Home ತಾಜಾ ಸುದ್ದಿ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ, ಸ್ವಾಮೀಜಿಗಳಿಂದ ಸಭೆ!

ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ, ಸ್ವಾಮೀಜಿಗಳಿಂದ ಸಭೆ!

0

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟದ ನಡುವೆಯೇ ಕೂಡಲಸಂಗಮದಲ್ಲಿರುವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಬೀಗ ಜಡಿಯಲಾಗಿದೆ. ಇದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದು, ಪಂಚಮಸಾಲಿ ಸಮುದಾಯದ ಮುಖಂಡರ ಜೊತೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಭೆಯನ್ನು ನಡೆಸಿದರು.

ಮಂಗಳವಾರ ಮಾತನಾಡಿದ ಸ್ವಾಮೀಜಿ, “ಹುನಗುಂದದ ಬಸವ ಮಂಟಪಕ್ಕೆ ಬಂದೆ. ಮುಖಂಡರು ಹೇಗೆ ಹೇಳುತ್ತಾರೆಯೋ ಹಾಗೆ ಮುನ್ನಡೆಯುತ್ತೇನೆ. ಪೀಠಕ್ಕೆ ಹೋಗಿ ಎಂದರೇ ಹೋಗುತ್ತೇನೆ. ಇಲ್ಲದಿದ್ದರೇ ಭಕ್ತರ ಮನೆಯಲ್ಲಿರುತ್ತೇನೆ” ಎಂದು ಭಾವುಕರಾದರು.

ಕೂಡಲಸಂಗಮದಲ್ಲಿರುವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಭಾನುವಾರ ರಾತ್ರಿ ಪೀಠಕ್ಕೆ ಬೀಗ ಹಾಕಲಾಗಿದೆ. ಯಾವ ಕಾರಣಕ್ಕಾಗಿ ಬೀಗ ಹಾಕಲಾಗಿದೆ? ಎಂಬುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತ ಹೆಚ್ಚಿನ ಬಂದೋಬಸ್ತ್‌ ಮಾಡಿದ್ದರು.

ಮಂಗಳವಾರ ನಡೆದ ಸಭೆಯಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿದೆ. ಈ ಘಟನೆ ಕುರಿತು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ, ಶಾಸಕ ವಿಜಯನಂದ್​ ಕಾಶಪ್ಪನವರ್ ಕಡೆಯುವರು ‌ಪೀಠಕ್ಕೆ ಸಿಸಿಟಿವಿ ಅಳವಡಿಸಿದ್ದಾರೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಛಾಟಿಸಿದ ನಂತರ ಅವರ ಪರವಾಗಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕಾಗಿ ಅಖಿಲ ಭಾರತ ಪಂಚಮಸಾಲಿ ಸಮಾಜದ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಶ್ರೀಗಳನ್ನು ಪೀಠದಿಂದ ಉಚ್ಛಾಟಿಸುವುದಾಗಿ ಹೇಳಿದ್ದರು. ಆದರೆ ಸಮಾಜದ ಹಿರಿಯರ ಮಧ್ಯಸ್ಥಿಕೆಯಿಂದ ಪ್ರಕರಣ ತಿಳಿಯಾಗಿತ್ತು.

ಆದರೆ ಈಗ ಏಕಾಏಕಿ ಮಠಕ್ಕೆ ಬೀಗ ಹಾಕಿರುವುದು ಯಾರು?, ಏಕೆ? ಎಂಬುದು ಚರ್ಚೆಯ ವಿಚಾರವಾಗಿದೆ. ಸೋಮವಾರ ಪೀಠಕ್ಕೆ ಹಾಕಿದ್ದ ಬೀಗವನ್ನು ಒಡೆಯಲಾಗಿತ್ತು. ವಿಜಯಾನಂದ ಕಾಶಪ್ಪನವರ್ ಸೂಚನೆಯಂತೆ ಮತ್ತೆ ಬೀಗ ಹಾಕಲಾಗಿದೆ.

ಮಠದ ಒಳಗೆ ಇರುವ ಶಾಲೆಗೆ ರಜೆ ನೀಡಲಾಗಿದೆ. ಬೀಗ ಹಾಕಿದ ಪ್ರಕರಣದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ಸಭೆಯಲ್ಲಿ ಶ್ರೀಗಳು ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವವರೆಗೂ ಪೀಠಕ್ಕೆ ಬರಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version