ಆರೋಗ್ಯದಲ್ಲೂ ರಾಜಕಾರಣದ ಚೆಲ್ಲಾಟ

0
15

ಅನ್ನ, ಅಕ್ಷರ ಆರೋಗ್ಯದ ವಿಷಯದಲ್ಲೂ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿರುವ ರಾಜ್ಯ

ಬೆಂಗಳೂರು: ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಹೇಳಿಕೆ ಬಡವರ ಆರೋಗ್ಯದಲ್ಲೂ ರಾಜಕಾರಣದ ಚೆಲ್ಲಾಟವಾಡುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದುಬಾರಿ ಔಷದಿಗಳು ಬಡಜನರ ಆರೋಗ್ಯದ ಹಕ್ಕು ಕಸಿಯಬಾರದು, ಜನಸಾಮಾನ್ಯರಿಗೂ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ದೊರಕಬೇಕೆಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧಿ ಕೇಂದ್ರ ಸ್ಥಾಪಿಸಿದರು. ಸದ್ಯ 8,900 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿಂದ ಪ್ರತಿದಿನ 20 ಲಕ್ಷ ಕ್ಕೂ ಹೆಚ್ಚು ಬಡ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಗಳಿಗೆ ಅನುಮತಿ ನೀಡುವುದಿಲ್ಲವೆಂಬ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಹೇಳಿಕೆ ಬಡವರ ಆರೋಗ್ಯದಲ್ಲೂ ರಾಜಕಾರಣದ ಚೆಲ್ಲಾಟವಾಡುವಂತಿದೆ. ಅನ್ನ, ಅಕ್ಷರ ಆರೋಗ್ಯದ ವಿಷಯದಲ್ಲೂ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿರುವ ರಾಜ್ಯದ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ನಡೆ ಮಾನವೀಯ ಮೌಲ್ಯವಿಲ್ಲದ ಜನವಿರೋಧಿಯಲ್ಲದೇ ಬೇರೇನೂ ಅಲ್ಲ. ಖಾಸಗಿ ಲಾಭಿಗಳ ಒತ್ತಡ ಹಾಗೂ ಪ್ರಭಾವಗಳಿಗೆ ಮಣಿದು ಬಡವರಿಗೆ ದ್ರೋಹ ಬಗೆಯಲು ಹೊರಟರೆ ಕರ್ನಾಟಕ ಬಿಜೆಪಿ ಕೈ ಕಟ್ಟಿ ಕೂರದು, ತಕ್ಷಣ ಸಚಿವರು ಹೇಳಿಕೆ ಹಿಂಪಡೆದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳಿಗೆ ಅಡ್ಡಿಪಡಿಸುವ ನಿಲುವನ್ನು ಬದಲಿಸಿಕೊಳ್ಳುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ.

Previous articleಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ
Next articleಮನೆ ಖಾಲಿ ಮಾಡಿದ ಜಗದೀಶ್ ಶೆಟ್ಟರ್