಮೋದಿಯವರು ಸೈನಿಕರಿಗೆ ಮುಕ್ತ ಅವಕಾಶ ನೀಡಿದ್ದಾರೆ. 26 ಮಹಿಳೆಯರ ಸಿಂಧೂರ ಅಳಿಸಿದ ಪಾಪಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲಾಗಿದೆ. ಆಪರೇಷನ್ ಸಿಂಧೂರ ಆರಂಭ ಮಾತ್ರ. ಕಾರ್ಯಾಚರಣೆ ಇಷ್ಟಕ್ಕೆ ನಿಲ್ಲಬಾರದು. ಉಗ್ರರ ಅಡಗು ತಾಣ, ಶಸ್ತ್ರಾಸ್ತ್ರ ತಾಣಗಳನ್ನು ಧ್ವಂಸ ಮಾಡಬೇಕು ಎಂದು ಆಗ್ರಹಿಸಿದರು.