ಸೌಜನ್ಯ ಪ್ರಕರಣ: ಧರ್ಮಸ್ಥಳ ಕ್ಷೇತ್ರ, ಜೈನ ಸಮುದಾಯದ ವಿರುದ್ಧ ಆರೋಪ ಖಂಡನೀಯ

0
18

ಮಂಗಳೂರು: ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ ಬಳಿಕವೂ ಕೆಲವರು ಧರ್ಮಸ್ಥಳ ಕ್ಷೇತ್ರ ಹಾಗೂ ಜೈನ ಸಮುದಾಯದ ಕೆಲವರ ವಿರುದ್ಧ ಆರೋಪ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರವೂ ಸಮಾಜದ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಆ ಕ್ಷೇತ್ರದ ವಿರುದ್ಧ ಆರೋಪ ಮಾಡಿ ಮುಗ್ಧ ಜನರನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಕೆ ಮಾಡುತ್ತಿದ್ದಾರೆ. ಮಾಧ್ಯಮ, ಸಮಾಜದ ಮುಂದೆ ಆರೋಪ ಮಾಡುತ್ತಿರುವ ವ್ಯಕ್ತಿ ಸಿಬಿಐ ತನಿಖೆ ನಡೆಸುತ್ತಿರುವಾಗ ಯಾಕೆ ಸಾಕ್ಷ್ಯ ಹೇಳಿಕೆ ಹಿಂದೇಟು ಹಾಕಿದರು. ಇವರ ಸುದ್ದಿ, ಆರೋಪಗಳನ್ನು ಸಿಬಿಐಯವರು ಗಮನಿಸಿದ್ದಾರೆ. ಯಾರ ಮೇಲೆ ಆರೋಪ ಮಾಡಲಾಗುತ್ತಿದೆಯೋ ಅವರು ಸೌಜನ್ಯ ಪ್ರಕರಣದ ತನಿಖೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಇದೀಗ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆ ವಿರುದ್ಧವೇ ಆರೋಪ ಹೊರಿಸುವುದು ಸಹನೀಯವಲ್ಲ ಎಂದರು.
ಕೊಲೆ ಆರೋಪ ಮಾಡುವ ವ್ಯಕ್ತಿಗಳಿಗೆ ನಿಜವಾಗಿಯೂ ಕಾಳಜಿಯಿದ್ದರೆ ಪ್ರಕರಣದ ನೈಜ ಆರೋಪಿಗಳ ಬಂಧನಕ್ಕೆ ಧರಣಿ ಕುಳಿತುಕೊಳ್ಳಲಿ, ಪೊಲೀಸ್ ತನಿಖಾ ವೈಫಲ್ಯ ವಿರುದ್ಧ ಹೋರಾಟ ಮಾಡಲಿ ಎಂದರು.
ಬೆಳ್ತಂಗಡಿಯ ಧೀರಜ್ ಜೈನ್ ಮಾತನಾಡಿ, ೨೦೧೪ರಲ್ಲಿ ಸಿಐಡಿ ಸಿಬಿಐ ತನಿಖಾ ಸಂಸ್ಥೆ ನಮ್ಮನ್ನು ಎರಡೆರಡು ಬಾರಿ ತನಿಖೆ ನಡೆಸಿದೆ. ಸಿಬಿಐ ತಂಡ ನಮ್ಮ ರಕ್ತ ಪರೀಕ್ಷೆ, ಡಿಎನ್‌ಎ, ಮಂಪರು ಪರೀಕ್ಷೆ, ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ವೈಜ್ಞಾನಿಕ ವಿಧಿವಿಧಾನ ಅನುಸರಿಸಿ ತನಿಖೆ ಮಾಡಿರುತ್ತಾರೆ. ನಮಗೆ ಎಷ್ಟು ಕಷ್ಟವಾದರೂ ತೊಂದರೆಯಿಲ್ಲ, ಅಮಾಯಕ ಹೆಣ್ಣು ಮಗಳೊಬ್ಬಳ ಸಾವಿಗೆ ನ್ಯಾಯ ಸಿಗಲಿ ಎಂಬ ನಿಟ್ಟಿನಲ್ಲಿ ಸಹಕಾರ ನೀಡಿದ್ದೆವು. ೨೦೧೫ರ ಸಿಬಿಐ ಚಾರ್ಜ್‌ಶೀಟ್‌ನಲ್ಲೂ ನಮ್ಮನ್ನು ಎಲ್ಲೂ ಆರೋಪಿಗಳು ಎಂದು ಉಲ್ಲೇಖಿಸಿಲ್ಲ. ಇಷ್ಟೆಲ್ಲ ತನಿಖೆಯಾಗಿ ಸಿಬಿಐ ಕೋರ್ಟ್ ನಮ್ಮನ್ನು ನಿರಪರಾಧಿಗಳೆಂದು ಆದೇಶ ನೀಡಿದ್ದರೂ ವಿನಾ ಕಾರಣ ನಮ್ಮ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾನತ್ತೂರಿಗೆ ಪ್ರಮಾಣಕ್ಕೆ ಬರಲಿ: ನಮ್ಮ ಮೇಲೆ ಆರೋಪ ಮಾಡುವ ವ್ಯಕ್ತಿ ನಿಜವಾಗಿಯೂ ಅವರ ಆರೋಪದಲ್ಲಿ ನೈಜತೆಯಿದ್ದರೆ ತುಳುನಾಡಿನ ಆರಾಧ್ಯ ಕ್ಷೇತ್ರವಾದ ಕಾನತ್ತೂರು ಕ್ಷೇತ್ರಕ್ಕೆ ೧೦ದಿನದೊಳಗೆ ಪ್ರಮಾಣಕ್ಕೆ ಬರಲಿ. ಈ ಹಿಂದೆಯೂ ಪ್ರಮಾಣಕ್ಕೆ ಕರೆದಾಗ ಆ ವ್ಯಕ್ತಿ ಬರಲಿಲ್ಲ. ಈಗ ಅವರೇ ಯಾವ ದಿನ ಅಂತ ಹೇಳಲಿ, ನಾವು ದೈವದ ಸಮ್ಮುಖದಲ್ಲಿ ಪ್ರಮಾಣ ಮಾಡುತ್ತೇವೆ, ಅವರೂ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸೆದರು. ಮಲ್ಲಿಕ್ ಜೈನ್, ಉದಯ ಜೈನ್ ಉಪಸ್ಥಿತರಿದ್ದರು

Previous articleಫಾರ್ಮಾ ಲ್ಯಾಬ್‌ನಲ್ಲಿ ಭಾರೀ ಸ್ಫೋಟ
Next articleಬಸ್‌ನಿಂದ ಆಯತಪ್ಪಿ ಬಿದ್ದು ಅಥಣಿ ಯೋಧ ಸಾವು