ವಡಾ ಪಾವ್ ಭಾಜಿ ಮೇಲೆ ಮಾಲಿನ್ಯದ ಕರಿನೆರಳಿನ ಬರೆ

0
39

ನೀವು ಯಾವುದೇ ಒಂದು ಪ್ರದೇಶಕ್ಕೆ ಹೋಗಿ ಆ ಪ್ರದೇಶದ ಕೆಲವು ವಿಶೇಷತೆಗಳಿರುತ್ತವೆ. ಅದು ಅಲ್ಲಿನ ಉಡುಗೆ ತೊಡುಗೆ ಆಗಿರಬಹುದು, ಭಾಷೆಗಳಾಗಿರಬಹುದು, ಆಚಾರ ವಿಚಾರಗಳಾಗಿರಬಹುದು ಹಾಗೂ ಅಲ್ಲಿನ ತಿಂಡಿ ತಿನಿಸುಗಳೇ ಆಗಿರಬಹುದು. ಉದಾಹರಣೆಗೆ ದಾವಣಗೆರೆಯ ಬೆಣ್ಣೆ ದೋಸೆ, ಮಂಡಕ್ಕಿ, ಧಾರವಾಡದ ಪೇಡೆ, ಬೆಳಗಾವಿಯ ಕುಂದ, ಮಂಗಳೂರಿನ ಗೋಳಿ ಬಜೆ, ಮದ್ದೂರಿನ ವಡೆ, ಮೈಸೂರಿನ ಮೈಸೂರು ಪಾಕ್, ಬೆಂಗಳೂರಿನ ಫಿಲ್ಟರ್ ಕಾಫಿ, ಚೌಚೌ ಬಾತ್, ಅಂತೆಯೇ ಕನಸನ್ನು ಮಾರುವ ವಾಣಿಜ್ಯ ನಗರಿ ಮುಂಬೈ ಕೂಡ ಈ ವಿಷಯದಲ್ಲಿ ಹೊರತಲ್ಲ. ಮುಂಬೈ ಅಂದರೆ ವಡಾ ಪಾವ್. ವಡಾ ಪಾವ್ ಅಂದರೆ ಮುಂಬೈ ಅನ್ನುವಷ್ಟರ ಮಟ್ಟಿಗೆ ಮುಂಬೈ ಹಾಗೂ ವಡಾ ಪಾವ್‌ನ ಸಂಬಂಧ. ಕೆಲವರ ಪ್ರಕಾರ ಮುಂಬೈಗೆಂದು ಹತ್ತು ಹಲವು ಕನಸನ್ನು ಕಟ್ಟಿಕೊಂಡು ಬರುವ ಕನಸುಗಾರರ ಹೊಟ್ಟೆಯನ್ನು ಪೊರೆಯುತ್ತಿರುವುದೇ ವಡಾ ಪಾವ್ ಎಂಬ ತಿನಿಸು. ಇಂತಹ ವಡಾ ಪಾವ್, ಪಾವ್ ಭಾಜಿಯಲ್ಲಿ ಹಿರಿಯಣ್ಣನಂತೆ ಭಾಜಿಗೂ ಬಟಾಟ ವಡಕ್ಕೂ ಬಾಂಧವ್ಯ ಬೆಸೆಯುತ್ತಿರುವ ಪಾವ್‌ನ ಮೇಲೆ ಮುಂಬೈ ಮಹಾನಗರ ಪಾಲಿಕೆ ಮಾಲಿನ್ಯದ ಬರೆ ಎಳೆದಿದೆ.
ಒಂದು ಅಂದಾಜಿನ ಪ್ರಕಾರ ಮುಂಬೈ ನಗರದಲ್ಲೇ ಸುಮಾರು ಏಳನೂರರಿಂದ ಎಂಟನೂರು ಅಧಿಕೃತವಾಗಿ ನೋಂದಾಯಿಸಿದ ಪಾವ್ ತಯಾರಿಸುವ ಬೇಕರಿಗಳಿವೆ. ಅಂತೆಯೇ ನೋಂದಾಯಿಸದೆ ಇರುವ ಬೇಕರಿಗಳ ಲೆಕ್ಕವಿಲ್ಲ. ಕೆಲವೊಂದು ಬೇಕರಿಗಳಲ್ಲಿ ಒಂದು ದಿನಕ್ಕೆ ಸುಮಾರು ೧೮೦೦೦ ದಿಂದ ೨೦೦೦೦ ದಷ್ಟು ಪಾವ್‌ಗಳು ತಯಾರಿಸಲ್ಪಡುತ್ತವೆ. ಹೀಗೆ ತಯಾರಾಗುವ ಪಾವ್‌ಗಳನ್ನು ತಯಾರು ಮಾಡಲು ಬಳಸುವ ಇಂಧನದ ಬಗ್ಗೆ ಮುಂಬೈ ಮಹಾ ನಗರ ಪಾಲಿಕೆ ಆಕ್ಷೇಪಣೆ ಎತ್ತಿದೆ. ಅಲ್ಲದೆ ಇನ್ನು ಐದು ತಿಂಗಳಲ್ಲಿ ವಿದ್ಯುತ್ ಅಥವಾ ಪೆಟ್ರೋಲಿಯಂ ಗ್ಯಾಸ್ ಆಧಾರಿತ ಪರ್ಯಾಯ ಇಂಧನದ ಬಳಕೆಯನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದೆ. ಒಂದು ಅಂದಾಜಿನ ಪ್ರಕಾರ ಪಾವ್‌ಗಳನ್ನೂ ತಯಾರಿಸುವ ೪೭% ಬೇಕರಿಗಳು ಇಂಧನಕ್ಕಾಗಿ ಮೊರೆ ಹೋಗಿರುವುದು ಸುಲಭಕ್ಕೆ ದೊರೆಯುವ ಕಟ್ಟಿಗೆಗಳ ಹಾಗೂ ಅಳಿದುಳಿದ ಗುಜರಿ ಪೀಠೋಪಕರಣಗಳ ಮೇಲೆ. ಮೇಲ್ನೋಟಕ್ಕೆ ಅಷ್ಟೇ ತಾನೇ ಏನೀಗ ಹಲವಾರು ಕಡೆ ಕಟ್ಟಿಗೆ ಒಲೆಯ ಮೇಲೆ ಮಾಡಿದ ತಿಂಡಿ ತಿನಿಸು ಎಂದು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಬೋರ್ಡ್ಗಳನ್ನೂ ಹಾಕಿರುವುದಿಲ್ಲವೇ ಎಂದು ಪ್ರಶ್ನಿಸಬಹುದು, ಅದು ನಿಜವೇ ಆದರೆ ಒಟ್ಟಾರೆಯಾಗಿ ಒಂದೇ ಪ್ರದೇಶದಲ್ಲಿ ಎಲ್ಲ ಹೋಟೆಲ್‌ಗಳು ಅಥವಾ ಬೇಕರಿಗಳು ಇದೇ ಮಾದರಿಯಲ್ಲಿ ಇಂತಹ ಇಂಧನದ ಮೊರೆ ಹೋದರೆ ಉಂಟಾಗುವ ಪರಿಣಾಮ ಊಹಿಸಲು ಅಸಾಧ್ಯ. ಅಂದಾಜಿನ ಪ್ರಕಾರ ಕಟ್ಟಿಗೆಗಳ ಹಾಗೂ ಅಳಿದುಳಿದ ಗುಜರಿ ಪೀಠೋಪಕರಣಗಳನ್ನು ಇಂಧನವಾಗಿ ಬಳಸಿದ ೭೨ಬೇಕರಿಗಳಿಂದ ವಾರ್ಷಿಕವಾಗಿ ೮೦೦೦೦ ಕೆ.ಜಿ. ೨.೫ಪಿಎಂ ಮಾಲಿನ್ಯ ಕಣಗಳನ್ನು ಹೊರಸೂಸುತ್ತಿವೆಯಂತೆ. ಹೀಗೆ ಹೊರಸೂಸಿದ ಮಾಲಿನ್ಯದ ಕಣಗಳು ಉಸಿರಾಟದ ಮೂಲಕ ಮನುಷ್ಯನ ದೇಹ ಸೇರಿದರೆ ಅದು ಐದು ಬಿಲಿಯನ್ ಸಿಗರೇಟು ಸೇದಿದಷ್ಟಾಗುತ್ತದೆ ಅಂದರೆ ಮಾಲಿನ್ಯದ ಅಘಾದತೆ ಎಷ್ಟಿದೆಯೆಂದು ಊಹಿಸಬಹುದು. ಆದ್ದರಿಂದ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಧಾರ ಬೇಕರಿ ಉದ್ಯಮದ ಮೇಲೆ ಹಲವಾರು ಸವಾಲುಗಳನ್ನು ತಂದೊಡ್ಡಬಹುದು. ಉದಾಹರಣೆಗೆ ವಿದ್ಯುತ್ ಅಥವಾ ಗ್ಯಾಸ್ ಆಧಾರಿತ ಪರ್ಯಾಯ ಇಂಧನದ ಮೊರೆ ಹೋಗಬೇಕಾದರೆ ಸುಸಜ್ಜಿತವಾದ ಓವನ್‌ಗಳು ಬೇಕಾಗಬಹುದು, ಆಗ ಪಾವ್ ತಯಾರಿಸುವ ಒಟ್ಟಾರೆ ವೆಚ್ಚವು ಮೇಲೇರಬಹುದು. ಆಗ ಬಡವರ ಬರ್ಗರ್ ಎಂದೇ ಖ್ಯಾತಿ ಹೊಂದಿರುವ ವಡಾ ಪಾವ್ ಬೆಲೆಯೂ ಮೇಲೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ಮುಂಬೈ ನಗರಿಯಲ್ಲಿ ಮೂರು ಹೊತ್ತು ಕೇವಲ ಹತ್ತು ರೂಪಾಯಿಗೆ ವಡಾ ಪಾವ್ ಅನ್ನು ಸವಿದು ಹೊಟ್ಟೆ ತುಂಬಿಸಿಕೊಳ್ಳುವ ಅಸಂಖ್ಯಾತ ಜನರಿದ್ದಾರೆ. ಕೆಲವೊಂದು ಕಡೆ ಮಕ್ಕಳು ಶಾಲೆಯ ಸಮವಸ್ತç ಧರಿಸಿ ಹೋದರೆ ಅವರಿಗೆ ಅರ್ಧದಷ್ಟು ಬೆಲೆಯಲ್ಲಿ ವಡಾ ಪಾವ್ ಕೊಡುವ ಪರಿಪಾಠವು ಇದೆ. ಒಟ್ಟಿನಲ್ಲಿ ಮುಂಬೈ ಮಹಾನಗರದ ಬಡವರ ಬರ್ಗರ್‌ಗೆ ಮಾಲಿನ್ಯದ ಛಾಯೆ ಆವರಿಸಿಕೊಂಡಿದೆ. ಇದು ನಮ್ಮ ಕರ್ನಾಟಕದ ಮಂಡಕ್ಕಿ ಭಟ್ಟಿಗಳ ನೆನಪು ಮಾಡಿ ಕೊಟ್ಟರೆ ಆಶ್ಚರ್ಯವಿಲ್ಲ. ಹಿಂದೊಮ್ಮೆ ಮಂಡಕ್ಕಿ ಬಟ್ಟಿಗಳಲ್ಲಿ ಮಂಡಕ್ಕಿ ತಯಾರಿಸಲು ಸವಕಳಿ ಹೊಂದಿದ ಟೈಯರ್ ಬಳಸುತ್ತಾರೆಂಬ ಕೂಗು ಕೇಳಿ ಬಂದದ್ದು ನೆನಪು ಮಾಡಿಕೊಳ್ಳಬಹುದು. ಅದೇನೇ ಇರಲಿ ವಡಾಕ್ಕೂ ಭಾಜಿಗೂ ಸಂಬಂಧ ಕಲ್ಪಿಸುವ ಪಾವ್ ಅಸಲಿಗೆ ಪೋರ್ಚುಗೀಸರ ಕೊಡುಗೆ. ಕಾಲ ಕ್ರಮೇಣ ಅದು ಭಾಜಿಯೊಂದಿಗೆ ಮಿಳಿತಗೊಂಡಿತು. ಅದು ಹೇಗೆ ಎಂದರೆ ಅದರದೇ ಆದ ಕಾರಣಗಳಿವೆ. ಬಟ್ಟೆ ಗಿರಣಿಗಳಲ್ಲಿ ಕಾರ್ಮಿಕರಿಗಾಗಿಯೇ ತಯಾರಿಸಿದ ತಿಂಡಿ ಪಾವ್ ಭಾಜಿ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ, ಆದರೆ ವಡಾ ಪಾವ್‌ನ ಜನಕರಾರು ಎಂದು ಕೇಳಿದರೆ ಕೇಳಿ ಬರುವ ಹೆಸರು ಅಶೋಕ ವೈದ್ಯ. ದಾದರ್‌ನ ರೈಲ್ವೆ ಸ್ಟೇಷನ್ನಿನ ಆಸು ಪಾಸಿನಲ್ಲಿ ಅವಲಕ್ಕಿ, ಕ್ಷೀರಾ ಮಾರುತ್ತಿದ್ದ ವೈದ್ಯ ಬಟಾಟ ವಡವನ್ನು ಪರಿಚಯಿಸಿದ್ದರು. ಆ ಬಟಾಟ ವಡವನ್ನು ತಿನ್ನುತ್ತಿದ್ದ ಮಂದಿ ಬಟಾಟ ವಡವನ್ನು ಚಪ್ಪರಿಸಿ ತಿನ್ನುತ್ತಿದ್ದರು. ಆದರೆ ವೈದ್ಯರಿಗೆ ಹಾಗೂ ಗ್ರಾಹಕರಿಗೆ ಇದರಲ್ಲೇನೋ ಮಿಸ್ಸಿಂಗ್ ಅನಿಸುತ್ತಿತ್ತಂತೆ. ಆಗ ವೈದ್ಯರು ಬಿಸಿ ಬಿಸಿ ಬಟಾಟ ವಡೆಯನ್ನು ತುಪ್ಪ ಸವರಿದ ಪಾವ್‌ನ ಮಧ್ಯೆ ಇಟ್ಟು ಕೊಟ್ಟಾಗ “ಅಗಧಿ ಚಾನ್” (ಉತ್ತಮ ಎಂದು) ಬಾಯಿ ಚಪ್ಪರಿಸಿ ತಿನ್ನಲು ಪ್ರಾರಂಭಿಸಿದರಂತೆ, ಅಂದಿನಿಂದ ವೈದ್ಯರಾಗಲೀ, ವಡಾ ಪಾವ್ ಆಗಲಿ ಹಿಂತಿರುಗಿ ನೋಡಿಲ್ಲ.
ಈ ವಡಾಪಾವ್ ಅನ್ನು ಮುಂಬೈಕರ್‌ರ ಮನದಾಳದಲ್ಲಿ ಇನ್ನಷ್ಟು ಅಚ್ಚಳಿಸುವಂತೆ, ಗಲ್ಲಿ ಗಲ್ಲಿಗಳಲ್ಲಿ ಸುಲಭವಾಗಿ ಸಿಗುವಂತೆ ಮಾಡಿದ ಕೀರ್ತಿ ಶಿವಸೇನೆಯ ಬಾಳ ಠಾಕ್ರೆ ಅವರಿಗೂ ಸಲ್ಲುತ್ತದೆ. ಗಲ್ಲಿ ಗಲ್ಲಿಗಳಲ್ಲಿ ಸೇನೆಯ ಶಾಖೆಗಳನ್ನು ತೆರೆದು ಅಲ್ಲೊಂದು ಉದ್ಯೋಗ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ಉದ್ಯೋಗದಾತರಿಗೂ ಉದ್ಯೋಗದ ಆಕಾಂಕ್ಷಿಗಳ ಮಧ್ಯೆ ಉದ್ಯೋಗ ಒದಗಿಸುವ ಸಂಪರ್ಕ ಸೇತುವಾಗಿ ಶಿವಸೇನಾ ಕೆಲಸ ಮಾಡಿತ್ತು. ಅಂತಹ ಸಂದರ್ಭದಲ್ಲಿ ಠಾಕ್ರೆ ಕಂಡುಕೊಂಡ ಸತ್ಯ ಎಲ್ಲರಿಗೂ ಉದ್ಯೋಗ ಒದಗಿಸುವುದು ಕಷ್ಟದ ಕೆಲಸ ಎಂದು.
ಆಗಲೇ ಠಾಕ್ರೆ ಯುವಕರಿಗೆ ಶಿವಸೇನೆಯ ಮೂಲಕ ಒಂದಿಷ್ಟು ಹಣವನ್ನು ಕೊಟ್ಟು ಬೀದಿ ಬದಿಯಲ್ಲಿ ವಡಾ ಪಾವ್ ತಳ್ಳು ಗಾಡಿಗಳನ್ನೂ ತೆರೆಯಲು ಪ್ರೋತ್ಸಾಹ ನೀಡಿತು. ಪರಿಣಾಮವಾಗಿ ವಡಾ ಪಾವ್ ಅಂದರೆ ಮುಂಬೈ, ಮುಂಬೈ ಅಂದರೆ ವಡಾ ಪಾವ್ ಎಂಬಂತಾಯಿತು. ಬಟ್ಟೆ ಗಿರಣಿಗಳು ಬಾಗಿಲು ಮುಚ್ಚಿದ್ದವು, ಯುವಕರಿಗೆ ಕೆಲಸವಿರಲಿಲ್ಲ, ವಡಾ ಪಾವ್ ತಳ್ಳುಗಾಡಿಗೆ ಅಷ್ಟೊಂದು ಬಂಡವಾಳ ಬೇಕಿರಲಿಲ್ಲ ವಡಾ ಪಾವ್ ಯುವಕರನ್ನು ಕೈ ಬೀಸಿ ಕರೆಯಿತು. ಅಲ್ಲದೆ ಹಲವಾರು ಜನರ ಹಸಿವನ್ನು ನೀಗಿಸಿತು. ಅದೇನೇ ಇರಲಿ ಪಾವ್, ಭಾಜಿ ಹಾಗೂ ಬಟಾಟ ವಡಕ್ಕೊಂದು ಮೆರಗು ತಂದು ಕೊಟ್ಟಿದೆ, ಹಸಿದ ಹೊಟ್ಟೆ ತಣ್ಣಗಾಗಿಸಿದೆ. ಪಾವ್ ಮಾರುವ ಬೇಕರಿ ಉದ್ಯಮ ಹೊಸ ಸವಾಲುಗಳ ಹೊಸ್ತಿಲಲ್ಲಿ ಬಂದು ನಿಂತಿದೆ. ಒಮ್ಮೆಗೆ ಪರ್ಯಾಯ ಇಂಧನದ ಬಳಕೆ ಅಂದರೆ ಕಷ್ಟವಾದೀತು. ಹಾಗೆಂದು ಪಾಲಿಕೆಗಳು ಹಾಗೂ ಸರ್ಕಾರ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಬದಲಾವಣೆ ಜಗದ ನಿಯಮ. ಉಚಿತ ಖಚಿತದ ಯುಗದಲ್ಲಿ ಗ್ಯಾರಂಟೀ ಬದಲಿಗೆ ದುಡಿಯುವ ಕೈಗಳಿಗೆ ಕೆಲಸ ಕೊಡುವ ಬೇಕರಿಗಳಿಗೊಂದಿಷ್ಟು ಸಬ್ಸಿಡಿಯನ್ನು ಕೊಟ್ಟರೆ ಬೇಕರಿಗಳು ಸುಸ್ಥಿರವಾದೀತು, ಬಡವನ ಹೊಟ್ಟೆ ತಣ್ಣಗಾದೀತು.

Previous articleಸ್ಮಾರ್ಟ್ ಮೀಟರ್ ಸುತ್ತ ಅನುಮಾನದ ಹುತ್ತ
Next articleಪ್ರಾಣಿಗಳಿಗೆ ಮನುಷ್ಯ ಜ್ವರ