ಚಿಕ್ಕಮಗಳೂರು: ಬಂದೂಕಿನಿಂದ ಮೂವರ ಹತ್ಯೆ ಮಾಡಿ ತಾನೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಿಂದ ಕಾಫಿನಾಡು ಜಿಲ್ಲೆ ಬೆಚ್ಚಿಬಿದ್ದಿದೆ.
ಈ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಕಡಬಗೆರೆ ಸಮೀಪದ ಮಾಗಲು ಗ್ರಾಮದಲ್ಲಿ ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಪ್ರಕರಣದ ಆರೋಪಿ ರತ್ನಾಕರ್ ಎಂಬಾತನ ಅತ್ತೆ ಜ್ಯೋತಿ(೫೦), ನಾದಿನಿ ಸಿಂಧು(೨೬) ಹಾಗೂ ತನ್ನ ೭ ವರ್ಷದ ಮಗಳು ಮೌಲ್ಯಳನ್ನು ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಮಂಗಳವಾರ ರಾತ್ರಿ ಸುಮಾರು ೧೧ ಗಂಟೆಗೆ ಈ ಘಟನೆ ನಡೆದಿದೆ. ಹತ್ಯೆ ಮಾಡಿರುವ ಆರೋಪಿ ರತ್ನಾಕರಗೌಡ ಖಾಸಗಿ ಶಾಲೆಯೊಂದರಲ್ಲಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಮಾಗಲು ಗ್ರಾಮದ ಜ್ಯೋತಿ ಮನೆಗೆ ಹೋಗಿದ್ದ ರತ್ನಾಕರ್ ಕೌಟುಂಬಿಕ ಕಲಹದ ಬಗ್ಗೆ ಜ್ಯೋತಿ, ಸಿಂಧು, ಅವಿನಾಶ್ ಜೊತೆ ಜಗಳವಾಡಿ ನಾಲ್ವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಇದರಲ್ಲಿ ಅವಿನಾಶ್ ಮಾತ್ರ ಪಾರಾಗಿದ್ದು, ಉಳಿದ ಮೂವರು ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ. ನಂತರ ಅಲ್ಲಿಂದ ಎಸ್ಕೇಪ್ ಆದ ರತ್ನಾಕರ್ ಸ್ವಲ್ಪ ದೂರ ಹೋಗಿ ಅದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರತ್ನಾಕರ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಕೌಟುಂಬಿಕ ಸಮಸ್ಯೆಯ ಬಗ್ಗೆ ವಿಡಿಯೋ ಒಂದನ್ನು ಹಾಕಿದ್ದಾನೆ.
ಮೂರು ವರ್ಷಗಳಿಂದಲೇ ಕೌಟುಂಬಿಕ ವಿಚಾರವಾಗಿ ಸಮಸ್ಯೆ ಇರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ರತ್ನಾಕರ್ ಪತ್ನಿ ಸ್ವಾತಿ ಮಂಗಳೂರಿನಲ್ಲಿ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ಸ್ವಾತಿ ಮೇಲಿನ ಮನಸ್ತಾಪದಿಂದ ರತ್ನಾಕರ್ ಅತ್ತೆ ಜ್ಯೋತಿ ಮನೆಗೆ ಹೋಗಿ ನಿಮ್ಮಿಂದಲೇ ನನ್ನ ಸಂಸಾರ ಈ ರೀತಿಯಾಗಿರುವುದು ಎಂದು ಕೃತ್ಯ ಎಸಗಿದ್ದಾನೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಎಸ್ಪಿ ಡಾ.ವಿಕ್ರಮ್ ಅಮಟೆ, ಈ ಘಟನೆಯ ತನಿಖೆ ನಡೆಸಲು ಬೆಂಗಳೂರಿನಿಂದ ಎಫ್.ಎಸ್.ಎಲ್. ತಂಡವೂ ಆಗಮಿಸಿದೆ. ಪ್ರಾಥಮಿಕ ಹಂತದಲ್ಲಿ ಕೃತ್ಯಕ್ಕೆ ಬಳಸಿರುವ ಬಂದೂಕು ಸುಧಾರಿತ ಶಸ್ತ್ರಾಸ್ತ್ರ ಎಂದು ತಿಳಿದು ಬಂದಿರುವುದರೊಂದಿಗೆ ರತ್ನಾಕರ್ ಹೆಸರಿನಲ್ಲಿ ಗನ್‌ಲೈಸೆನ್ಸ್ ಇಲ್ಲ ಎಂಬ ಅಂಶ ಪತ್ತೆಯಾಗಿದೆ ಎಂದಿದ್ದಾರೆ .
ಕೃತ್ಯಕ್ಕೆ ಬಳಸಿದ ಬಂದೂಕು ಹಾಗೂ ಆರೋಪಿಯ ಮೊಬೈಲ್‌ನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತನಿಖೆಯ ನಂತರ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.