ರೈಲು ಸಿಬ್ಬಂದಿ ಕರ್ತವ್ಯಲೋಪ: ಶೌಚಾಲಯದಲ್ಲೇ ಉಳಿದ ಮೃತದೇಹ

0
13

ಮಂಗಳೂರು: ಮುಂಬಯಿ-ಮಂಗಳೂರು ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವ್ಯಕ್ತಿ ರೈಲಿನ ಶೌಚಾಲಯದಲ್ಲೇ ಮೃತಪಟ್ಟು ರೈಲಿನ ಸಿಬ್ಬಂದಿ ಗಮನಕ್ಕೇ ಬಾರದೆ ಮೃತದೇಹವು ಮತ್ತೆ ಅದೇ ರೈಲಿನಲ್ಲಿ ಮುಂಬಯಿಗೆ ಹೋದ ಹೃದಯಕಲಕುವ ಘಟನೆ ನಡೆದಿದೆ.
ಕಿನ್ನಿಗೋಳಿಯ ಮೆನ್ನಬೆಟ್ಟಿನವರಾದ ಮೋಹನ್ ಬಂಗೇರ(56) ಎಂಬವರು ಮುಂಬಯಿನಿಂದ ಊರಿಗೆ ಮರಳುವ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದು, ವಿಷಯ ಗೊತ್ತಾಗದೆ ಅವರ ಕುಟುಂಬದವರು ಮುಂಬಯಿವರೆಗೂ ಹುಡುಕಾಡಿದ್ದಾರೆ, ಆದರೆ ಅವರಿದ್ದ ಬೋಗಿಯ ಶೌಚಾಲಯ ಸಹಿತ ತಪಾಸಣೆ ಮಾಡಬೇಕಿದ್ದ ರೈಲು ಸಿಬ್ಬಂದಿ ಮಾತ್ರ ಕರ್ತವ್ಯಲೋಪ ಮಾಡಿದ್ದಲ್ಲದೆ ತಾವು ತಪಾಸಣೆ ಮಾಡಿದ್ದಾಗಿ ವರದಿ ಕೊಟ್ಟಿದ್ದಾರೆ.
ಮುಂಬಯಿನಿಂದ ಮೋಹನ್ ಬಂಗೇರ ಅವರು ಏ. 18ರ ಮುಂಬಯಿ ಸಿಎಸ್‌ಟಿ ಮಂಗಳೂರು ಜಂಕ್ಷನ್ ರೈಲಿನ ಬಿ-3 ಕೋಚ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಅವರನ್ನು ಕರೆದೊಯ್ಯಲು ಅವರ ಸೋದರ ಹಾಗೂ ಇತರರು ಸುರತ್ಕಲ್‌ನಲ್ಲಿ ಕಾಯುತ್ತಿದ್ದರು. ಆಗ ಮೋಹನ್ ಬಂಗೇರ ಅವರು ರೈಲಿನಲ್ಲಿ ನಾಪತ್ತೆಯಾದ ವಿಚಾರ ಅವರಿಗೆ ರೈಲಿನ ಟಿಟಿಇ ಮೂಲಕ ಫೋನ್‌ನಲ್ಲಿ ಸಿಕ್ಕಿದೆ. ಅವರು ಕುಳಿತಿದ್ದ ಜಾಗದಲ್ಲೇ ಬ್ಯಾಗ್, ಪರ್ಸ್ ಮತ್ತು ಮೊಬೈಲ್ ಸಿಕ್ಕಿತ್ತು. ಟಿಟಿಇಯಲ್ಲಿ ಈ ಕುರಿತು ಮಾತನಾಡಿದಾಗ, ಅವರು ಮೋಹನ್ ಬಂಗೇರರು ಕಂಕಾವಲಿ ಅಥವಾ ಮಡಗಾಂವ್‌ನಲ್ಲಿ ಇಳಿದು ಹೋದಂತಿದೆ, ಅಲ್ಲಿಯ ಸಿಸಿಟಿವಿ ಫೂಟೇಜ್ ನೋಡಿದರೆ ಗೊತ್ತಾಗಬಹುದು ಎಂದಿದ್ದರು. ಬಳಿಕ ಮೋಹನ್ ಕುಟುಂಬದವರು ಮಂಗಳೂರು ಜಂಕ್ಷನ್‌ಗೆ ತೆರಳಿ ಅಲ್ಲಿನ ಅಧಿಕಾರಿಗಳ ಸಲಹೆಯಂತೆ ರೈಲ್ವೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಈ ನಡುವೆ ಮುಂಬಯಿನಲ್ಲಿರುವ ಅವರ ಸಂಬಂಧಿಕರೂ ಹಲವು ಸ್ಟೇಷನ್‌ಗಳಲ್ಲಿ ಸಿಸಿಟವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ, ಎಲ್ಲೂ ಪತ್ತೆಯಾಗಲಿಲ್ಲ. ಮರುದಿನ ಮೋಹನ್ ಅವರ ಅಣ್ಣ ರಾಮ ಬಂಗೇರ ಅವರಿಗೆ ಮುಂಬಯಿ ಸಿಎಸ್‌ಟಿ ಸ್ಟೇಷನ್‌ನಿಂದ ಟಿಟಿಇ ಕರೆ ಮಾಡಿದ್ದು ಮೃತದೇಹ ರೈಲಿನ ಶೌಚಾಲಯದಲ್ಲಿ ಪತ್ತೆಯಾಗಿರುವುದನ್ನು ತಿಳಿಸಿದ್ದ. ತಮ್ಮನ ಮೃತದೇಹ ಮಂಗಳೂರಿಗೆ ರೈಲಿನ ಶೌಚಾಲಯದಲ್ಲೇ ಬಂದಿತ್ತು, ಆದರೆ ಸಿಬ್ಬಂದಿ ಸರಿಯಾಗಿ ಹುಡುಕಾಡದೆ ನಿರ್ಲಕ್ಷ್ಯ ತೋರಿದ್ದರು. ಒಂದು ವೇಳೆ ಅವರು ಜೀವಂತವಿದ್ದ ಸಣ್ಣ ಅವಕಾಶವಿದ್ದರೂ ಇಲ್ಲಿ ಬದುಕಿಸಬಹುದಿತ್ತು, ಆದರೆ
ಶೌಚಾಲಯ ತಪಾಸಣೆ ಮಾಡದೇ ಹೋದ ಕಾರಣ ಮೃತ ದೇಹ ಹಾಗೇ ಅದೇ ರೈಲಿನಲ್ಲಿ ಮುಂಬಯಿಗೆ ಮರಳಿದೆ.
ಮೃತದೇಹವನ್ನು ರೈಲಿನಲ್ಲೇ ಮತ್ತೆ ಹಿಂದೆ ಕಳುಹಿಸಲು, ಮರಣೋತ್ತರ ಪರೀಕ್ಷೆಗೆ ೧೦ ಸಾವಿರ ರೂ.ಗಳನ್ನು ಪಾವತಿಸಿದ್ದು ಏಜೆನ್ಸಿಯೊಂದು ಪ್ಯಾಕ್ ಮಾಡಿ ಕಳಿಸಿದೆ, ಆದರೆ ಪಾರ್ಸೆಲ್ ಇಲ್ಲಿಗೆ ಬರುವಾಗ ದೇಹ ಪೂರ್ಣ ಕೊಳೆತು ದುರ್ವಾಸನೆ ಬೀರಿತ್ತು. ಎಸಿ ಬೋಗಿಯಲ್ಲಿ ಸಂಚರಿಸುವವರಿಗೇ ಇಂತಹ ದುಃಸ್ಥಿತಿಯಾದರೆ ಹೇಗೆ? ರೈಲು ಸಿಬ್ಬಂದಿ ಇಷ್ಟು ನಿರ್ಲಕ್ಷ್ಯ ವಹಿಸಿದ್ದರಿಂದ ಹೀಗಾಗಿದೆ, ಇದಕ್ಕಾಗಿ ಪರಿಹಾರಕ್ಕೂ ಆಗ್ರಹಿಸಿ ದೂರು ಸಲ್ಲಿಸಿದ್ದೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Previous articleಸಿಡಿಲು ಬಡಿದು ಓರ್ವ ಮಹಿಳೆ, ಐದು ಕುರಿ ಸಾವು
Next articleಸುಡಾನ್‌ನಲ್ಲಿ ಸಿಲುಕಿದ್ದ ದಾವಣಗೆರೆಯ 33 ಜನ ಸುರಕ್ಷಿತ