ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಮ್: ಅಮಿತ್ ಶಾ

0
13

ಬೆಳಗಾವಿ: ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಂ. ಮುಂಬರುವ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಒಂದಾಗಿ ಬಿಜೆಪಿ ಸೋಲಿಸಲು ಕಸರತ್ತು ನಡೆಸುತ್ತಿದ್ದು, ಈ ಎರಡು ಪಕ್ಷಗಳಿಗೆ ತಕ್ಕ ಪಾಠ ಕಲಿಸಿ ಬಹುಮತದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತರಬೇಕಾದ ಗುರುತರವಾದ ಜವಾಬ್ದಾರಿ ಕಿತ್ತೂರಿನ, ಉತ್ತರ ಕರ್ನಾಟಕದ ಮತದಾರರ ಮೇಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಎಂ.ಕೆ ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಪ್ಪ ಮಕ್ಕಳ ಪಕ್ಷ ಜೆಡಿಎಸ್‌ಗೆ ನೀವು ಒತ್ತುವ ಪ್ರತಿಯೊಂದು ಮತವೂ ಕಾಂಗ್ರೆಸ್‌ಗೆ ಸೇರಲಿದೆ. ಕರ್ನಾಟಕದ ಅಭಿವೃದ್ಧಿಯನ್ನು ಮರೆತ ಆ ಎರಡೂ ಪಕ್ಷಕ್ಕೆ ಸೋಲಿನ ರುಚಿ ನೀಡಿ ಅಭಿವೃದ್ಧಿ ಪರ್ವವನ್ನೇ ಜನರ ಮುಂದಿಟ್ಟ ಬಿಜೆಪಿಯನ್ನು ಗೆಲ್ಲಿಸುವಂತೆ ಅವರು ಕೋರಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ೧೧ನೇ ಸ್ಥಾನದಲ್ಲಿದ್ದ ಭಾರತವನ್ನು ಇಂದು ೫ನೇ ಸ್ಥಾನಕ್ಕೆ ಏರಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗಲ್ಲ; ಅವರನ್ನು ಗೆಲ್ಲಿಸಿ ಕಳುಹಿಸಿದ ದೇಶದ ಜನತೆಗೆ ಸಲ್ಲುತ್ತದೆ. ಜಿ-೨೦ ಸಮ್ಮೇಳನದಲ್ಲಿ ಮೋದಿಯವರು ಏನು ಮಾತನಾಡುತ್ತಾರೆ ಎಂಬುದನ್ನು ಕೇಳುವುದಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ದಿನದ ೧೮ ಗಂಟೆಯನ್ನೂ ದೇಶದ ಜನರ ಕೆಲಸಕ್ಕಾಗಿ ಮೀಸಲಿಡುವ ಇಂತಹ ಪ್ರಧಾನಿ ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟವಾಗಿದ್ದು, ಮತ್ತೊಮ್ಮೆ ಭಾರತೀಯ ಜನತಾ ಪಕ್ಷಕ್ಕೆ ಜನರ ಸೇವೆ ಮಾಡಲು ಅವಕಾಶ ನೀಡಬೇಕೆಂದರು.

Previous articleಉಗ್ರವಾದ ಪೋಷಿಸಿದ್ದೇ ಕಾಂಗ್ರೆಸ್..!
Next articleಮಹದಾಯಿ ನಮ್ಮ ಕೊಡುಗೆ