ಮುಂಬೈ: ವಾಹನ ಪ್ರಿಯರ ಕಾಯುವಿಕೆ ಮಂಗಳವಾರ ಅಂತ್ಯಗೊಂಡಿದೆ. ವಿದ್ಯುತ್ ಚಾಲಿತ ವಾಹನಗಳನ್ನು ತಯಾರು ಮಾಡುವ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮೊದಲ ಶೋ ರೂಂ ಲೋಕಾರ್ಪಣೆ ಮಾಡಿದೆ.
‘ಟೆಸ್ಲಾ’ ಅನುಭವ ಕೇಂದ್ರ ಎಂಬ ಹೆಸರಿನ ಶೋ ರೂಂ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ ಮಂಗಳವಾರ ಉದ್ಘಾಟಿಸಿದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಶೋ ರೂಂ ಇದೆ.
ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ಮೊದಲ ಶೋ ರೂಂ ತೆರೆದಿರುವ ‘ಟೆಸ್ಲಾ’ ಮಂಗಳವಾರ ‘ವೈ’ ಮಾದರಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮಳಿಗೆ ಉದ್ಘಾಟಿಸಿದ ದೇವೇಂದ್ರ ಫಡ್ನವೀಸ್ ಕಾರಿನಲ್ಲಿ ಕುಳಿತು ಅದರ ವಿಶೇಷತೆಗಳ ಕುರಿತು ಮಾಹಿತಿಯನ್ನು ಪಡೆದರು.
‘ಟೆಸ್ಲಾ’ ಭಾರತದ ಮೊದಲ ಮಳಿಗೆಯನ್ನು 4 ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ‘ಟೆಸ್ಲಾ’ ಅನುಭವ ಕೇಂದ್ರ ಎಂದು ಹೆಸರು ಇಡಲಾಗಿದೆ. ಮುಂದಿನ ದಿನಗಳಲ್ಲಿ ದೆಹಲಿ ಸೇರಿದಂತೆ ದೇಶದ ಇತರ ನಗರದಲ್ಲಿ ಮಳಿಗೆ ಆರಂಭಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಈಗ ಭಾರತದಲ್ಲಿ ‘ಟೆಸ್ಲಾ’ ಪರಿಚಯಿಸಿರುವ ‘ವೈ’ ಮಾದರಿ ಕಾರುಗಳ ಬೆಲೆ 60 ಲಕ್ಷ. ಹೆಚ್ಚು ದೂರ ಸಾಗುವ ಮಾಡೆಲ್-ವೈ ದರ 60.80 ಲಕ್ಷವಾಗಿದೆ. ಮೊದಲ ಮಳಿಗೆ ಉದ್ಘಾಟನೆಗೆ ಕಿಕ್ಕಿರಿದು ಜನರು ಸೇರಿದ್ದರು. ಎಲಾನ್ ಮಸ್ಕ್ ಒಡೆತನದ ಕಂಪನಿಯ ಕಾರುಗಳ ಬಗ್ಗೆ ತಿಳಿಯಲು ಜನರು ಉತ್ಸಾಹದಿಂದ ಕಾದಿದ್ದರು.
2025ರ ಮಾರ್ಚ್‌ನಲ್ಲಿ ಎಲಾನ್ ಮಸ್ಕ್ ಮುಂಬೈನಲ್ಲಿ ‘ಟೆಸ್ಲಾ’ದ ಮೊದಲ ಮಳಿಗೆ ತೆರೆಯಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಂದಿನಿಂದಲೂ ಜನರು ಕುತೂಹಲದಿಂದ ಟೆಸ್ಲಾ ಸ್ವಾಗತಿಸಲು ಕಾದಿದ್ದರು. ದೆಹಲಿಯ ಮಳಿಗೆಗಾಗಿ ಜಾಡ ಹುಡುಕಾಟ, ನೇಮಕಾತಿಯನ್ನು ಟೆಸ್ಲಾ ನಡೆಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಹಲವು ದಿನಗಳ ಹಿಂದೆಯೇ ‘ಟೆಸ್ಲಾ’ ಭಾರತದಲ್ಲಿ ಮಾಡೆಲ್-ವೈ ಮಾದರಿಯ ಕಾರುಗಳನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿತ್ತು. ಈಗ ನೂತನ ಮಳಿಗೆಗೆ ನೂರಾರು ಜನರು ಆಗಮಿಸುತ್ತಿದ್ದು, ಕಾರುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಟೆಸ್ಲಾ ಜಗತ್ತಿನ 3ನೇ ಅತಿದೊಡ್ಡ ಕಾರಿನ ಮಾರುಕಟ್ಟೆಯನ್ನು ಪ್ರವೇಶ ಮಾಡಿದೆ.8.58 ಕೋಟಿ ಮೌಲ್ಯದ ಕಾರು ಮತ್ತು ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಐದು ವರ್ಷಗಳ ಅವಧಿಗೆ ಜಾಗವನ್ನು ಬಾಡಿಗೆಗೆ ಪಡೆದು ಮಳಿಗೆ ಆರಂಭಿಸಲಾಗಿದೆ.