ನೇಮೋತ್ಸವಕ್ಕೆ ತಡೆ ತಂದ ವ್ಯಕ್ತಿ ಕುಸಿದು ಬಿದ್ದು ಸಾವು…
‘ಕಾಂತಾರ’ ಹೋಲುವ ಘಟನೆ

0
28
ಜಾರಂದಾಯ ದೈವಸ್ಥಾನ

ಮಂಗಳೂರು: ಜನಮನ ಗೆದ್ದ ‘ಕಾಂತಾರ’ ಸಿನಿಮಾದ ದೃಶ್ಯವನ್ನು ಹೋಲುವ ಘಟನೆಯೊಂದು ಉಡುಪಿ ಜಿಲ್ಲೆ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ನಡೆದಿದೆ.
ಸುಮಾರು ೫೦೦ ವರ್ಷ ಇತಿಹಾಸ ಇರುವ ಜಾರಂದಾಯ ದೈವಸ್ಥಾನದ ವಿರುದ್ಧ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಮರುದಿನವೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದು ದೈವದ ಶಕ್ತಿ ಎಂದು ಊರಿನವರ ನಂಬಿಕೆ.
ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಮೂಲ. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯ ನೇಮೋತ್ಸವ ನಡೆಯುತ್ತಿದ್ದು, ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನವನ್ನು ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಅವರು ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಹಪಾಹಪಿಯಿಂದ ಪ್ರತ್ಯೇಕ ೫ ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇಲ್ಲಿಯ ಸಾನದ(ದೈವಸ್ಥಾನ) ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸಿದ್ದರು.
ಪ್ರತಿ ವರ್ಷದಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ ೭ ರಂದು ಕೋಲ ನಡೆಸಲು ನಿರ್ಧರಿಸಿತ್ತು. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಅವರು ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಆಚ್ಚರಿ ಎಂದರೆ ಡಿ. ೨೩ಕ್ಕೆ ತಡೆಯಾಜ್ಞೆ ತಂದ ಜಯ ಪೂಜಾರಿ, ಡಿ. ೨೪ ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಮೀಪದಲ್ಲೇ ತಂಬಿಲ ಸೇವೆ ನಡೆಯುತ್ತಿದ್ದ ವೇಳೆ ಇವರು ಎಲ್ಲರೆದುರೇ ಸಾವನ್ನಪ್ಪಿದ್ದರು. ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ಈ ಆಕಸ್ಮಿಕ ಸಾವನ್ನು ನೋಡಿದ ಊರಿನ ಜನ ಇದು ಜಾರಂದಾಯ ದೈವದ ಮಹಿಮೆ ಎನ್ನುತ್ತಿದ್ದಾರೆ.

Previous articleಕೆಎಲ್‌ಇ ಕೋರೆ ಆಸ್ಪತ್ರೆಯಲ್ಲಿ ಎರಡನೇ ಯಶಸ್ವಿ ಯಕೃತ್ತು ಕಸಿ
Next articleಅಜ್ಜನ ಜಾತ್ರೆಗೆ 6 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆ ರವಾನೆ