ನವದೆಹಲಿ: “ಪರೀಕ್ಷೆ, ನಿಗಾ, ಚಿಕಿತ್ಸೆ, ವಾಕ್ಸಿನ್ ಮತ್ತು ಕೋವಿಡ್ ನಡವಳಿಕೆ ಅನುಸರಿಸುವುದನ್ನು” ಐದು ಪಟ್ಟು ಹೆಚ್ಚಿಸಬೇಕೆಂದು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ. ಕಳೆದ ತಿಂಗಳ ಎರಡನೇ ವಾರದಿಂದ ದೇಶವು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವನ್ನು ಕಂಡಿದೆ. ಇದರಿಂದಾಗಿ ಪಾಸಿಟಿವ್ ದರ ಶೇ 0.09 ದಿಂದ ಶೇ 1ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಎಲ್ಲ ರಾಜ್ಯಗಳು “ಪರೀಕ್ಷೆ, ನಿಗಾ, ಚಿಕಿತ್ಸೆ, ವಾಕ್ಸಿನ್ ಮತ್ತು ಕೋವಿಡ್ ನಡವಳಿಕೆ ಅನುಸರಿಸುವುದು” ಈ ಐದು ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಲಹೆ ನೀಡಿದೆ.