ವಿದ್ಯಾಭ್ಯಾಸದಲ್ಲಿ ರಾಜಕೀಯ ಚೆಲ್ಲಾಟ ಬೇಡ

0
20

ಹತ್ತನೆ ತರಗತಿವರೆಗಿನ ಪಠ್ಯ ಪುಸ್ತಕಗಳ ವಿವಾದದ ಗಾಳಿ ಮತ್ತೊಮ್ಮೆ ಎದ್ದಿದೆ. ತನ ಕಾಂಗ್ರೆಸ್ ಸರ್ಕಾರ ಬಿ.ಜೆ.ಪಿ ಸರ್ಕಾರ ಪರಿಷ್ಕರಿಸಿದ ಪಠ್ಯಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಗೂ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಹೊಸ ಸಮಿತಿಯೊಂದನ್ನು ರಚಿಸುವುದಾಗಿಯೂ ಪ್ರಕಟಿಸಿದೆ. ಇದು ಅನಿರೀಕ್ಷಿತವೇನಲ್ಲ. ಏಕೆಂದರೆ ಹಿಂದಿನ ಬಿ.ಜೆ.ಪಿ ಸರ್ಕಾರ ಮಾಡಿದ ಪಠ್ಯಗಳ ಪರಿಷ್ಕರಣೆಗೆ ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಕೆಲವು ಮಂದಿ ಶಿಕ್ಷಣ ತಜ್ಞರೂ ತೀವ್ರ ವಿರೋಧ, ಪ್ರತಿಭಟನೆ ವ್ಯಕ್ತಪಡಿಸಿದ್ದರು. ದುರದೃಷ್ಟಕರ ಸಂಗತಿ ಎಂದರೆ ಮಕ್ಕಳ ಶಿಕ್ಷಣ ಹೇಗಿರಬೇಕೆಂದು ರೂಪಿಸುವುದು ತಮ್ಮ ಹಕ್ಕು ಎಂದು ರಾಜಕೀಯ ಪಕ್ಷಗಳು ಭಾವಿಸಿರುವುದು. ಆದರೆ ತಂದೆ ತಾಯಿಯರ ಚಿಂತೆ ಬೇರೆಯದೇ ಆಗಿದೆ.
ಶಿಕ್ಷಣ ಒಂದು ವ್ಯಾಪಾರೋದ್ಯಮವಾಗಿ ಬೆಳೆದು ಎಷ್ಟೋ ಕಾಲವಾಗಿದೆ. ತಂದೆ ತಾಯಿಯರ ಚಿಂತೆ ಎರಡು ಬಗೆಯದು. ಶಿಕ್ಷಣದ ಉದ್ದೇಶ ಏನು? ತಮ್ಮ ಮಕ್ಕಳಿಗೆ ಎಂಥ ಶಿಕ್ಷಣ ಕೊಡಿಸಬೇಕು ಎಂಬ ಸ್ಪಷ್ಟ ಕಲ್ಪನೆ ಶೇ ೯೦ರಷ್ಟು ಮಂದಿ ತಂದೆ ತಾಯಿಗಳಿಗಿರುವುದಿಲ್ಲ. ಉದರಂಭರಣಕ್ಕೆ ಅಗತ್ಯವಾದಷ್ಟು ಸಂಪಾದನೆಗೆ ದಾರಿ ಮಾಡಿಕೊಡುವ ಶಿಕ್ಷಣಬೇಕು ಎನ್ನುವ ಬಹುತೇಕ ಮಾತಾ ಪಿತ್ರಗಳ ಯೋಚನೆಯಲ್ಲಿ ತಪ್ಪೇನಿಲ್ಲ. ಆದರೆ ಶ್ರೇಣಿಕೃತ ಸಮಾಜದಲ್ಲಿ ಅನ್ನ ಬಟ್ಟೆಯ ಕಲ್ಪನೆಯೂ ಭಿನ್ನವಾಗಿರುತ್ತದೆ. ಹಳ್ಳಿಗಾಡಿನ ಬಡಮಕ್ಕಳಿಗಾಗಿ ಆರ್.ಟಿ.ಇ. ಶಾಸನದನ್ವಯ ನೀಡುವ ಉಚಿತ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ತಂದೆ ತಾಯಿಯರು ಹಿಂಜರಿಯುತ್ತಿದ್ದಾರಂತೆ. ಈ ವರ್ಷ ಬಡಮಕ್ಕಳಿಗಾಗಿ ಮೀಸಲಿರಿಸಿರುವ ಸೀಟುಗಳಲ್ಲಿ ಬಹುತೇಕ ಖಾಲಿ ಇವೆ ಎಂದು ವರದಿಯಾಗಿದೆ. ಅಂದರೆ ಇವತ್ತಿನ ತಂದೆ ತಾಯಿಯರ ಮನೋಭಾವ ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಸಾಫ್ಟವೇರ್ ಎಂಜಿನಿಯರೋ ಡಾಕ್ಟರೋ ಆಗಿ ವಿದೇಶಗಳಿಗೆ ತೆರಳಬೇಕು, ಕೈತುಂಬ ಸಂಪಾದನೆ ಮಾಡಬೇಕು ಎಂಬುದೇ ಆಗಿದೆ. ಇದು ಅನ್ನ-ಬಟ್ಟೆ-ವಸತಿ ಸಂಪಾದನೆಯ ಪರಮ ಗುರಿ. ಆಸೆ ಪಡುವುದು ತಪ್ಪೇನಲ್ಲ. ಹಿಮಾಲಯ ಸದೃಶವಾದ ಈ ಆಸೆಗಳ ಮುಂದೆ ಶಿಕ್ಷಣದ ಮೂಲ ಉದ್ದೇಶವಾದ ಬೆಳೆಯುವ ಮಕ್ಕಳನ್ನು ಒಳ್ಳೆಯ ಮನುಷ್ಯರನ್ನಾಗಿ ರೂಪಿಸಬೇಕೆಂಬ ಆಶಯ ಮಾಯವಾಗುತ್ತದೆ.
ಶಿಕ್ಷಣದ ಗುರಿ ಅಂತರಂಗದ ಸಂಸ್ಕಾರ. ಇದು ಮಕ್ಕಳು ಮತ್ತು ವಯಸ್ಕರಿಬ್ಬರಿಗೂ ಅನ್ವಯಿಸುವ ಮಾತು. ಅಂದರೆ ಮಕ್ಕಳನ್ನು ನವ ಪ್ರಜ್ಞಾವಂತ ಮನುಷ್ಯರನ್ನಾಗಿ ಮಾಡುವುದು. ಒಳಿತು ಕೆಡಕುಗಳು ಮೊದಲ್ಗೊಂಡಂತೆ ಜೀವನದ ಶ್ರೇಷ್ಠ
ಮೌಲ್ಯಗಳನ್ನು ಬೋಧಿಸುವುದು ಶಿಕ್ಷಣದ ಗುರಿಯಾಗಬೇಕು. ಇಂಥ ಶಿಕ್ಷಣ ಪಡೆದವರು ಬದುಕಲು ಸಮರ್ಥರಾದ ಸುಸಂಸ್ಕೃತ ಮಾನವರಾಗುತ್ತಾರೆ. ಇಂಥ ಶಿಕ್ಷಣಕ್ಕೆ ಬೇಕಾದ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವುದು ಸರ್ಕಾರ ಮತ್ತು ಸಮಾಜದ ಹೊಣೆ. ಶಿಕ್ಷಣದ ಮೂಲ ಸಾಮಗ್ರಿಗಳಲ್ಲಿ ಮುಖ್ಯವಾದದ್ದು ಪಠ್ಯ ಪುಸ್ತಕಗಳು. ಇಂಥ ಶಿಕ್ಷಣಕ್ಕೆ ಅಗತ್ಯವಾದ, ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ದಾರಿ ಮಾಡಿಕೊಡುವಂಥ ಯೋಗ್ಯವಾದ ಪಠ್ಯ ಪುಸ್ತಕಗಳನ್ನು ನಾವು ನಮ್ಮ ಮಕ್ಕಳ ಕೈಯ್ಯಲ್ಲಿ ಇಡುತ್ತಿದ್ದೇವೆಯೆ? ಇಲ್ಲ ಎಂಬುದು ದು:ಖಕರ ಸಂಗತಿ. ತಂದೆ ತಾಯಿಯರು ಹಣ ಸಂಪಾದನೆಯನ್ನೇ ಪ್ರಧಾನವಾಗಿ ಗಮನಿಸಿದರೆ, ರಾಜಕೀಯ ರಾಜಕಾರಣಿಗಳು ತಮ್ಮ ಪಕ್ಷದ ಧ್ಯೇಯಧೋರಣಗಳನ್ನೇ ಶಿಕ್ಷಣ ನೀತಿಯನ್ನಾಗಿ ರೂಪಿಸಿತ್ತಿವೆ.
ರಾಜಕೀಯ ಚಿಂತನೆಗಳಿಗೇ ಆದ್ಯತೆ. ಈ ಎಡ-ಬಲ ರಾಜಕಾರಣ ನಮ್ಮ ದೇಶಕ್ಕೆ ಆತುಕೊಂಡಿರೋ ಒಂದು ದೊಡ್ಡ ಪಿಡುಗು. ಒಂದು ಪಕ್ಷ ವೇದ ಧರ್ಮ ಸಂಸ್ಕೃತಿಯೇ ನಮ್ಮ ಸಂಸ್ಕೃತಿ, ಅದರಂತೆಯೇ ಶಿಕ್ಷಣ ಕೊಡಬೇಕು ಎನ್ನುತ್ತದೆ. ಮತ್ತೊಂದು ಪಕ್ಷ ತನ್ನದು ಧರ್ಮನಿರಪೇಕಿತ ಬಹುತ್ವ ಸಂಸ್ಕೃತಿ ಎಂದು ಹೇಳುತ್ತದೆ. ಮತ್ತೊಂದು ಕಾರ್ಲ್ ಮಾರ್ಕ್ಸ್ ನಮ್ಮ ಗುರು. ಅವನ ಸಿದ್ದಾಂತಗಳಂತೆಯೇ ಶಿಕ್ಷಣ ಕೊಡಬೇಕು ಎನ್ನುತ್ತದೆ.
ಕರ್ನಾಟಕದಲ್ಲಿ ಪಠ್ಯಪುಸ್ತಗಳ ಪರಿಷ್ಕರಣೆಯ ರಗಳೆ ಶುರುವಾದದ್ದು ಬಿ.ಜೆ.ಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ. ಹಿಂದೂ ಧರ್ಮ, ಭಾರತದ ಇತಿಹಾಸ, ಸಾಂಸ್ಕೃತಿಕ ಪರಂಪರೆಗಳನ್ನು ಸರಿಯಾದ ರೀತಿಯಲ್ಲಿ ಬೋಧಿಸಬೇಕೆನ್ನುವ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಚಿಂತನೆಗನುಗುಣವಾಗಿಯೇ ಆಗಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಖುದ್ದು ಉಸ್ತುವಾರಿಯಲ್ಲಿ ಹತ್ತನೆ ತರಗತಿವರೆಗಿನ ಪಠ್ಯ ಪುಸ್ತಗಳ ಪರಿಷ್ಕರಣೆಯಾಯಿತು. ಪರಿಷ್ಕೃತ ಪಠ್ಯಗಳು ಬಂದದ್ದೇ ಪಠ್ಯ ಪುಸ್ತಕಗಳ ಕೇಸರೀಕರಣವಾಗಿದೆ ಎಂಬ ಕೂಗೆದ್ದಿತು. ವಿಶೇಷವಾಗಿ ಸಮಾಜ ಶಾಸ್ತ್ರದ ಪಠ್ಯ ಕ್ರಮದಲ್ಲಿ ಆರೆಸ್ಸೆಸ್ ನೀತಿ ಮತ್ತು ವಿಚಾರಧಾರೆಯನ್ನು ಅಳವಡಿಸಲಾಗಿದೆ ಎಂಬ ಗುರುತರವಾದ ಆಪಾದನೆ ಶಿಕ್ಷಣ ತಜ್ಞರಿಂದಲೂ ಪೋಷಕರಿಂದಲೂ ಕೇಳಿಬಂತು. ಸಿದ್ಧರಾಮಯ್ಯನವರ ನಾಯಕತ್ವದ ಕಾಂಗ್ರೆಸ್ ಸರ್ಕಾರ ಬಂದನಂತರ “೧ರಿಂದ ೧೦ನೇ ತರಗತಿವರೆಗಿನ ಪಠ್ಯ ಪುಸ್ತಕಗಳಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಿ ಪರಿಷ್ಕೃತ ಪಠ್ಯ ಪುಸ್ತಗಳನ್ನು ನೀಡುವಂತೆ” ಡಾ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಲಾಯಿತು.ಈ ಸಮಿತಿ ಸುದೀರ್ಘ ಸಭೆ ಸಮಾಲೋಚನೆಗಳ ನಂತರ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಶಿಫಾರಸು ಮಾಡಿತು.
ಈಗ ಪ್ರತಿಭಟಸುವ ಸರದಿ ಬ.ಜೆ.ಪಿ ಮತ್ತು ಆರೆಸ್ಸಸ್‌ದಾಯಿತು. ಎರಡನೆಯ ಬಾರಿಗೆ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಯೋಗವೊಂದು ಆಗಿನ ಶಿಕ್ಷಣ ಸಚಿವ ನಾಗೇಶ್ ಅವರನ್ನು ಭೇಟಿಮಾಡಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಆಗ್ರಹ ಪಡಿಸಿತು. ಅದರಂತೆ ನಾಗೇಶ್ ಅವರು ಆರೆಸ್ಸೆಸ್ ಸಹಾನುಭೂತಿಪರರರಾದ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದರು. ಈ ಸಮಿತಿಯಲ್ಲಿ ಆರೆಸ್ಸೆಸ್ ಮತ್ತು ಬಿ.ಜೆ.ಪಿ.ಯವರೇ ಹೆಚ್ಚಾಗಿದ್ದರು. ನಿರೀಕ್ಷೆಯಂತೆ ಈ ಸಮಿತಿ ಹಿಂದುತ್ವದ ವಿಚಾರಧಾರೆಗೆ ಹೆಚ್ಚಿನ ಪ್ರಾಮುಖ್ಯ ನೀಡಿ ಪಠ್ಯಗಳಲ್ಲಿ ಕೆಲವೊಂದು ತಿದ್ದುಪಡಿ ಮಾಡಿತು. ಕೆಲವೊಂದು ಹೊಸ ಪಠ್ಯಗಳನ್ನು ಸೇರಿಸಿತು. ಇದರ ವಿರುದ್ಧುವೂ ಪ್ರತಿಭಟನೆ ಕೇಳಿ ಬಂತು. ದೇವನೂರು ಮಹಾದೇವ ಸೇರಿದಂತೆ ಕೆಲವು ಲೇಖಕರು ಪಠ್ಯಪುಸ್ತಕಗಳಿಗೆ ನೀಡಿದ್ದ ತಮ್ಮ ರಚನೆಗಳನ್ನು ವಾಪಸು ತೆಗೆದುಕೋಂಡರು.
ಇದೀಗ ಅಧಿಕಾರ ವಹಿಸಿಕೊಂಡಿರುವ ಸಿದ್ಧರಾಯ್ಯನವರ ನೇತೃತ್ವ ಕಾಂಗ್ರೆಸ್ ಸರ್ಕಾರ, ರೋಹಿತ್ ಚಕ್ರವರ್ತಿ ಅಧ್ಯಕ್ಷತೆಯ ಸಮಿತಿ ಸೇರಿಸಿದ್ದ ಕನ್ನಡ ಭಾಷೆಗೆ ಸಂಬಂಧಿಸಿದ ನಾಲ್ಕು ಕಥೆಗಳೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ವಿವಾದಿತ ಪಾಠಗಳ ಬೋಧನೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ರದ್ದುಗೊಳಿಸಲು ನಿರ್ಧರಿಸಿದೆ. ಹಾಗೂ ಪಠ್ಯ ಪುಸ್ತಕಗಳ ಸಂಪೂರ್ಣ ಪರಿಷ್ಕರಣೆಗೆ ತಜ್ಞರ ಹೊಸ ಸಮಿತಿಯೊಂದನ್ನು ರಚಿಸುವ ತೀರ್ಮಾನಕ್ಕೆ ಬಂದಿದೆ.
ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ, ಇತಿಹಾಸ, ಸಂವಿಧಾನ ಮತ್ತು ರಾಜಕೀಯ ಸಿದ್ಧಾಂತಗಳನ್ನು ಮಕ್ಕಳು ಅರಿತಿರಬೇಕು ಎಂಬುದರಲ್ಲಿ ಎರಡು ಅಭಿಪ್ರಾಯವಿರಲಾರದು. ಆದರೆ ಪ್ರಶ್ನೆ ಇರುವುದು ಇವುಗಳನ್ನು ಯಾವ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕು, ಇದನ್ನು ಯಾರು ಗೊತ್ತುಪಡಿಸಬೇಕು ಎನ್ನುವುದು. ಶಿಕ್ಷಣ ತಜ್ಞರೇ ಪಠ್ಯಪುಸ್ತಕಗಳನ್ನು ಗೊತ್ತುಪಡಿಸಬೇಕು ಎಂಬುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೇ. ಆದರೆ ತಜ್ಞರ ಸಮಿತಿ ರಚಿಸುವಾಗ ಯಾವುದೇ ಸರ್ಕಾರವಿರಲಿ ತನ್ನ ಮೂಗಿನ ನೇರಕ್ಕೆ ಶಿಫಾರಸುಗಳನ್ನು ಸಲ್ಲಿಸುವ ತಜ್ಞರುಗಳನ್ನು ನೇಮಿಸಕೂಡದು. ಸಮಿತಿಗೆ ನೇಮಕಗೊಳ್ಳುವ ತಜ್ಞರು ನಿಜವಾಗಿ ಶಿಕ್ಷಣ ತಜ್ಞರಾಗಿರಬೇಕು, ಅವರು ಶಿಕ್ಷಣ, ಬೋಧನೆಗಳಲ್ಲಿ ಅನುಭವಿಗಳಾಗಿರಬೇಕು ಹಾಗೂ ಯಾವುದೇ ರಾಜಕೀಯ ಪೂರ್ವಾಗ್ರಹ, ಪೂರ್ವಾಲೋಚನೆ ಮತ್ತು ಪ್ರಭಾವಗಳಿಂದ ಮುಕ್ತರಾಗಿರಬೇಕು. ರಾಜಕೀಯ ಪ್ರಭಾವ, ಪ್ರಲೋಭನೆಗಳಿಗೆ ಮಣಿಯುವಂಥ ದುರ್ಬಲ ಮನಸ್ಸಿನ ತಜ್ಞರು ಪರಿಷ್ಕರಣೆ ಸಮಿತಿಯಲ್ಲಿ ಇರಬಾರದು.
ಇನ್ನು ನಮ್ಮ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಧರ್ಮ, ವಿಶ್ವ ಸಂಸ್ಕೃತಿ, ವಿಶ್ವ ನಾಗರಿಕತೆಗಳಲ್ಲಿ ಕಾಲಕಾಲಕ್ಕೆ ಬದಲಾವಣೆಗಳಾದಂತೆ ವಿದ್ಯಾರ್ಥಿಗಳು ಕಲಿಯುವ ಪಠ್ಯಕ್ರಮದಲ್ಲೂ ಬದಲಾವಣೆ ಅನಿವಾರ್ಯ. ಆದರೆ, ಒಂದರಿಂದ ಹತ್ತನೆ ತರಗತಿವರೆಗಿನ ಘಟ್ಟದಲ್ಲೇ ಧರ್ಮ, ಭಗವದ್ಗೀತೆ, ರಾಜಕೀಯ ಸಿದ್ದಾಂತಗಳನ್ನು ಬೋಧಿಸಬೇಕೆನ್ನುವುದು ನೀರಿಳಿಯದ ಗಂಟಲಲ್ಲಿ ಕಡುಬನ್ನು ತುರುಕಿದಂತೆಯೇ ಸರಿ ಏಕೆಂದರೆ ಈ ತರಗತಿಗಳ ಮಕ್ಕಳ ಮನಸ್ಸು, ಬುದ್ಧಿಗಳು ಬೆಳೆದಿರುವುದಿಲ್ಲ. ಇನ್ನೂ ಕನಿಷ್ಠಮಟ್ಟದಲ್ಲೇ ಇರುತ್ತದೆ. ಆದ್ದರಿಂದ ಎಳವೆಯಲ್ಲೇ ಮಕ್ಕಳು ಇಂಥ ಗುರುತರವಾದ ಘನವಾದ ವಿಷಯಗಳನ್ನು ಅರ್ಥಮಾಡಿಕೊಳ್ಳತ್ತರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಒಂದರಿಂದ ಹತ್ತರವರೆಗೆ ನಮ್ಮ ಧಾರ್ಮಿಕ ಮಹಾಪುರುಷರು, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ದೀನ್ ದಯಾಳು ಉಪಾಧ್ಯಾಯ ಮೊದಲಾದವರ ಜೀವನ ಪರಿಚಯ ಲೇಖನಗಳೂ, ಪ್ರಕೃತಿ, ಋತುಮಾನ, ಗಣಿತ, ಸಾಮಾನ್ಯ ವಿಜ್ಞಾನ ಹಾಗೂ ನೈತಿಕತೆ, ಸತ್ಯ, ಪ್ರಾಮಾಣಿಕೆಗಳನ್ನು ಬೋಧಿಸುವಂಥ ಸೃಜನಶೀಲ ಲೇಖಕರ ರಚನೆಗಳು ಇರಬೇಕು. ಧರ್ಮ ಸಿದ್ದಂತಗಳು ಮತ್ತು ರಾಜಕೀಯ ಸಿದ್ದಂತಗಳು ಇವೆಲ್ಲವನ್ನು ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಬೋಧಿಸಬೇಕು. ಆ ವೇಳಗೆ ವಿದ್ಯಾರ್ಥಿಗಳ ಬುದ್ಧಿ, ವಿವೇಚನೆಗಳಲ್ಲಿ ವಿಕಾಸವಾಗಿರುತ್ತದೆ. ಯಾವುದು ಸರಿ, ಯಾವುದು ತಪ್ಪು, ಯಾವುದನ್ನು ತಮ್ಮ ಭವಿಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ನಿರ್ಧರಿಸುವ ಪ್ರಬುದ್ಧತೆ ಅವರಲ್ಲಿ ಬಂದಿರುತ್ತದೆ.
ಭಗವದ್ಗೀತೆ ಬೋಧಿಸಬೇಕೆಂಬುದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಭಗವದ್ಗೀತೆಯನ್ನು ಅರ್ಥಮಾಡಿಕೆಕೊಂಡು ಬೋಧಿಸುವಂಥ ಎಷ್ಟು ಮಂದಿ ಶಿಕ್ಷಕರು ನಮ್ಮಲ್ಲಿದ್ದಾರೆ?. ಎಷ್ಟು ಮಂದಿ ಭಗವದ್ಗೀತೆಯನ್ನಾಗಲೀ ಅಥವಾ ಡಿ.ವಿ.ಜಿ.ಯವರ ಜೀವನಧರ್ಮ ಯೋಗವನ್ನು ಓದಿಕೊಂಡಿರುವ ಶಿಕ್ಷಕರಿದ್ದಾರಿದ್ದಾರೆ.?

Previous articleಒಳ್ಳೆಯ ಹವ್ಯಾಸಗಳು ಪಾರು ಮಾಡುತ್ತವೆ
Next articleರಸ್ತೆ ಅಪಘಾತ: ಸ್ಥಳದಲ್ಲಿ ಮೂರು ಜನರ ಸಾವು