ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕ್ರಮ ಆಗಲೇಬೇಕು

0
17

ರಾಜ್ಯದಲ್ಲಿ ಹಲವು ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿಗಾಗಿ ನೀಡುತ್ತಿರುವ ಕಿರುಕುಳ ತಾಳಲಾರದೆ ಮಹಿಳೆಯರು ಗ್ರಾಮವನ್ನೇ ತ್ಯಜಿಸಿದ ಘಟನೆಗಳು ನಡೆದಿವೆ. ಬ್ಯಾಂಕ್‌ನಿಂದ ಸಾಲ ಪಡೆಯಬೇಕೆಂದರೆ ನೂರೆಂಟು ದಾಖಲೆಗಳನ್ನು ಸಲ್ಲಿಸಬೇಕು. ಸಾಲಕ್ಕೆ ಶ್ಯೂರಿಟಿ ಬೇಕು. ಆಸ್ತಿ ಇರಬೇಕು. ಬಡವರ ಬಳಿ ಏನೂ ಇರುವುದಿಲ್ಲ. ಮೈಕ್ರೋ ಫೈನಾನ್ಸ್ನವರು ಆಧಾರ್ ಕಾರ್ಡ್ ಆಧಾರದ ಮೇಲೆ ಸಾಲ ಕೊಡುತ್ತಾರೆ. ಖಾಲಿ ಚೆಕ್‌ಗಳಿಗೆ ಸಹಿ ಮಾಡಿಕೊಡಬೇಕು. ಪ್ರತಿ ವಾರ ಕಂತು ಪಾವತಿ ಮಾಡಬೇಕು. ಒಂದು ವಾರ ತಪ್ಪಿದರೂ ಬಡ್ಡಿ ಅಧಿಕಗೊಳ್ಳುತ್ತದೆ. ರಿಸರ್ವ್ ಬ್ಯಾಂಕ್ ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಅದರಂತೆ ಯಾವ ಸಂಸ್ಥೆಗಳು ನಡೆದುಕೊಳ್ಳುತ್ತಿಲ್ಲ. ಸಾಲ ಪಡೆದವರಲ್ಲಿ ಗ್ರಾಮೀಣ ಮಹಿಳೆಯರೇ ಹೆಚ್ಚು. ಅವರು ೩-೪ ಸಂಸ್ಥೆಗಳಿಂದ ಸಾಲ ಪಡೆದಿರುತ್ತಾರೆ. ಸಾಲ ಮರುಪಾವತಿ ಬಂದಾಗ ಅವರ ಬಳಿ ಹಣ ಇರುವುದಿಲ್ಲ. ಸಂಸ್ಥೆಗಳು ಸಾಲ ವಸೂಲಿಗೆ ಗುಂಡಾಗಳನ್ನು ನೇಮಿಸಿಕೊಳ್ಳುವುದುಂಟು. ಇದರಿಂದ ಮನೆಯಲ್ಲಿ ಇರುವುದು ಕಷ್ಟವಾಗುತ್ತದೆ. ಹಾವೇರಿಯಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಪೊಲೀಸರ ಬಳಿ ದೂರು ದಾಖಲಾಗಿದೆ. ಚಾಮರಾಜನಗರದ ಕೆಲವು ಗ್ರಾಮಗಳಲ್ಲಿ ಜನ ಮನೆಗಳಿಗೆ ಬೀಗ ಹಾಕಿ ಗ್ರಾಮವನ್ನೇ ಬಿಟ್ಟು ಹೋಗಿದ್ದಾರೆ. ಈಗ ಜಿಲ್ಲಾಧಿಕಾರಿ, ತಹಸೀಲ್ದಾರ್ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಛತ್ತೀಸಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೇರವಾಗಿ ಸರ್ಕಾರದ ಅಧೀನಕ್ಕೆ ಬರುವುದಿಲ್ಲ. ರಿಸರ್ವ್ ಬ್ಯಾಂಕ್ ಕೂಡ ಇವುಗಳ ಮೇಲೆ ಹಿಡಿತ ಹೊಂದಿಲ್ಲ. ಇವುಗಳು ತಪ್ಪು ಮಾಡಿದಾಗ ಮಾತ್ರ ಕ್ರಮ ಕೈಗೊಳ್ಳುವ ಅಧಿಕಾರ ಇದೆ. ಕೆಲವು ಲಾಭರಹಿತ ಸಂಸ್ಥೆಗಳೂ ಕಿರು ಸಾಲ ನೀಡುವ ಯೋಜನೆ ಕೈಗೊಂಡಿದೆ. ಇವುಗಳಿಗೆ ಕೆಲವು ರಿಯಾಯಿತಿಯನ್ನು ಆರ್‌ಬಿಐ ನೀಡಿದೆ.
ಆರ್‌ಬಿಐ ನಿಯಮಗಳನ್ನು ಪಾಲಿಸಿದರೆ ಸಮಸ್ಯೆ ಬರುವುದೇ ಇಲ್ಲ. ಇಡೀ ಕುಟುಂಬದ ಎಲ್ಲ ಸದಸ್ಯರ ಒಟ್ಟು ಆದಾಯದಲ್ಲಿ ಶೇ. ೫೦ರಷ್ಟು ಸಾಲ ಕೊಡಬಹುದು. ೨೦ ಸಾವಿರ ರೂ. ನೀಡಿದರೆ ೯೭೦ ರೂ. ಮಾಸಿಕ ಕಂತು ಸಂಗ್ರಹಿಸಬಹುದು ಎಂದು ಆರ್‌ಬಿಐ ಪಟ್ಟಿಯನ್ನೇ ನೀಡಿದೆ. ಅಲ್ಲದೆ ಆಸ್ತಿಯ ಒಟ್ಟು ಮೌಲ್ಯದಲ್ಲಿ ಶೇ. ೭೫ ರಷ್ಟು ಮಾತ್ರ ಸಾಲಕ್ಕೆ ಅರ್ಹ. ಇದೆಲ್ಲ ಸ್ಪಷ್ಟವಾಗಿ ನೀತಿಯಲ್ಲಿ ನಮೂದಿತವಾಗಿದ್ದರೂ ಪಾಲನೆ ಮಾತ್ರ ಆಗುತ್ತಿಲ್ಲ. ಬಡವರು ಸಾಲ ಪಡೆಯುವಾಗ ಎಲ್ಲ ಷರತ್ತುಗಳಿಗೂ ಸಹಿ ಮಾಡುತ್ತಾರೆ. ಸಾಲ ವಸೂಲಿಗೆ ಬಂದಾಗ ನಿಜ ಸ್ಥಿತಿ ತಿಳಿಯುತ್ತದೆ. ಆದರೆ ವಸೂಲಿಗೆ ಬಂದವರು ಕಂತು ಉಳಿಸಿಕೊಂಡವರ ಕಷ್ಟ ಕೇಳುತ್ತ ಕುಳಿತುಕೊಳ್ಳುವುದಿಲ್ಲ. ಮೊದಲು ಕಂತು ಪಾವತಿ ಮಾಡಿ ಎಂದು ಮನೆಯ ಮುಂದೆ ಕುಳಿತುಕೊಳ್ಳುತ್ತಾರೆ. ಜನರ ಮುಂದೆ ಮಾನ ಮರ್ಯಾದೆ ಹೋಗುತ್ತದೆ ಎಂದು ಸಾಲ ತೆಗೆದುಕೊಂಡವರು ಏನನ್ನಾದರೂ ಮಾರಿ ಸಾಲ ತೀರಿಸಬೇಕಾದ ಪರಿಸ್ಥಿತಿ ಬರುತ್ತದೆ. ಸಾಲ ತೀರಿಸಲು ಆಗದವರು ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾರೆ. ಇದು ವಾಸ್ತವ ಸಂಗತಿ. ಎಲ್ಲ ಸರ್ಕಾರಗಳು ಈ ವಿಷಯದಲ್ಲಿ ಕೈಚೆಲ್ಲಿ ಕುಳಿತಿವೆ. ಬ್ಯಾಂಕ್‌ಗಳಲ್ಲಿ ಕಿರು ಸಾಲಕ್ಕೆ ಸರಳ ನಿಯಮ ಜಾರಿಗೆ ತಂದಲ್ಲಿ ಮಾತ್ರ ಮೈಕ್ರೋ ಫೈನಾನ್ಸ್ ಕಾಟವನ್ನು ತಪ್ಪಿಸಬಹುದು. ಸಣ್ಣ ಪುಟ್ಟ ಸಾಲ ಸುಲಭವಾಗಿ ಸಿಗುತ್ತದೆ ಎಂದರೆ ಬಡವರು ಖಾಸಗಿಯವರ ಬಳಿ ಹೋಗುವುದನ್ನು ತಪ್ಪಿಸಬಹುದು. ಇದಕ್ಕೆ ಸರ್ಕಾರ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಹಿಂದೆ ಜನಾರ್ಧನ ಪೂಜಾರಿ ವಿಶೇಷ ವ್ಯವಸ್ಥೆ ಮಾಡಿದ್ದರು. ನಂತರದ ದಿನಗಳಲ್ಲಿ ಅದು ನಿಂತು ಹೋಯಿತು. ಬ್ಯಾಂಕ್‌ಗಳಲ್ಲಿ ಶ್ರೀಮಂತರು ಎಷ್ಟೇ ಸಾಲ ಉಳಿಸಿಕೊಂಡರೂ ಯಾರೂ ಅದರ ಬಗ್ಗೆ ಚಿಂತಿಸುವುದಿಲ್ಲ. ಅವರ ಆಸ್ತಿ ಆಧಾರವಾಗಿರುತ್ತದೆ. ಬಡವರ ಬಳಿ ಏನೂ ಇರುವುದಿಲ್ಲ. ಅವರು ದುಡಿದೇ ಸಾಲ ಮರುಪಾವತಿ ಮಾಡಬೇಕು. ಕೆಲವು ಸಂದರ್ಭಗಳಲ್ಲಿ ಸಾಲದ ಕಂತು ಪಾವತಿಸಲು ಸಾಧ್ಯವಾಗುವುದಿಲ್ಲ. ಆಗ ಅವರು ಎಲ್ಲವನ್ನೂ ಕಳೆದುಕೊಳ್ಳುವುದು ಅನಿವಾರ್ಯವಾಗಲಿದೆ. ಹಿಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಬಡವರ ಖಾಸಗಿ ಸಾಲ ಮನ್ನಾ ಮಾಡುವ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ರೀತಿ ಬಡವರ ಸಾಲ ಮನ್ನಾ ಮಾಡುವುದನ್ನು ಯಾವ ಸರ್ಕಾರವೂ ಒಪ್ಪುವುದಿಲ್ಲ. ಅದರಿಂದ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಹೆಚ್ಚಿನ ದಾಖಲೆಗಳನ್ನು ಕೇಳದೆ ಕಿರುಸಾಲದ ವ್ಯವಸ್ಥೆ ಮಾಡುವುದಂತೂ ಅನಿವಾರ್ಯವಾಗಿದೆ. ಬೆಳಗ್ಗೆ ಸಾಲ ಪಡೆದು ಸಂಜೆ ಹಿಂತಿರುಗಿಸಿದರೆ ಬಡ್ಡಿ ಇಲ್ಲ ಎಂಬ ವ್ಯವಸ್ಥೆಯನ್ನು ಸರ್ಕಾರ ಮಾಡಿದರೆ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಬದುಕು ಹಸನಾಗುವುದರಲ್ಲಿ ಸಂದೇಹವಿಲ್ಲ. ಆಂಧ್ರ ಪ್ರದೇಶದಲ್ಲಿ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿದೆ. ಇದರಿಂದ ಅಲ್ಲಿ ಸಾಲ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಇಳಿಮುಖಗೊಂಡಿದೆ.

Previous articleಕಲಬುರಗಿ: ದರೋಡೆಕೋರನ ಮೇಲೆ ಫೈರಿಂಗ್
Next articleನೋಡಿರಿ… ಖುಷಿಪಡಿರಿ