ʼಕರಿಮಣಿ ಮಾಲಿಕ ನೀನಲ್ಲʼ ಎಂದು ಗಂಡನಿಗೆ ವಿಷ ಹಾಕಿ ಕೊಂದ ಪತ್ನಿ

0
15

ಕಾರ್ಕಳ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ವಿಷ ಉಣಿಸಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಘಟನೆ ಕಾರ್ಕಳ ಅಜೆಕಾರಿನ ಮರ್ಣೆ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೀಡಾದವರನ್ನು ಬಾಲಕೃಷ್ಣ (೪೪) ಎಂದು ಗುರುತಿಸಲಾಗಿದೆ. ಇವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನದ ದಿಲೀಪ್ ಬಂಧಿತ ಆರೋಪಿಗಳು.
ರೀಲ್ಸ್ ಹುಚ್ಚು ಹಚ್ಚಿಕೊಂಡಿದ್ದ ಪ್ರತಿಮಾ ಫೇಸ್ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದಳು. ಅಲ್ಲದೇ ಗಂಡನೊಂದಿಗೆ ಕರಿಮಣಿ ಮಾಲಿಕ ನೀನಲ್ಲ ಎಂದು ರೀಲ್ಸ್‌ ಕೂಡ ಮಾಡಿದ್ದಳು. ಈಕೆಯ ರೀಲ್ಸ್‌ ಹುಚ್ಚಿಗೆ ಗಂಡ ಹಲವು ಬಾರಿ ಎಚ್ಚರಿಕೆ ಕೂಡ ಕೊಟ್ಟಿದ್ದರು ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ..
ಕಳೆದ ೨೫ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕೃಷ್ಣ ಅವರನ್ನು ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರು, ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಅ. ೧೯ರಂದು ಶನಿವಾರ ರಾತ್ರಿ ಮನೆಗೆ ಕರೆತರಲಾಗಿತ್ತು. ಮರುದಿನ ಅ. ೨೦ರಂದು ಬೆಳಗ್ಗಿನ ಜಾವ ೩.೩೦ರ ಹೊತ್ತಿಗೆ ಬಾಲಕೃಷ್ಣ ಅವರು ಮೃತಪಟ್ಟಿದ್ದಾರೆ. ದಿಢೀರ್ ಕಾಣಿಸಿಕೊಂಡ ಅನಾರೋಗ್ಯದಿಂದ ಬಾಲಕೃಷ್ಣ ಅವರು ಮೃತಪಟಿದ್ದರಿಂದ ಪ್ರತಿಮಾಳ ಅಣ್ಣ ಪದೇ ಪದೇ ವಿಚಾರಿಸಿದಾಗ ಸತ್ಯ ಬಯಲಾಗಿದೆ. ಪ್ರತಿಮಾ ಮತ್ತು ದಿಲೀಪ್ ತಮ್ಮ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಯೋಚಿಸಿದ್ದರು. ಯೋಜನೆಯಂತೆ ದಿಲೀಪನು ಯಾವುದೋ ವಿಷ ಪದಾರ್ಥ ತಂದು, ಅದನ್ನು ಊಟದಲ್ಲಿ ಬೆರೆಸಿ ಕೊಟ್ಟರೆ ನಿಧಾನವಾಗಿ ಸಾಯುತ್ತಾರೆ ಎಂದು ಹೇಳಿ ಕೊಟ್ಟಿದ್ದ. ಅದರಂತೆ ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿದ್ದೇನೆ. ನಂತರ ಬಾಲಕೃಷ್ಣ ಅವರಿಗೆ ಅಸೌಖ್ಯ ಉಂಟಾಗಿದ್ದು, ನಾನು ಹೇಳಿದಂತೆ ಅ. ೨೦ರಂದು ಬೆಳಗಿನ ಜಾವ ೧:೩೦ ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಬೆಡ್‌ಶೀಟ್‌ಅನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಪ್ರತಿಮಾ ಒಪ್ಪಿಕೊಂಡಿರುವುದಾಗಿ ಬಾಲಕೃಷ್ಣ ಅವರ ತಮ್ಮ ರಾಮಕೃಷ್ಣ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

Previous articleಬೆಳಗಾವಿ: ಮಕ್ಕಳ ಕಳ್ಳರ ಮೇಲೆ ಫೈರಿಂಗ್‌, ಪೊಲೀಸರಿಗೂ ಗಾಯ
Next articleಅನ್ಯ ಕೋಮಿನ ಯುವಕನ ಬೆದರಿಕೆಗೆ ಹಿಂದೂ ಯುವತಿ ಆತ್ಮಹತ್ಯೆ ಯತ್ನ