ದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆಗಾಗಿ ತರಗತಿಗೆ ರಜೆ: ಸಾಮಾಜಿಕ ಜಾಲತಾಣಗಳಲ್ಲಿ ವಿವಾದ

0
28

ಬಾಗಲಕೋಟೆ: ಲವ್‌ ಜಿಹಾದ್‌ನ ಕರಾಳ ಮುಖ ಅನಾವರಣಗೊಳಿಸಿರುವ ದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆಗಾಗಿ ತರಗತಿಗಳನ್ನು ರದ್ದುಪಡಿಸಿ ಆದೇಶಿಸಿ ಅದು ವಿವಾದವಾಗುತ್ತಿದ್ದಂತೆ ಆದೇಶವನ್ನು ಕಾಲೇಜಿನ ಪ್ರಾಂಶುಪಾಲರು ಹಿಂಪಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇಳಕಲ್ ನಗರದ ಶ್ರೀವಿಜಯಮಹಾಂತೇಶ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಾಸ್ ಅವರು ಮಧ್ಯಾಹ್ನದ ಪ್ರದರ್ಶನ ವೀಕ್ಷಣೆಗೆ ಮಧ್ಯಾಹ್ನದ ತರಗತಿಗಳಿಗೆ ರಜೆ ಘೋಷಿಸಿ ಕಾಲೇಜಿನ ನೋಟಿಸ್ ಬೋರ್ಡ್ನಲ್ಲಿ ಅಳವಡಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದಂತೆ ಎಚ್ಚೆತ್ತುಕೊಂಡು ಪ್ರಾಂಶುಪಾಲರು ಕೂಡಲೇ ಆದೇಶವನ್ನು ಹಿಂಪಡೆದು ತರಗತಿಗಳು ಎಂದಿನಂತೆ ನಡೆಸಲು ತೀರ್ಮಾನಿಸಿ ಮರು ಆದೇಶ ಹೊರಡಿಸಿದರು.
ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿನಿಯರು ಇಳಕಲ್ಲಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ಮಧ್ಯಾಹ್ನ ೧೨ ಗಂಟೆಯ ಉಚಿತ ಪ್ರದರ್ಶನಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸಬೇಕೆಂದು ಆದೇಶಿಸಿದ್ದರು. ಇನ್ನು ಈ ಕುರಿತು ತಹಶಿಲ್ದಾರ ಬಸವರಾಜ ನಳವಂಕಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನಮ್ಮ ಗಮನಕ್ಕೆ ಬಂದಾಗ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಲಾಗಿದೆ. ಅವರು ಅಚಾತುರ್ಯದಿಂದ ಹೀಗೆ ಆಗಿದೆ ಎಂದು ಹೇಳಿ ಆದೇಶ ಹಿಂಪಡೆದಿದ್ದು ಎಂದಿನಂತೆ ತರಗತಿಗಳು ನಡೆದಿರುವುದಾಗಿ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲೂ ಪ್ರದರ್ಶನ:
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ದಿ ಕೇರಳ ಸ್ಟೋರಿ ಮೂರು ದಿನಗಳ ಕಾಲ ಪ್ರತಿದಿನ ಒಂದು ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಬುಧವಾರ ಮಧ್ಯಾಹ್ನ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಪ್ರದರ್ಶವನ್ನು ಏರ್ಪಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಣೆಯಿಂದ ಚಿತ್ರ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಜನ ಚಿತ್ರ ವೀಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

Previous articleಗೊಬ್ಬರ ಅಂಗಡಿಗೆ ಬೆಂಕಿ: ೨೦ ಲಕ್ಷ ರೂ.ಅಧಿಕ ಹಾನಿ
Next articleಸಿಡಿಲು ಬಡಿದು ರೈತ ಮಹಿಳೆ ಸಾವು