ಜರ್ಮನ್‌ನಲ್ಲಿ ವಿದ್ಯುತ್ ಅವಘಡ: ದಾವಣಗೆರೆಯ ಯುವಕ ಸಾವು

0
14
ಜರ್ಮನ್‌

ದಾವಣಗೆರೆ: ಜರ್ಮನಿ ದೇಶದ ಕೆಮ್‌ನಿಟ್ಜ್ ನಗರದಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ದಾವಣಗೆರೆಯ ಯುವಕ ಕೊನೆಯುಸಿರೆಳೆದ ಘಟನೆ ನಡೆದಿದ್ದು, ಸುಮಾರು 16 ದಿನಗಳ ಬಳಿಕ ಮೃತದೇಹ ದಾವಣಗೆರೆಗೆ ಬಂದಿದ್ದು, ಶುಕ್ರವಾರ ಮೂಲ ನಿವಾಸವಾದ ಹರಪನಹಳ್ಳಿ ತಾಲೂಕಿನ ಪುಣಬಘಟ್ಟೆ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ನಗರದ ಸರಸ್ವತಿ ಬಡಾವಣೆಯ ಪಂಚಮುಖ ರಸ್ತೆಯಲ್ಲಿ ವಾಸವಿರುವ ಶಿಕ್ಷಕ ದಂಪತಿ ಕೊಟ್ರಪ್ಪ ರೇವಪ್ಪ ಹಾಗೂ ಎ. ಇಂದಿರಮ್ಮರ ಪುತ್ರ ಸಂತೋಷ್ ಕುಮಾರ್ (35) ಮೃತಪಟ್ಟ ದುರ್ದೈವಿ.
ಕೆ.ರೇವಪ್ಪ, ಎ. ಆರ್. ಇಂದಿರಮ್ಮ ಇಬ್ಬರೂ ಶಿಕ್ಷಕರು. ದಾವಣಗೆರೆಯಲ್ಲಿ ರೇವಪ್ಪ ಶಿಕ್ಷಕರಾದರೆ, ಇಂದಿರಮ್ಮ ಆವರಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪುತ್ರನಾದ ಸಂತೋಷ್ ಜರ್ಮನಿಗೆ ಹೋಗಿದ್ದರು. ಅಲ್ಲಿನ ಕೆಮ್‌ನಿಟ್ಜ್ ನಗರದಲ್ಲಿ ಪಿಜಿಯೊಂದರಲ್ಲಿ ರೂಮ್ ಮಾಡಿಕೊಂಡಿದ್ದರು. ಎಂ. ಎಸ್. ಓದಿದ್ದ ಸಂತೋಷ್ ತರಬೇತಿ ಪಡೆಯುವ ಸಲುವಾಗಿ ಹೋಗಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ದಾವಣಗೆರೆಗೆ ಬಂದಿದ್ದ ಸಂತೋಷ್‌ಗೆ ಮದುವೆ ಪ್ರಸ್ತಾಪವನ್ನು ಹೆತ್ತವರು ಮುಂದಿಟ್ಟಿದ್ದರು. ಸಮ್ಮತಿಯೂ ಸೂಚಿಸಿದ್ದ ಸಂತೋಷ್ ಇಂದು ಅವರ ಆಶಯವನ್ನು ಹುಸಿಯಾಗಿಸಿ ಬಾರದೂರಿಗೆ ಹೋಗಿರುವುದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರೇವಪ್ಪ ಹಾಗೂ ಇಂದಿರಮ್ಮ ದಂಪತಿ ಮೊದಲ ಪುತ್ರ ಶ್ರೀಧರ್ ಕಳೆದ ಐದಾರು ವರ್ಷಗಳ ಹಿಂದೆ ಹೊಸದಾಗಿ ಖರೀದಿಸಿದ್ದ ರಾಯಲ್ ಎನ್‌ಫೀಲ್ಡ್‌ನಲ್ಲಿ ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಾಪಸ್ ಬರುವ ವೇಳೆ ಚನ್ನಗಿರಿಯ ನಲ್ಲೂರು ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ. ಈಗ ಎರಡನೇ ಪುತ್ರ ಕಳೆದುಕೊಂಡಿರುವ ದಂಪತಿಯ ನೋವು ಹೇಳತೀರದಂತಾಗಿದೆ.

ಜರ್ಮನಿಯಲ್ಲಿ ನಡೆದಿದ್ದೇನು?
ನವೆಂಬರ್ 29 ರ ರಾತ್ರಿ ಫುಟ್ಬಾಲ್ ಪಂದ್ಯ ಇದ್ದ ಕಾರಣ ರಾತ್ರಿ ಸಂತೋಷ್ ತಡವಾಗಿ ಮಲಗಿದ್ದ. ಆದರೆ, 30ರ ಬೆಳಿಗ್ಗೆ 7:15 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಹೊಗೆ ತುಂಬಿಕೊಂಡ ಕಾರಣ ಗಾಢ ನಿದ್ದೆಯಲ್ಲಿದ್ದ ಸಂತೋಷ್‌ಗೆ ಉಸಿರು ಕಟ್ಟಿದೆ. ಆಮ್ಲಜನಕ ಸಿಗದೇ ಒದ್ದಾಡಿದ್ದ ಸಂತೋಷ್, ಶೀತ ಗಾಳಿ ಹೆಚ್ಚಿರುವ ಕಾರಣ ರೂಂ ಬಾಗಿಲು ಸಂಪೂರ್ಣ ಬಂದ್ ಮಾಡಲಾಗಿತ್ತು. ಅಲ್ಲಿನ ಕಾವಲುಗಾರ ಆಸ್ಪತ್ರೆಗೆ ಕರೆದೊಯ್ದರೂ ಫಲನೀಡದೆ ಸಂತೋಷ್ ಉಸಿರು ಚೆಲ್ಲಿದ್ದಾರೆ.

Previous articleಹಳ್ಳಿಹಕ್ಕಿಗೆ ಕುಟುಕಿದ ಪ್ರಸಾದ
Next articleಪ್ರಾರ್ಥನಾ ಸ್ಥಳ ತೆರವಿಗೆ ಜ. 5ರ ಗಡುವು