ಬೆಳಗಾವಿ: ಭಾಜಪ ಪಕ್ಷ ಸಂಘಟನೆಯಲ್ಲಿ ಗಟ್ಟಿಯಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಬಹಳಷ್ಟು ಉತ್ಸಾಹವಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆಯುವ ಆತ್ಮವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ವಿವಿಧ ಮೋರ್ಚಾ, ಸಮ್ಮೇಳನ, ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ, ಫಲಾನುಭವಿಗಳ ಕಾರ್ಯಕ್ರಮ, ರಥಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿರಂತರವಾಗಿ ರಾಜ್ಯದಲ್ಲಿ ನಡೆಯುತ್ತಿದೆ. ಬಿಜೆಪಿಯಲ್ಲಿ ಚುನಾವಣೆಗೆ ಬಹಳ ಪೈಪೋಟಿ ಏರ್ಪಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಗೆಲ್ಲುವ ಪಕ್ಷಕ್ಕೆ ಪೈಪೋಟಿ ಇದ್ದೇ ಇರುತ್ತದೆ. ಈ ಪೈಪೋಟಿಯಲ್ಲಿ ಪಕ್ಷ, ಹೈಕಮಾಂಡ್ ಸಮರ್ಥವಾಗಿ ನಿಭಾಯಿಸಲಿದೆ. ಹೈಕಮಾಂಡ್ ಟಿಕೇಟ್ ನೀಡುವ ಸ್ಪರ್ಧಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಕೇಂದ್ರದ ಹಲವಾರು ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಸ್ಸಾಂ, ಮಧ್ಯಪ್ರದೇಶ ಮುಖ್ಯಮಂತ್ರಿಗಳು ಅಲ್ಲದೇ ಹಲವು ಕೇಂದ್ರ ಸಚಿವರು ಭೇಟಿ ನೀಡಲಿದ್ದಾರೆ ಎಂದರು.
ಜನರನ್ನು ಮರಳು ಮಾಡುವ ಕೆಲಸ :
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಅನುಷ್ಠಾನಗೊಳ್ಳುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಗ್ಯಾರೆಂಟಿ ಕಾರ್ಡ್ ಯೋಜನೆ ಕೇವಲ ಜನರನ್ನು ಮರಳು ಮಾಡುವ ಕೆಲಸವಾಗಿದೆ ಎಂದರು.
ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಗೆ ಎಂಇಎಸ್‌ನವರಿಗೆ ಪೂಜೆ ಮಾಡಲು ಅವಕಾಶ ನೀಡಲಾಗುವುದೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ವಿಷಯವನ್ನು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

























